೩. ಜೋಗುಳ- ಒಂದು ಶಬ್ಧ ಮಿಮಾಂಸೆ


ಚಿಕ್ಕ ಮಕ್ಕಳು ನಿದ್ದೆ ಹೋಗಲೆಂದು  ತೊಟ್ಟಿಲು ತೂಗುವಾಗ ತಾಯಂದಿರು  ಹಾಡುವ (ಅಥವಾ ಹಾಡುತಿದ್ದ) “ಜೋಗುಳ” ಎಂಬ ಮಧುರ ಪದದ ಮೂಲ ಏನು? ಮನಸ್ಸನ್ನು ಕಾಡಿದ ಈ ಪದಕ್ಕೆ ನನಗೆ ತಿಳಿದ ಕನ್ನಡದ ಪದಕೋಶಗಳಲ್ಲಿ ಹುಡುಕಾಡಿದರೂ ಜೋಗುಳದ ಪದಾರ್ಥ(ಪದ +ಅರ್ಥ ) ಹೊರತುಪಡಿಸಿ  ಮೂಲದ ಬಗ್ಗೆ ಯಾವುದೆ ಹೆಚ್ಚುವರಿ ಸೂಚನೆ ದೊರೆಯಲಿಲ್ಲ.

ಕನ್ನಡಕ್ಕೆ  ಹತ್ತಿರದಲ್ಲಿ ಇರುವ, ತುಳು ಭಾಷಿಕರಿಗೆ “ಜೋಗುಳ” (=ಮಕ್ಕಳ ನಿದ್ದೆ ಹಾಡು) ಎಂದಾಗ ಮೊದಲಿಗೆ ಮನಸಿಗೆ ಬರುವುದು ತುಳುವಿನ “ಜೋಕುಳು”(=ಮಕ್ಕಳು)  ಎಂಬ ಸಮಾಂತರ  ಧ್ವನಿಯ ಶಬ್ಧ. “ಜೋಕುಳು”  ಶಬ್ಧ ಕನ್ನಡದಲ್ಲಿ  ಈಗಂತೂ ಇದ್ದಂತಿಲ್ಲ; ಹಿಂದೆ ಒಂದಾನೊಂದು ಕಾಲದಲ್ಲಿ ಇದ್ದಿರಬಹುದು.  ಈ  ಎರಡು ಶಬ್ಧ ಗಳಿಗೆ ಏನಾದರೂ  ಹತ್ತಿರದ ಸಂಬಂಧವಿ(ದ್ದಿ)ರ ಬಹುದೆ? ತುಳುವಿನಲ್ಲಿ “ಜೋಗುಳ”  ಶಬ್ಧ ನಿಘಂಟಿನಲ್ಲಿ ಇದ್ದರೂ ಸಾಮಾನ್ಯವಾಗಿ ಬಳಕೆ ಕಡಿಮೆ. ತುಳುವಿನ “ಜೋಕುಳು(ಲು)” ಎಂಬುವುದು “ಜೋವುಕುಳು” (=ಜೀವಿಗಳು) ಎಂಬುದರ ಮೊಟಕುಗೊಳಿಸಿದ  ಪರ್ಯಾಯ ರೂಪ.  ತುಳುವಿನಲ್ಲಿ  “ಜೋವು”(=ಜೀವಿ , > ವ್ಯಕ್ತಿ) ಕ್ಕೆ ಹತ್ತಿರ ಇರುವ ಶಬ್ಧಗಳು “ಜೂವ” (=ಜೀವ), “ಜೂವನ” (=ಜೀವನ). ಒಂದು ವರ್ಗದ ತುಳುವರು “ಜೋವು” (=ಜೀವಿ) ಎಂಬ ಪದವನ್ನು ಹೆಣ್ಣು ಅಥವಾ ಹೆಣ್ಣುಮಗಳು ಎಂಬರ್ಥದಲ್ಲಿ ಬಳಸುತ್ತಾರೆ. ಉಳಿದವರು ಸ್ಪಷ್ಟವಾಗಿ  “ಆಂಜೋವು” (=ಗಂಡಸು : ಆಣ್+ಜೋವು=ಗಂಡು ಜೀವಿ) ಮತ್ತು ಪೊಂಜೋವು (=ಹೆಂಗಸು : ಪೊಣ್ಣು+ಜೋವು=ಹೆಣ್ಣು ಜೀವಿ) ಎಂದು ಪ್ರತ್ಯೇಕವಾಗಿ ಬಳಸುತ್ತಾರೆ.

ಏನೇ ಇರಲಿ, “ಜೋಗುಳ” ಮತ್ತು “ಜೋಕುಳು” ಈ ಎರಡು ಮಕ್ಕಳಿಗೆ  ಸಂಬಂಧಿಸಿದ  ಶಬ್ಧಗಳು  ಪರಸ್ಪರ  ಹತ್ತಿರದ ಬಾಂಧವರಂತೆ  ಕಂಡರೂ  ನೇರ ಸಂಬಂಧ  ಸಾಧಿಸುವುದು ಕಷ್ಟಕರ.

ಇನ್ನೊಂದು ಹಾದಿಯಲ್ಲಿ  ಜಿಜ್ಞಾಸೆಗೆ ಬಂದರೆ, ಜೋಗುಳ (ಜೋಗ+ಉಳ) ದಲ್ಲಿ ಬರುವ “ಜೋಗ” ಕನ್ನಡ-ತುಳು ಎರಡರಲ್ಲೂ ಸಮಾನಾರ್ಥಕ ಶಬ್ಧವಾಗಿದೆ. “ಜೋಗ” ಎಂಬ ಶಬ್ಧಕ್ಕೆ  ನಿಘಂಟಿನಲ್ಲಿ  ಜೈವಿಕ, ಲೌಕಿಕ ದಿಂದ ಹಿಡಿದು ಯೋಗ, ಭಾವಾವೇಶ, ಸಮಾಧಿ, ಆವೇಶ, ಉದ್ರೇಕ, ಧ್ಯಾನ, ಅಮಲು ಇತ್ಯಾದಿ ಅರ್ಥಗಳಿವೆ. ಇದರಲ್ಲಿ  ‘ಅಮಲು’ ಎಂಬ ಅರ್ಥವಿದ್ದ ಮೇಲೆ  ನಿಘಂಟಿನಲ್ಲಿ ಹೇಳಿರದ ‘ನಿದ್ದೆ’ ಎಂಬ ಅರ್ಥವೂ ಇರಬಹುದು. ಇದನ್ನು ಬಳಸಿದರೆ ಜೋಗ+ಉಳ ಎಂದರೆ ನಿದ್ದೆ ಬರಿಸುವ ಹಾಡು (ಉಲಿ) ಎಂದು ಅರ್ಥೈಸಬಹುದಾಗಿದೆ. ಇದಕ್ಕೆ ಪೂರಕವಾಗಿ “ಜೋಜೋ” ಎಂದರೆ ಜೋಗುಳ, ತೊಟ್ಟಿಲು ಎಂಬ ಅರ್ಥಗಳಿರುವುದನ್ನು ಕಾಣಬಹುದು. ಅಲ್ಲದೆ, ತುಳುವಿನ ಮಕ್ಕಳ  ಆಡುಬಾಷೆಯಲ್ಲಿ “ಜೋಜ“ ಎಂದರೆ ನಿದ್ದೆ ಎಂಬ ಬಳಕೆ ಇದೆ.

ಒಟ್ಟಿನಲ್ಲಿ “ಜೋಗುಳ” ಎಂಬ ಪದದಲ್ಲಿ ಮಕ್ಕಳಿಗೆ ನಿದ್ದೆ ಬರಿಸುವ ಹಾಡು ಎಂಬ ಅರ್ಥ ಅಡಗಿಕೊಂಡಿದೆ.

Comments

  1. ಲೇಖನ ತುಂಬಾ ಚೆನ್ನಾಗಿದೆ .
    ನಾವು ಜೋಜ ಅನ್ನುವುದು ದೇವರಿಗೆ ,, ಚಾಚಿ ಅಥವಾ ಚೋಚಿ ಅಂತ ನಿದ್ದೆ , ನಿದ್ದೆ ಮಾಡುವುದಕ್ಕೆ ಹೇಳ್ತೇವೆ .:)

    ReplyDelete

Post a Comment

Popular posts from this blog

15. ದಕ್ಕಣ ಪೀಠಭೂಮಿ ಮತ್ತು ದಕ್ಕಣ ಟ್ರಾಪ್ಸ್( ಲಾವಾಭೂಮಿ)

13.ಮೂಲದ್ರಾವಿಡ ಭಾಷೆ -ಪ್ರೊಟೊ ದ್ರಾವಿಡಿಯನ್.