13.ಮೂಲದ್ರಾವಿಡ ಭಾಷೆ -ಪ್ರೊಟೊ ದ್ರಾವಿಡಿಯನ್.
ಮೂಲದ್ರಾವಿಡ ಭಾಷೆ ( ಅಥವಾ ಆದಿದ್ರಾವಿಡ / ಪ್ರೊಟೊ ದ್ರಾವಿಡಿಯನ್ - Proto-Dravidian) ಎನ್ನುವುದು ಒಂದು ಪರಿಕಲ್ಪನೆ.
ಹಲವಾರು ಸಮಾನ ಲಕ್ಷಣಗಳು ಇರುವಂತಹ ವಿವಿಧ ದ್ರಾವಿಡ ಭಾಷೆಗಳು ಒಂದು ಪ್ರಾಚೀನ ಮೂಲಭಾಷೆಯಿಂದ ಉಗಮವಾಗಿ ಕಾಲಾಂತರದಲ್ಲಿ ವಿಕಾಸವಾಗಿವೆ ಎನ್ನುವ ಸಾಮಾನ್ಯ ಸಿದ್ದಾಂತದ ಆಧಾರದಲ್ಲಿ ಈ ಪರಿಕಲ್ಪನೆ ನಡೆದು ಬಂದಿದೆ.
ಮೂಲದ್ರಾವಿಡದವು ಎಂದು ಆಯ್ಕೆ ಮಾಡಿಕೊಂಡಿರುವ ಪದಗಳಲ್ಲಿ ಹೆಚ್ಚಿನವನ್ನು ತಮಿಳು ಭಾಷೆಯಿಂದ ಆಯ್ದುಕೊಂಡಿದ್ದಾರೆ. ಹಾಗಿದ್ದ ಮೇಲೆ ಇವುಗಳು ತಮಿಳಿಗೆ ಹೋಲುವುದು,ಹೊಂದಿಕೆಯಾಗುವುದು ಖಚಿತ ಅಲ್ಲವೇ?
ಇಲ್ಲಿ ಒಂದು ವಿಚಾರ:ಮೂಲದ್ರಾವಿಡದ ಪದಗಳು ಎಂದು ಬರೆಯುತ್ತಿರುವ ಪದಗಳನ್ನು ಗಮನಿಸಿದ್ದೀರಾ? ಆ ಪದಗಳ ಆದಿಯಲ್ಲಿ ಒಂದು ನಕ್ಷತ್ರ (*) ಅಥವಾ # ಅಥವಾ ? ಚಿಹ್ನೆಗಳಿರುವುದನ್ನು ಗಮನಿಸಿ. ಇದರ ಅರ್ಥ -ಈ ಪದ ಸಂಭಾವ್ಯ ಮೂಲ ಪದ ಎಂದು!
ಆದಿಮಾನವರು ಒಂದು ಕಾಲದಲ್ಲಿ ಮೂಲದ್ರಾವಿಡ ಭಾಷೆ ಮಾತಾನಾಡುತಿದ್ದುದಾದರೆ, ಅದರ ಸ್ಥಿತಿಗತಿಗಳ ಸ್ಪಷ್ಟ ದಾಖಲೆಗಳಿಲ್ಲ. ಆದುದರಿಂದ ಹೇಗೆ ಇದ್ದಿರಬಹುದು ಎಂದು ಊಹಿಸಬೇಕಾಗುತ್ತದೆ. ಈ ಅನಿರ್ದಿಷ್ಟತೆಯನ್ನು ಸೂಚಿಸಲು ಪದದ ಆರಂಭದಲ್ಲಿ ಒಂದು ಚಿಹ್ನೆಯನ್ನು(*/?/# ಇತ್ಯಾದಿ) ಸೇರಿಸುತ್ತಾರೆ.
**
ದಕ್ಷಿಣ ಭಾರತದ ಪಂಚದ್ರಾವಿಡ ಭಾಷೆಗಳು (ಕನ್ನಡ, ತಮಿಳು, ತುಳು, ತೆಲುಗು, ಮಲಯಾಳಂ - ಅಕಾರಾದಿಯಾಗಿ) ಅನೇಕ ಸಾಮ್ಯತೆಗಳನ್ನು ಹೊಂದಿವೆ ಎಂದು ಮೊದಲಿಗೆ ಸೂಚಿಸಿದವರು ರಾಬರ್ಟ್ ಕಾಲ್ಡ್'ವೆಲ್ ( Bishop Robert Caldwell : ಜನನ: 7 ಮೇ 1814 – ಮರಣ: 28 ಆಗಸ್ಟ್ 1891) ಎಂಬ ಮಹಾಶಯರು. ಇಂಗ್ಲೇಂಡಿನಿಂದ ಭಾರತಕ್ಕೆ ಬಂದು ತಮಿಳು ಕಲಿತು ತಮಿಳುನಾಡಿನ ಚರ್ಚುಗಳಲ್ಲಿ ಪಾದ್ರಿಯಾಗಿ ಸೇವೆ ಸಲ್ಲಿಸಿದರು. ತಮಿಳುನಾಡಿನ ತಿರುನೆಲ್ವೇಲಿಯಲ್ಲಿ ೧೮೭೭ ರಲ್ಲಿ ಬಿಷಪ್ ಆಗಿ ಕಾರ್ಯನಿರ್ಹಿಸಿದರು.ಇವರು ದ್ರಾವಿಡ ಭಾಷೆಗಳ ಪರಿಕಲ್ಪನೆಯನ್ನು ಮೊದಲು ಮಂಡಿಸಿದವರು. ದ್ರಾವಿಡ ಭಾಷೆಗಳ ಕೂಲಂಕಷ ಅಧ್ಯಯನದಿಂದ ಅವರಿಗೆ ಈ ಭಾಷೆಗಳ ನಡುವೆ ಇರುವ ಸಾಮ್ಯತೆ ಹೊಳೆಯಿತು. ಅವರು ೧೮೫೬ ರಲ್ಲಿ ದ್ರಾವಿಡ ಭಾಷೆಗಳ ತುಲನಾತ್ಮಕ ಅಧ್ಯಯನ ನಡೆಸಿ ಪ್ರಕಟಿಸಿದರು.[A Comparative Grammar Of Dravidian or South Indian Family of Languages]. ದ್ರಾವಿಡ ಭಾಷೆಗಳು ಎನ್ನುವ ಪರಿಕಲ್ಪನೆಯನ್ನು ರೂಪಿಸಿದವರು ರಾಬರ್ಟ್ ಕಾಲ್ಡ್'ವೆಲ್.
.
![]() |
| ರಾಬರ್ಟ್ ಕಾಲ್ಡವೆಲ್ ಚಿತ್ರ |
=
ದಕ್ಷಿಣ ಭಾರತದ ಕೊಡಗು, ತೋಡ, ಬೆಳ್ಳಾರ, ಬೆಟ್ಟಕುರುಂಬ ಇತ್ಯಾದಿ ಸೀಮಿತ ಭೌಗೋಳಿಕ ವ್ಯಾಪ್ತಿಯ ಹಾಗೂ ಆದಿವಾಸಿಗಳ ಭಾಷೆಗಳೂ, ಮಧ್ಯ ಭಾರತದ ಆದಿವಾಸಿಗಳ ಹಲವಾರು ಭಾಷೆಗಳು ಗೊಂಡಿ, ಕುವಿ,ಕುಯಿ ಇತ್ಯಾದಿ ಹಾಗೆಯೇ ಉತ್ತರ ಭಾರತದ ಕುರುಖ್.. ವಾಯುವ್ಯ ಭಾರತದ/ ಈಗಿನ ಪಾಕಿಸ್ಥಾನದಲ್ಲಿರುವ ಬ್ರಾಹುಯಿ ಭಾಷೆಗಳು ಕೂಡಾ ದ್ರಾವಿಡ ಭಾಷೆಗಳ ಸ್ಥೂಲವಾದ ಗುಣಧರ್ಮಗಳಿಗೆ ಹೋಲುವುವೆಂದು ತಿಳಿಯಲಾಯಿತು.
ಭೌಗೋಳಿಕವಾಗಿ ಹರಡಿಕೊಂಡಿರುವ ಇಷ್ಟೊಂದು ಬಗೆಯ ವೈವಿಧ್ಯಮಯ ಭಾಷೆಗಳಲ್ಲಿ ಸಾಮ್ಯತೆಯ ಲಕ್ಷಣಗಳು ಇರುವುದಾದರೆ, ಪ್ರಾಚೀನಕಾಲದಲ್ಲಿ ಇವುಗಳಿಗೆ ಒಂದು ಮೂಲ ಭಾಷೆ ಇದ್ದಿರಬೇಕಲ್ಲ? ಅಥವಾ ಇವುಗಳು ಒಂದೇ ಮೂಲ ಭಾಷೆಯಿಂದ ಟಿಸಿಲು ಒಡೆದು ವಿಭಿನ್ನ ಭಾಷಗಳಾಗಿ ಬೆಳೆದು ಬಂದಿರಬೇಕಲ್ಲ? ಭಾಷಾವಿಜ್ಞಾನಿಗಳು ತಾರ್ಕಿಕವಾಗಿ ಅದನ್ನು ಮೂಲದ್ರಾವಿಡ ಭಾಷೆ ಎಂದೂ ಅದರಿಂದ ಈ ಎಲ್ಲಾ ದ್ರಾವಿಡ ಶೈಲಿಯ ಭಾಷೆಗಳು ಹುಟ್ಟಿ ವಿಕಾಸಗೊಂಡವು ಎಂಬ ನಿರ್ಧಾರಕ್ಕೆ ಬಂದರು.
![]() |
| ದಕ್ಷಿಣ ,ಮಧ್ಯ ಮತ್ತು ಉತ್ತರದ ದ್ರಾವಿಡ ಭಾಷೆಗಳು |
=
ತಮಿಳು
ಮೂಲದ್ರಾವಿಡ ಭಾಷೆ ಈಗ ಅಸ್ಥಿತ್ವದಲ್ಲಿ ಇಲ್ಲ. ಅದನ್ನು ಪುನಾರಚಿಸುವುದಕ್ಕೆ ಈ ಪಂಚ ಭಾಷೆಗಳಲ್ಲಿ ಇರುವ ಇದ್ದಿರಬಹುದಾದ ಅತೀ ಪ್ರಾಚೀನ ಎನಿಸುವ ಪದಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ವಿಚಾರದಲ್ಲಿ ಅದೃಷ್ಟವಂತ ಭಾಷೆ ತಮಿಳು. ಪಂಚದ್ರಾವಿಡ ಭಾಷೆಗಳಲ್ಲಿ ಅತಿ ಪ್ರಾಚೀನ ಸಾಹಿತ್ಯ ಇರುವುದು ತಮಿಳು ಭಾಷೆಯಲ್ಲಿ. ತಮಿಳಿನ ಮೌಕಿಕ ರೂಪದ ಸಂಗಂ ಸಾಹಿತ್ಯ ಹೆಚ್ಚುಕಡಿಮೆ ಸಾಮಾನ್ಯ ಶಕದ ಆರಂಭದಲ್ಲಿಯೆ ರಚನೆಯಾಗಿದ್ದು ಅನೇಕ ತಲೆಮಾರುಗಳ ಕಾಲಲ್ಲಿ ಬಾಯ್ದೆರೆಯಾಗಿ ಹರಿದು ತಮಿಳು ಲಿಪಿ ಅಸ್ಥಿತ್ವಕ್ಕೆ ಬಂದ ಮೇಲೆ ಗ್ರಂಥಸ್ಥ ವಾಗಿರುವ ಕಾರಣ, ಈ ಭಾಷೆಯಿಂದ ಅತೀ ಪ್ರಾಚೀನವೆನಿಸುವ ಆಯ್ದ ಧಾತು ಪದಗಳನ್ನು ಮೂಲದ್ರಾವಿಡ ಪದಗಳೆಂದು ಪರಿಗಣಿಸಿದ್ದಾರೆ. ಹಾಗಾಗಿ ತಾರ್ಕಿಕವಾದ ಮೂಲದ್ರಾವಿಡ ಬಾಷೆಯಲ್ಲಿ ಹೆಚ್ಚಿನ ಪದಗಳು ತಮಿಳು ಆಗಿವೆ. ರಾಬರ್ಟ್ ಕಾಲ್ಡ್'ವೆಲ್ ಮಹಾಶಯರಿಗೆ ತಮಿಳು ಪರಿಚಿತವಾಗಿದ್ದು ತಿಳಿದಿದ್ದ ಕಾರಣ ಕೂಡಾ ಪುನಾರಚಿತ ಮೂಲದ್ರಾವಿಡ ಭಾಷೆಯಲ್ಲಿ ತಮಿಳು ಮೂಲದ ಪದಗಳು ಅಗ್ರಸ್ಥಾನಗಳಿಸಲು ಸಹಾಯಕವಾಗಿದ್ದಿರಬಹುದು.
ಆದರೆ ಮೂಲದ್ರಾವಿಡವೆಂದು ಈಗಾಗಲೆ ಅಂಗೀಕರಿಸಿದ ತಮಿಳ ಪದಗಳು ಇತರ ದ್ರಾವಿಡ ಭಾಷೆಗಳ ಮೂಲದಲ್ಲಿ ಇರಲಿಲ್ಲ ಎನ್ನುವಂತಿಲ್ಲ.
ಪಂಚ ದ್ರಾವಿಡ ಭಾಷೆಗಳ ಭಿನ್ನತೆಗೆ ಒಂದು ಮುಖ್ಯ ಕಾರಣ ದ್ರಾವಿಡ ಕುಟುಂಬದ ಇತರ ದೊಡ್ಡ ಜನಸಂಖ್ಯೆಯ ಭಾಷೆಗಳು- ತೆಲುಗು, ಕನ್ನಡ ಮತ್ತು ಮಲಯಾಳಂ ವಿಭಿನ್ನ ವಿಕಾಸ ಪಥಗಳನ್ನು ಅನುಸರಿಸಿರುವುದು.
ಕನ್ನಡ
ಹಾಗೆ ನೋಡಿದರೆ ಕನ್ನಡ ಕದಂಬ-ಗಂಗ ಅರಸರ ಕೃಪೆಯಿಂದ ಮೊತ್ತಮೊದಲು ಸಾಮಾನ್ಯ ಶಕೆಯ ನಾಲ್ಕನೆ ಶತಮಾನದಲ್ಲಿಯೇ ತಮಿಳಿಗಿಂತ ಮೊದಲೇ ಲಿಪಿ ರೂಪಿಸಿಕೊಂಡು ಅಕ್ಷರಸ್ಥವಾದ ಭಾಷೆ. ಕನ್ನಡ ರೂಪುಗೊಳ್ಳುವ ಹಂತದಲ್ಲಿ ದಖ್ಖಣದಲ್ಲಿ ಅನೇಕ ಆದಿವಾಸಿ ಮೂಲದ ಭಾಷೆಗಳಿದ್ದವು. ಅವುಗಳಿಗೆ ಒಟ್ಟಾಗಿ ಪ್ರಾಕೃತ ಭಾಷೆಗಳೆಂದು ಗುರುತಿಸಿಕೊಂಡಿದ್ದಾರೆ.ಹಾಗೆಯೇ ಆದರೆ ಆಳಿದ ಅರಸರ ಒಲವು ಮತ್ತು ಭಕ್ತಿ ಆಗಿನ ಕಾಲದ ವಿಶಿಷ್ಟ ಗ್ರಂಥಸ್ಥ ಭಾಷೆ ಸಂಸ್ಕೃತದ ಕಡೆಗೆ ಇದ್ದ ಕಾರಣ ಕನ್ನಡ ಭಾಷೆ ಸಂಸ್ಕೃತದ ಪ್ರಭಾವದಿಂದ ಮೂಲದ್ರಾವಿಡ ದಾರಿಯಿಂದ ವಿಭಿನ್ನ ಪಥವನ್ನು ಅನುಸರಿಸಿ ಬೆಳೆದು ಬಂತು. ಸಂಸ್ಕೃತದ ವರ್ಣಮಾಲೆ ವ್ಯಾಕರಣದ ತತ್ವಗಳನ್ನು ಅನುಸರಿಸಿದ ಕಾರಣ ಕನ್ನಡ ವರ್ಣಮಾಲೆಗೆ ವಿಶಿಷ್ಟ ಪ್ರಬುದ್ದತೆ ಬಂದಿದೆ. ಇನ್ನೊಂದು ದೃಷ್ಟಿಯಿಂದ ನೋಡುವುದಾದರೆ ಸಂಸ್ಕೃತದ ವಿಕಾಸದ ಹಾಗೂ ಪ್ರಸಾರದಲ್ಲಿ ಕೂಡಾ ಪ್ರಾಚೀನ ಕನ್ನಡನಾಡು ವಿಶೇಷ ಪಾತ್ರವಹಿಸಿದೆ.
ತೆಲುಗು
ತೆಲುಗು ಭಾಷೆಯ ವಿಕಾಸದ ಪಥದಲ್ಲಿ ಎದುರಾದ ಪ್ರಭಾವಗಳು ಕನ್ನಡಕ್ಕಿಂತ ತುಸು ಭಿನ್ನವಾಗಿವೆ. ತೆಲುಗು ಸೀಮೆಗೆ ಮೂಲದ್ರಾವಿಡ ಪ್ರಾಕೃತ ಸಂಸ್ಕೃತ ಅಲ್ಲದೆ ಪೂರ್ವ ಕರಾವಳಿಯ ಮೂಲಕ ಆಗ್ನೇಯ ದೇಶಗಳ ಆದಿವಾಸಿಗಳ (ಆಸ್ಟ್ರೋ-ಆಸಿಯಾಟಿಕ್/ಮುಂಡಾ) ಭಾಷೆಗಳ ಸಂಪರ್ಕವೂ ಇತ್ತು. ಕನ್ನಡದ ರಾಜರು ತೆಲುಗು ಪ್ರದೇಶಗಳನ್ನು ಆಳಿದ ಕಾರಣ ತೆಲುಗು ಲಿಪಿ ಕನ್ನಡ ಲಿಪಿಯನ್ನು ಬಳಸಿಕೊಂಡು ತನ್ನದೇ ಆದ ಛಾಪುಗಳನ್ನು ರೂಡಿಸಿಕೊಂಡು ಬೆಳೆದು ಬಂದಿದೆ.
ಮಲಯಾಳಂ
ಆರಂಭದ ತಮಿಳು ಭಾಷೆಯ ಒಂದು ಪ್ರಭೇಧವಾಗಿ ನಂತರ ತಮಿಳಿನಿಂದ ಟಿಸಿಲು ಒಡೆದು, ಪ್ರತ್ಯೇಕವಾಗಿ, ಎರಡನೆ ಸಹಸ್ರಮಾನದ ಹೊತ್ತಿಗೆ ಅಂದು ಚಾಲ್ತಿಯಲ್ಲಿದ್ದ ಆರ್ಯೆಳುತ್ತು/ತಿಗಳಾರಿ ಲಿಪಿ ಪಡೆದು ಸ್ವತಂತ್ರವಾಗಿ ಬೆಳೆದು ಬಂತು.ಕರಾವಳಿ ಆದ ಕಾರಣ ಪ್ರಾಕೃತ ಮಾತ್ರವಲ್ಲ ಆಸ್ಟ್ರೋ-ಆಸಿಯಾಟಿಕ್/ಮುಂಡಾ) ಭಾಷೆಗಳ ದಟ್ಟ ಪ್ರಭಾವ ಇದೆ.ಆದಿ ಶಂಕರರ ಕಾಲದಿಂದಲೂ ಮಲಯಾಳಂ ಭಾಷೆಯ ಮೇಲೆ ಸಂಸ್ಕೃತದ ಪ್ರಭಾವ ಇದೆ.ಹಾಗೆಯೇ ಅರಬರ ಭಾಷೆ ಕ್ರಿಸ್ತ ಧರ್ಮಗಳ ಪ್ರಭಾವವೂ ಇದೆ.
ತುಳು
ಸಾಮಾನ್ಯ ಶಕೆಯ ಮೂರನೆ ಶತಮಾನದವರೆಗೂ ಹಳೆಯ ತುಳು ಮತ್ತು ಸಹ್ಯಾದ್ರಿ ಮಲೆನಾಡು ಭಾಗದ ಹಳೆಗನ್ನಡ ಭಾಷೆಗಳು ತುಂಬಾ ಸಾಮ್ಯತೆ ಹೊಂದದ್ದವು. ಕರಾವಳಿ-ಮಲೆನಾಡ ನಿಕಟ ಬಾಂಧವ್ಯಕ್ಕೆ ಒಂದು ಮುಖ್ಯಕಾರಣ ಕಡಲು ವ್ಯಾಪಾರಿಗಳು ಮಲೆನಾಡಿನ ಕಾಡು ಉತ್ಪನ್ನಗಳನ್ನು ವಸ್ತುಗಳನ್ನು ಸಂಗ್ರಹಿಸಿ ರಫ್ತು ವ್ಯಾಪಾರ ನಡೆಸುತಿದ್ದದ್ದು. ಶೆಟ್ಟರ್ ಅವರು ಕೂಡಾ ಅಭಿಪ್ರಾಯ ಪಟ್ಟಿರುವಂತೆ ಕಡಲು ವ್ಯಾಪಾರಿಗಳ ಪರಸ್ಪರ ಪೈಪೋಟಿ ಮತ್ತು ರಾಜಕೀಯ ಪಡುವಣ ಕರಾವಳಿಯಲ್ಲಿ ಕಡಲ ವ್ಯಾಪಾರಗಳಲ್ಲಿ ನಿರತರಾಗಿದ್ದ ಕದಂಬ-ಅಳುಪರನ್ನು ವಿದೇಶಿ ವರ್ತಕರ ಎದುರು ಕಡಲುಗಳ್ಳರಂತೆ ಬಿಂಬಿಸುವುದರಲ್ಲಿ ಇತರ ಕಡಲ ವ್ಯಾಪಾರಿಗಳು ಯಶಸ್ವಿಯಾಗಿರಬಹುದು.
ಅತ್ಯಂತ ಹಳೆಯ ದ್ರಾವಿಡ ಭಾಷೆ?
ತಮಿಳು ಅತ್ಯಂತ ಹಳೆಯ ದ್ರಾವಿಡ ಭಾಷೆ ಎಂದು ವಾದಿಸುವವರಿದ್ದಾರೆ. ಇದನ್ನು ಸಾರಸಗಟಾಗಿ ಒಪ್ಪುವಂತಿಲ್ಲ.
ಏಕೆಂದರೆ ಒಂದು ಮೂಲ ದ್ರಾವಿಡ ಭಾಷೆಯಿಂದ ರೆಂಬೆ ಒಡೆದು ಒಂದು ಭಾಗ ಮೂಲ ದಕ್ಷಿಣ ದ್ರಾವಿಡ ಭಾಷೆ ಅಸ್ಥಿತ್ವಕ್ಕೆ ಬಂತು, ಅದರಿಂದ ಹಲವು ಭಾಷೆಗಳು ಹುಟ್ಟಿಕೊಂಡವು ಎನ್ನುವುದಾದರೆ ಈ ಭಾಷೆಗಳು ಹೆಚ್ಚು ಕಡಿಮೆ ಒಂದೇ ಮೂಲ ಕಾಲಮಾನಕ್ಕೆ ಸೇರಬೇಕಲ್ಲ? ಬೇರೆ ಬೇರೆ ಹಂತಗಳಲ್ಲಿ, ಪ್ರಭಾವ-ಪರಿಸರಗಳಲ್ಲಿ ವಿಕಾಸ ಹೊಂದಿದ ಭಾಷೆಗಳನ್ನು ಆಯ್ದುಕೊಂಡು ಒಂದು ಭಾಷೆ ತುಂಬಾ ಹಳೆಯದು ಇನ್ನೊಂದು ತಡವಾಗಿ ಹುಟ್ಟಿತು ಎಂದು ವಾದಿಸುವುದರಲ್ಲಿ ಅರ್ಥವಿಲ್ಲ.
ಹೆಚ್ಚಿನ ಭಾಷಾವಿಜ್ಞಾನಿಗಳು ಈಗಿರುವ ಈ ಭಾಷೆಗಳಲ್ಲಿ ಇಂದು ರೂಡಿಯಲ್ಲಿರುವ ಪದಗಳನ್ನು ಆಯ್ದುಕೊಂಡು ಹೋಲಿಕೆ, ವಿಶ್ಲೇಷಣೆ ಮಾಡಿ ಭಾಷೆಗಳ ವಿಕಾಸದ ಕುರಿತು ನಿರ್ಧಾರಕ್ಕೆ ಬರುತಿದ್ದಾರೆ. ಭಾಷೆಗಳ ಮೂಲ ಮತ್ತು ವಿಕಾಸಗಳ ಅಧ್ಯಯನಕ್ಕೆ ಇದೊಂದೇ ಸರಿಯಾದ ಮಾರ್ಗ ಎಂದು ಅನಿಸುವುದಿಲ್ಲ.
ಭಾಷೆಗಳ ನಿಜವಾದ ಪ್ರಾಚೀನತೆಯನ್ನು ಕಂಡು ಹಿಡಿಯುವುದಿದ್ದರೆ ಅವುಗಳ ಮೂಲ ಸ್ಥಿತಿ, ಬೆಳೆದು ಬಂದ ಇತಿಹಾಸ, ವಿಕಾಸದ ಪಥ, ಕಾಲಕಾಲಕ್ಕೆ ಆಗಿರುವ ಪ್ರಭಾವಗಳು, ಅದಲ್ಲದೆ ಜನಾಂಗಗಳ ವಂಶವಾಹಿಗಳ (ಡಿ ಎನ್ ಎ) ಅಧ್ಯಯನದ ಪೂರಕ ಮಾಹಿತಿಗಳು- ಈ ಎಲ್ಲವನ್ನೂ ಸಮಗ್ರವಾಗಿ ಪರಿಗಣಿಸಬೇಕಾಗುತ್ತದೆ.
: )
*ಬಳಸಿರುವುದು ಅಂತರ್ಜಾಲದ ಚಿತ್ರಗಳು: ಸ್ವಾಮ್ಯ ಆಯಾ ಮೂಲ ಲೇಖಕರದ್ದು*.


Comments
Post a Comment