15. ದಕ್ಕಣ ಪೀಠಭೂಮಿ ಮತ್ತು ದಕ್ಕಣ ಟ್ರಾಪ್ಸ್( ಲಾವಾಭೂಮಿ)




"ಡೆಕ್ಕನ್" (Deccan ) ಪದ.

ಭಾರತದ ದಕ್ಷಿಣ ಭಾಗವನ್ನು "ದಕ್ಕಣ" ವೆಂದು ಕರೆಯುವುದು ನಮ್ಮಲ್ಲಿ ಹಿಂದಿನಿಂದ ಬಂದ ರೂಡಿ. ಇದು ಪ್ರಾಕೃತ ಭಾಷೆಯ ಮೂಲದ ಪದ. "ದಖ್ಖಣ" ಎಂದೂ ಕೂಡಾ ಬರೆಯುವುದುಂಟು. ಇಂಗ್ಲೀಷಿನಲ್ಲಿ "ಡೆಕ್ಕನ್" ಆಗಿದೆ.

"ಪ್ರಸ್ಥ ಭೂಮಿ" (plateu) ಎಂದರೆ ಎತ್ತರವಾದ ಭೂಭಾಗ ಅಥವಾ ಪ್ರದೇಶ. "ಪೀಠಭೂಮಿ" ಎನ್ನುವ ಪದ ಕೂಡಾ ಬಳಕೆಯಲ್ಲಿದೆ. ಭೌಗೋಳಿಕವಾಗಿ, ದಕ್ಷಿಣ ಭಾರತದ ಹೆಚ್ಚಿನ ಪ್ರದೇಶವು ಸರಾಸರಿ ಸಮುದ್ರ ಮಟ್ಟಕ್ಕಿಂತ ಬಹಳಷ್ಟು ಎತ್ತರವಾಗಿರುವುದರಿಂದ ಇದಕ್ಕೆ "ದಕ್ಕಣ ಪ್ರಸ್ಥ ಭೂಮಿ" ಅಥವಾ "ದಕ್ಕಣ ಪೀಠಭೂಮಿ" (Deccan plateau) ಎನ್ನುವ ಹೆಸರು ರೂಡಿಯಲ್ಲಿದೆ. ಇದೇ ದಕ್ಕಣ ಪೀಠಭೂಮಿಗೆ ಭಾರತದ ಪರ್ಯಾಯ ದ್ವೀಪ (Peninsular India) ಎನ್ನುವ ಹೆಸರಿದೆ ಪ್ರಾಚೀನ ಕಾಲದಲ್ಲಿ ಜಂಬೂದ್ವೀಪ ಎಂಬ ಹೆಸರು ರೂಡಿಯಲ್ಲಿತ್ತು.

**

ದಕ್ಕಣ ಪ್ರಸ್ಥ ಭೂಮಿ

ಭೂವಿಜ್ಞಾನಿಗಳು ಈ ದಕ್ಕಣ ಪೀಠಭೂಮಿಯನ್ನು ದಕ್ಕಣದ ಗುರಾಣಿ ಪ್ರದೇಶ (shield area) ಅಥವಾ ಸ್ಥಿರಭೂಮಿ (craton) ಎಂದು ಕರೆಯುವುದುಂಟು. ಕಾರಣ ಇದು ಭೂಖಂಡಗಳ (continental) ಶಿಲಾವಲಯ (lithosphere) ಗಳನ್ನು ಪರಿಗಣಿಸಿದರೆ ಅತಿ ಪುರಾತನ ಹಾಗೂ ಸ್ಥಿರವಾದ ಭೂಭಾಗಗಳನ್ನು ಹೊಂದಿದೆ. ದಕ್ಕಣದ ಹೆಚ್ಚಿನ ಭಾಗ ಅತ್ಯಂತ ಪುರಾತನ ಪ್ರೀಕೇಂಬ್ರಿಯಾ ಶಿಲಾಸ್ತೋಮಗಳಿಂದ ಕೂಡಿದ್ದು ಭೂಕಂಪನ ಆಘಾತಗಳು ಕಡಿಮೆಯಾಗಿರುವ ಕಾರಣ ಸ್ಥಿರಭೂಮಿ ಎಂದು ಪರಿಗಣಿಸಲಾಗಿದೆ. ಬ್ರಿಟಿಷರ ಆಡಳಿತ ಕಾಲದಲ್ಲಿ ಖನಿಜ ನಿಕ್ಷೇಪಗಳ ಮತ್ತು ಭೂವಿಜ್ಞಾನದ ಅಧ್ಯಯನಗಳಿಗೆಂದು ೧೮೯೪ರಲ್ಲಿ "ಮೈಸೂರು ಭೂವಿಜ್ಞಾನ ಇಲಾಖೆ" (Mysore Geological Department) ಸ್ಥಾಪನೆಯಾಗಿತ್ತು. ಆಗ ಮೊದಲಿಗೆ ಧಾರವಾಡದ ಸುತ್ತಮುತ್ತ ಕಂಡುಬರುವ ಅತಿ ಪುರಾತನ ಪ್ರೀಕೇಂಬ್ರಿಯನ್ (Precambrian) ಯುಗಕ್ಕೆ ಸೇರಿದ ಪದರುಶಿಲೆಗಳನ್ನು ಅಧ್ಯಯನ ಮಾಡಿದ ಬ್ರಿಟಿಷ್ ಮತ್ತು ಕರ್ನಾಟಕ ಮೂಲದ ಭೂವಿಜ್ಞಾನಿಗಳು ಇವಕ್ಕೆ ಧಾರವಾಡ ಪದರಶಿಲೆಗಳೆಂದು ಹೆಸರು ಕೊಟ್ಟರು. ಅದೇ ಹೆಸರು ಮುಂದುವರಿದು ದಕ್ಕಣ ಪೀಠಭೂಮಿಗೆ ಭೂವಿಜ್ಞಾನದ ಪರಿಬಾಷೆಯಲ್ಲಿ ಬಹಳ ವರ್ಷಗಳ ವರೆಗೆ "ಧಾರವಾಡ ಸ್ಥಿರಭೂಮಿ" (Dharwar craton) ಎನ್ನುವ ಹೆಸರು ರೂಡಿಯಲ್ಲಿತ್ತು. ನಾಲ್ಕು ದಶಕಗಳ ಹಿಂದೆ "ಧಾರವಾಡ ಸ್ಥಿರಭೂಮಿ"ಯ ಹೆಸರು ಬದಲಿಸಿ "ಕರ್ನಾಟಕ ಸ್ಥಿರಭೂಮಿ" (Karnataka craton) ಎಂಬ ಹೆಸರನ್ನು ರೂಡಿಗೆ ತಂದಿದ್ದಾರೆ.

ದಕ್ಕಣ ಪೀಠಭೂಮಿಯ ಅಥವಾ ಕರ್ನಾಟಕ ಸ್ಥಿರಭೂಮಿಯ ಹೆಚ್ಚಿನ ಪದರುಶಿಲೆಗಳು ರೇಡಿಯೋಮೆಟ್ರಿಕ್ ಕಾಲನಿರ್ಣಯಗಳ ಅನುಸಾರ ೨೬೦ ಕೋಟಿ ವರ್ಷಗಳ ಹಿಂದಿನ ಕಾಲದಲ್ಲಿ ಹುಟ್ಟಿಕೊಂಡವಾಗಿದೆ. ಇವುಗಳ ನಡುವೆ ಇರುವ ಕೆಲವು ಪುರಾತನ  ನೈಸ್ gneiss ಶಿಲಾ ಪ್ರಭೇಧಗಳು ೩೩೦ ಕೋಟಿ ವರ್ಷಗಳಿಂದ ಹಿಂದಿನವು! ಹಾಸನದ ಗೋರೂರು ಮತ್ತು ಗೋವಾಬಳಿಯ ಅನ್ಮೋಡ್ ಪ್ರದೇಶದ ನೈಸ್ ಶಿಲೆಗಳು ೩೩೦-೩೪೦ ಕೋಟಿ ವರ್ಷಗಳಷ್ಟು ಹಳೆಯವು.

=ಚಿತ್ರ: ದಕ್ಕಣ ಪ್ರಸ್ಥ ಭೂಮಿ ಮತ್ತು ದಕ್ಕಣ ಲಾವಾ (ಟ್ರಾಪ್ಸ್)

**

ದಕ್ಕಣ ಲಾವಾ (ಟ್ರಾಪ್ಸ್)

ಸುಮಾರು ೬ ಕೋಟಿ ವರ್ಷಗಳ ಹಿಂದೆ ಭರತ ಖಂಡದ ಭೂ ಫಲಕ (Indian plate) ನಿಧಾನವಾಗಿ ಉತ್ತರದಿಕ್ಕಿಗೆ ಚಲಿಸುತಿದ್ದಂತೆ, ಈಗಿನ ಮಹಾರಾಷ್ಟ್ರದ ಭಾಗದಲ್ಲಿ ಶಿಲಾವಲಯ ಒಡೆದು, ಜ್ವಾಲಾಮುಖಿಗಳ ಮೂಲಕ ಸುಡುವ ಉಷ್ಣತೆಯ ಲಾವಾ ರಸ (ಕರಗಿದ ಶಿಲಾರಸ) ಹೊರಗೆ ಚಿಮ್ಮಲಾರಂಬಿಸಿತು. ಆಗಾಧ ಪ್ರಮಾಣದ ಲಾವಾರಸ ಭೂಮಿಯ ಮೇಲ್ಭಾಗದಲ್ಲಿ ಹರಿದು ಕಾಲಕ್ರಮೇಣ ತಣಿದು ಬಸಾಲ್ಟ್ (Basalt) ಪ್ರಭೇಧದ ಜ್ವಲ ಶಿಲೆಗಳ (volcanic rocks) ಹರವು ಉಂಟಾಯಿತು. ಈ ಜ್ವಲಶಿಲಗಳ ಪದರ ದಕ್ಕಣದ ಉತ್ತರಭಾಗದ ವಿಶಾಲ ಪ್ರದೇಶದಲ್ಲಿ ವ್ಯಾಪಿಸಿದ್ದು ಮಹಾರಾಷ್ಟ್ರದ ಹೆಚ್ಚಿನ ಭಾಗ, ಉತ್ತರ ಕರ್ನಾಟಕದ ಮತ್ತು ಮಧ್ಯಪ್ರದೇಶದ ಭಾಗಗಳನ್ನು ಆವರಿಸಿಕೊಂಡಿದೆ. ಈ ಬಗೆಯ ಜ್ವಲಶಿಲೆಗಳ ಸ್ತರಗಳಿಗೆ ಅಶಿಷ್ಟ (slang) ಭಾಷೆಯಲ್ಲಿ "ಟ್ರಾಪ್ಸ್" ಎನ್ನುವುದುಂಟು. ಅಲ್ಲದೆ ಸ್ವೀಡಿಷ್ ಭಾಷೆಯಲ್ಲಿ ಟ್ರಾಪ್ಪಾ ಎಂದರೆ ಮೆಟ್ಟಲುಗಳು. ದಕ್ಕಣ ಲಾವಾ ಶಿಲಾ ಪದರಗಳು ಪರಿಸರದ ಹೊಡೆತದಿಂದ ಸವಕಳಿ ಹೊಂದಿ ಮೆಟ್ಟಲಿಗಳಂತೆ ಕಾಣುವುದರಿಂದ ಈ "ಟ್ರಾಪ್" ಎಂಬ ಹೆಸರು ಬಂದಿದೆ ಎನ್ನಲಾಗಿದೆ. ಒಟ್ಟಿನಲ್ಲಿ ಈ ಜ್ವಲಶಿಲೆಗಳ ಹರಡಿಕೆಗೆ ದಕ್ಕಣ ಟ್ರಾಪುಗಳು (Deccan traps) ಅಥವಾ ದಕ್ಕಣ ಬಸಾಲ್ಟುಗಳು (Deccan basalts) ಎಂಬ ಹೆಸರು ರೂಡಿಯಲ್ಲಿದೆ.

ದಕ್ಕಣ ಲಾವಾ/ಟ್ರಾಪ್ಸ್ ಹರಡಿರುವ ಪ್ರದೇಶವು ಕೂಡಾ ದಕ್ಕಣ ಪ್ರಸ್ಥಭೂಮಿಯ ಒಂದು ಭಾಗವಾಗಿದೆ.

**

ದಕ್ಕಣ ಪ್ರಸ್ಥ ಭೂಮಿ ಇಡಿಯ ದಕ್ಕಣ (ದಕ್ಷಿಣ ಭಾರತ)ವನ್ನು ಆವರಿಸಿದ್ದರೆ, ದಕ್ಕಣ ಲಾವಾ (ಅಥವಾ ಟ್ರಾಪ್ಸ್) ಮಹಾರಾಷ್ಟ್ರದ ಹೆಚ್ಚಿನ ಭಾಗ ಮತ್ತು ಅಸುಪಾಸಿನ ಕರ್ನಾಟಕ, ಮಧ್ಯಪ್ರದೇಶ ಗುಜರಾತಿನ ಭಾಗಗಳನ್ನು ಆವರಿಸಿರುವ ದಟ್ಟ ಕಪ್ಪು ಬಣ್ಣದ "ಬಸಾಲ್ಟ್" ಎಂಬ ಹೆಸರಿನ ಜ್ವಾಲಾಮುಖಿಗಳಿಂದ ಲಾವಾ ರಸದ ರೂಪದಲ್ಲಿ ಹೊರಚಿಮ್ಮಿ ಕ್ರಮೇಣ ಗಟ್ಟಿಯಾಗಿರುವ ಜ್ವಲಶಿಲೆಗಳ ಪದರ. ದಕ್ಕಣ ಲಾವಾ ಮತ್ತು ಅದು ಹರಡಿರುವ ಪ್ರದೇಶ ಸುಮಾರು ೬ ಕೋಟಿ ವರ್ಷಗಳ ಹಿಂದೆ ಹುಟ್ಟಿದ್ದರೆ, ಇಡಿಯ ದಕ್ಕಣ ಪೀಠಭೂಮಿ ಸರಾಸರಿ ೨೦೦ ಕೋಟಿ ವರ್ಷಗಳಿಂದಲೂ ಪುರಾತನವಾಗಿದೆ.

**

ದಕ್ಕಣ ಟ್ರಾಪ್ಸ್/ ಲಾವಾ ವಲಯದ ಹೊರಗಿನ ದಕ್ಕಣ ಪೀಠಭೂಮಿಯಲ್ಲಿ ಪುರಾತನ ಕಾಲದ ಬಸಾಲ್ಟ್ ಶಿಲೆಗಳಿಲ್ಲವೇ?

(೧) ಹೌದು, ಇವೆ! .ಆದರೆ ಅವು ಭೌಗೋಳಿಕವಾಗಿ ದಕ್ಕಣ ಲಾವಾ ದಷ್ಟು ವಿಶಾಲ ಪ್ರದೇಶದಲ್ಲಿ ಹರಡಿಕೊಂಡಿಲ್ಲ. (೨) ಪುರಾತನ ಪ್ರಿಕೇಂಬ್ರಿಯಾ ಕಾಲದ ಬಸಾಲ್ಟ್ ಮತ್ತಿತರ ಜ್ವಲಶಿಲೆಗಳು ರೂಪಾಂತರಹೊಂದಿದ ಶಿಲೆಗಳಾಗಿವೆ (metamorphosed rocks). ಇಂತಹ ರೂಪಾಂತರಿತ ಬಸಾಲ್ಟ್ ಶಿಲೆಗಳನ್ನು ("ಮೆಟ-ಬಸಾಲ್ಟ್ ಶಿಲೆಗಳು) ಎನ್ನುತ್ತಾರೆ. ಪದರುಶಿಲೆಗಳಲ್ಲಿ

ಮುಖ್ಯವಾಗಿ ಚಿಕ್ಕಮಗಳೂರು (ವಿಶೇಷವಾಗಿ ಕುದುರೆಮುಖ, ಬಾಬಾಬುಡಾನ್), ಕೋಲಾರ, ಶಿವಮೊಗ್ಗ, ಚಿತ್ರದುರ್ಗ, ಹಾವೇರಿ, ಧಾರವಾಡ, ಮತ್ತು ಬಳ್ಳಾರಿ ಜಿಲ್ಲೆಗಳ ಭಾಗಗಳಲ್ಲಿ ಕಾಣಬಹುದು. ಕೋಲಾರ ಮತ್ತು ಹಟ್ಟಿಯ ಚಿನ್ನದ ನಿಕ್ಷೇಪಗಳು, ಕುದುರೆಮುಖ, ಬಾಬಾಬುಡಾನಿನ , ಸಂಡೂರಿನ ಕಬ್ಬಿಣದ ಅದುರಿನ ನಿಕ್ಷೇಪಗಳು ಇಂತಹ ಮೆಟಬಸಾಲ್ಟ್ ಶಿಲೆಗಳಲ್ಲಿ ಅಡಕವಾಗಿವೆ.

**



ಚಿತ್ರ: ಸೈಂಟ್ ಮೇರಿದ್ವೀಪಗಳ ಕಂಬಾಕಾರದ ಜ್ವಲಶಿಲೆಗಳು, ಉಡುಪಿ ಜಿಲ್ಲೆ


ಸೈಂಟ್ ಮೇರಿದ್ವೀಪಗಳು- ಜ್ವಲಶಿಲೆಗಳು-

ಪಡುವಣ ಕರಾವಳಿಯ ಉಡುಪಿ-ಮಲ್ಪೆಯಿಂದಾಚೆಗೆ ಅರಬಿ ಕಡಲ ಒಡಲ ಒಳಗಿರುವ ದ್ವೀಪಗಳು - ಸೈಂಟ್ ಮೇರಿ ದ್ವೀಪಗಳು. ಈ ಹೆಸರು ಕೊಟ್ಟವನು ಪೋರ್ಚುಗೀಸ್ ನಾವಿಕ ವಾಸ್ಕೋಡಗಾಮ (೧೪೯೬). ಸೈಂಟ್ ಮೇರಿ ದ್ವೀಪಗಳಲ್ಲಿ ಡೇಸಯಿಟ್ ಪ್ರಭೇಧದ ಜ್ವಲಶಿಲೆಗಳು- ಜೋಡಿಸಿಟ್ಟ ಕಂಬಗಳಂತೆ ತಣಿದು ಗಟ್ಟಿಯಾಗಿ ನಿಂತಿರುವುದನ್ನು ಕಾಣಬಹುದು. ಈ ಜ್ವಲಶಿಲೆಗಳು ಸುಮಾರು ೧೦ ಕೋಟಿ ವರ್ಷಗಳ ಹಿಂದೆ ಉಗಮಿಸಿವೆ. ಇಲ್ಲಿ ಲಾವಾರಸವು ನಿಧಾನವಾಗಿ ತಣಿದಿರುವ ಕಾರಣ ಗಟ್ಟಿಯಾದ ಜ್ವಲಶಿಲೆಗಳು ಕಂಬಗಳ ರೂಪದಲ್ಲಿ ಕಾಣುವಂತೆ ಊರ್ಧ್ವ ಸೀಳಿಕೆಗಳು ಉಂಟಾಗಿವೆ. ಅಂದರೆ ಸೈಂಟ್ ಮೇರಿದ್ವೀಪದ ಶಿಲೆಗಳು ವಯಸ್ಸಿನಲ್ಲಿ ದಕ್ಕಣ ಪ್ರಸ್ಥಭೂಮಿಯ ಜ್ವಲಶಿಲೆಗಳಿಂದ ಕಿರಿಯವು: ದಕ್ಕಣ ಬಸಾಲ್ಟ್ ಶಿಲೆಗಳಿಂದ ಹಿರಿಯವು.

**

ಕರುನಾಡು

ಉತ್ತರ ಕರ್ನಾಟಕದ ಹೆಚ್ಚಿನ ಭಾಗ ಕಪ್ಪು ಮಣ್ಣಿನಿಂದ ಆವರಿಸಿಕೊಂಡಿದೆ. ಈ ಕಪ್ಪು ಮಣ್ಣು ಹುಟ್ಟಲು ಕಾರಣ ದಕ್ಕಣ ಬಸಾಲ್ಟ್ ಜ್ವಲಶಿಲೆಗಳ ಶಿಥಿಲೀಕರಣ/ಸವಕಳಿ ಮತ್ತು ಸಾಗಾಣಿಕೆ. ಕರ್ನಾಟಕದ ಒಂದು ಹಳೆಯ ಹೆಸರು "ಕರುನಾಡು" ಈ ಕಪ್ಪು ಮಣ್ಣಿನಿಂದ ಬಂದಿರಬಹುದು. ತಾಗರ್ತಿ ಅಗ್ರಹಾರದ (ಸುಮಾರು ಸಾಮಾನ್ಯ ಶಕೆ ೩೫೦) ತಾಮ್ರಪಟದಲ್ಲಿ ಕಾರೆನಾಡ ಹೆಸರು ಉಕ್ತವಾಗಿದೆ.

Comments

Popular posts from this blog

೩. ಜೋಗುಳ- ಒಂದು ಶಬ್ಧ ಮಿಮಾಂಸೆ

13.ಮೂಲದ್ರಾವಿಡ ಭಾಷೆ -ಪ್ರೊಟೊ ದ್ರಾವಿಡಿಯನ್.