1.ಹಂಪನಕಟ್ಟೆ ದಾರಿದಾಟುವ ಪಾದಾಚಾರಿಗಳ ಪರದಾಟ


ಸ್ಮಾರ್ಟ್ ಸಿಟಿ ಆಗುವ  ಹಂಬಲದಲ್ಲಿರುವ  ನಮ್ಮ ಮಂಗಳೂರು  ನಗರದಲ್ಲಿ ಹಲವಾರು  ಮೂಲಭೂತ  ಸೌಕರ್ಯಗಳ ಪರಿಸ್ಥಿತಿ ಸುಧಾರಿಸ  ಬೇಕಾದಂತಹ  ಅಗತ್ಯವಿದೆ. ಮಂಗಳೂರು ನಗರದ  ಸಹಜ ಸಮಸ್ಯೆಗಳಲ್ಲಿ ಒಂದು ಹಂಪನಕಟ್ಟೆಯಂತಹ   ವಾಹನ ನಿಬಿಡ  ಪ್ರದೇಶಗಳಲ್ಲಿ  ರಸ್ತೆ ದಾಟುವಾಗ ಸಾಮಾನ್ಯ  ಪಾದಚಾರಿಗಳು ದಿನ ನಿತ್ಯ ಅನುಭವಿಸುವ  ಪರದಾಟ ಮತ್ತು ಸಂಕಟ.

ಹಾಗೆ ನೋಡಿದರೆ ನಮ್ಮ ಸರಕಾರಿ  (ಅ)ವ್ಯವಸ್ಥೆಯಲ್ಲಿ ರಸ್ತೆಗಳನ್ನು ವಾಹನಗಳಿಗಾಗಿ ಮಾತ್ರಾ ರಚನೆಮಾಡಿದಂತಿದೆ. ಶ್ರೀಸಾಮಾನ್ಯರು ಬಳಸುವ ಪಾದಮಾರ್ಗ (ಪುಟ್ ಪಾತ್) ಗಳ  ಸೂಕ್ತ ನಿರ್ವಹಣೆಯ ಬಗೆಗೆ ನಮ್ಮನ್ನು ಆಳುವವರಿಗೆ, ನಗರಸಭೆಗಳಿಗೆ ಅತೀವ  ತಾತ್ಸಾರವಿದ್ದಂತಿದೆ.  ಉದಾಹರಣೆಗೆ, ಸೆಂಟ್ರಲ್ ಟಾಕೀಸಿನಿಂದ ಪಿರೇರಾ ಹೊಟೇಲಿಗೆ ನಡೆದು ಬರುವ ದುರ್ಗಮ ಪಾದ(ಚಾರಿ)ಮಾರ್ಗದ  ಅ(ವ್ಯ)ವಸ್ಥೆ  ಜಗತ್ತಿನ ಅತ್ಯಂತ  ಕೆಟ್ಟ ವಿನ್ಯಾಸದ  ಪಾದಮಾರ್ಗ  ಎಂಬ ಹೆಗ್ಗಳಿಕೆಗೆ  ಗಿನ್ನೆಸ್  ದಾಖಲೆಗಾಗಿ  ಕಾಯುತಿರುವಂತಿದೆ.
ಟೋಕಿಯೋ ನಗರದ ಜೀಬ್ರಾದಾಟುಗಳ ಸೌಂದರ್ಯ ೧

ಟೋಕಿಯೋ ನಗರದ ಪಾದಮಾರ್ಗಗಳ ಮತ್ತು ಜೀಬ್ರಾದಾಟುಗಳ ಸೌಂದರ್ಯ ೨

ಜಗತ್ತಿನ  ಸುಂದರ  ನಗರಗಳಲ್ಲಿ ಒಂದಾದ  ಟೋಕಿಯೋ  “ಪಾದಚಾರಿಗಳ ನಗರ” ಅಥವಾ “ ನಡೆದಾಡುವ  ಮಾರ್ಗಗಳ ನಗರ “ ಎಂದು ಹೆಮ್ಮೆಯಿಂದ  ಬಣ್ಣಿಸಿಕೊಳ್ಳುತ್ತದೆ.  ಟೋಕಿಯೋದ  ಅತಿ ಚಂದದ ಪಾದಮಾರ್ಗಗಳು ಕನಿಷ್ಟ ೧೫ ರಿಂದ ೨೦ ಅಡಿಗಳಷ್ಟು ಅಗಲವಾಗಿವೆ.  ಸುಂದರವಾಗಿ  ಮನೆಗಳ ಒಳಾಂಗಣಗಳನ್ನು ನಾಚಿಸುವಂತೆ ಆಲಂಕಾರದ  ಹೆಂಚುಗಳಿಂದ  ಸಿಂಗರಿಸಿಕೊಂಡು ಬನ್ನಿ ಬನ್ನಿ ನಡೆಯಿರಿ, ನಡೆದಾಡಿರಿ  ಎಂದು  ಪಾದಚಾರಿಗಳನ್ನು ಸ್ವಾಗತಿಸುವಂತಿವೆ.  ಅಲ್ಲಿ ಪಾದಮಾರ್ಗಗಳಿಗೆ  ತಕ್ಕಂತೆ  ಪಾದಚಾರಿಗಳು  ರಸ್ತೆದಾಟಲು ಬಳಸುವ  ಜೀಬ್ರಾ ದಾಟುಗಳು ೧೫ ರಿಂದ ೨೦ ಅಡಿ ವಿಶಾಲವಾಗಿದ್ದು   ಬಣ್ಣ ಮಾಸದ ಅಚ್ಚ ಬಿಳಿ    ದಪ್ಪ ನೆಯ ಪಟ್ಟೆಗಳು  ವಾಹನ ಸವಾರರಿಗೆ  ದೂರದ ವರೆಗೆ  ಸ್ಪಷ್ಟವಾಗಿ ಕಾಣಿಸುತ್ತವೆ. ಈ ಜೀಬ್ರಾ ದಾಟುಗಳಿಗೆ ಸಂಚಾರ ಸಂಕೇತ ದೀಪಗಳನ್ನು ಅಳವಡಿಸಿದ್ದು ಹಸಿರು ದೀಪ ಬೆಳಗಿದಾಗ  ಪಾದಚಾರಿಗಳು ಸಂಪೂರ್ಣವಾಗಿ ದಾಟಿ ಹೋಗುವವರೆಗೆ ವಾಹನಗಳು ಜೀಬ್ರಾ ದಾಟಿನ  ಹೊರಗೆ  ಸಂಯಮ ಹಾಗೂ ಅತೀವ  ಶಿಸ್ತಿನಿಂದ  ಕಾಯುವುದನ್ನು ಟೋಕಿಯೋದಂತಹ  ನಗರಗಳಲ್ಲಿ  ನೋಡಲು  ಬಲು  ಸೊಗಸಾಗಿದೆ.

ಅದೇ  ನಮ್ಮ ಊರಿನ  ಹಂಪನಕಟ್ಟೆಗೆ   ಮರಳಿ ಬಂದರೆ: ಹಂಪನಕಟ್ಟೆಯ  ಬಹುವಾ‍ರ್ಷಿಕ ಯೋಜನೆಯ ಉದ್ದೇಶಿತ  ಸ್ಕೈ ವಾಕ್ ಎಂಬ ಗಗನಸೇತು ಗಗನ ಕುಸುಮದಂತೆ ಆಶಾ ಗೋಪುರವಾಗಿಯೇ ಉಳಿದಿದೆ. ಇತ್ತೀಚೆಗೆ ನಗರದಲ್ಲಿ ವಾಹನಗಳ  ವೇಗ ನಿಯಂತ್ರಣಕ್ಕಾಗಿ ಅಲ್ಲಲ್ಲಿ  ದಾರಿದಿಬ್ಬಗಳನ್ನು ರಚಿಸಿ  ಬಿಳಿಯ  ಜೀಬ್ರಾ ಪಟ್ಟೆಗಳನ್ನು  ಬಣ್ಣ ಹಚ್ಚಿದ್ದಾರೆ.  ಆನಂತರದ  ಕೆಲವೇ  ದಿನಗಳಲ್ಲಿ ಜೀಬ್ರಾ ಪಟ್ಟೆಗಳು  ಬಣ್ಣ ಕಳೆದು  ಮಾಸಿ  ಕಳೆಗುಂದಿವೆ.  ಹಾಗೆಯೆ ಪಾದಚಾರಿಗಳಿಗೆ  ದಾಟಲೆಂದು ಕೆಲೆವೆಡೆ ಮಾಡಿದ  ಜೀಬ್ರಾ  ದಾಟುಗಳು ಕೂಡಾ ಬಣ್ಣ ಮಾಸಿವೆ.  ರಸ್ತೆ ದಿಬ್ಬ ದಾಟಿದ ಕೂಡಲೆ  ಗಡಿಬಿಡಿಯ ವಾಹನ ಚಾಲಕರು  ಮತ್ತೆ ಅವಸರದಿಂದ  ವೇಗ  ಹೆಚ್ಚಿಸುವ  ಕಾರಣ  ಪಾದಾಚಾರಿಗಳು ರಸ್ತೆ ದಾಟಲು  ತಬ್ಬಿಬ್ಬಾಗುವುದು, ಹೆಣಗಾಡುವುದು  ಸಾಮಾನ್ಯವಾಗಿದೆ. ಯುವಕರು ವಾಹನಗಳ  ನಡುವೆ ಸರ್ಕಸ್  ಮಾಡುತ್ತಾ ಹೇಗೋ  ಓಡೋಡಿ ದಾಟಿದರೆ,  ನಿಲ್ಲದ/ನಿಲ್ಲಿಸದ ನಿರಂತರ ವಾಹನ ಸರಣಿಗಳ ನಡುವೆ ವೃದ್ಧರು, ರೋಗಿಗಳು, ಅಂಗವಿಕಲರು  ಅಸಹಾಯಕರಾಗಿ ದಾಟುವುದೊ ಬಿಡುವುದೋ ಎಂದು ಪರದಾಡುವಂತಿದೆ.  ಈ ಎಲ್ಲಾ ಹತಭಾಗ್ಯರಿಗೊಂದು ಸೂಕ್ತ ಪಾದಚಾರಿ ಭಾಗ್ಯ  ಎಂದು  ಬರುವುದೋ  ಎಂದು  ಸಂಭಾವಿತ ನಾಗರೀಕರು  ಕಾತರಿಸುವಂತಾಗಿದೆ.

ಹಂಪನಕಟ್ಟೆಗೆ ಒಂದು ಸರಳ ಪಾದಾಚಾರಿ ಭಾಗ್ಯ  ಹೇಗೆ ಮಾಡಬಹುದು ?  ಸಂಬಂದಪಟ್ಟ ಆಡಳಿತ  ಸೂತ್ರದಾರರಿಗೆ ಒಂದು ಸಲಹೆ: ದಾರಿದಿಬ್ಬಗಳನ್ನು ಇನ್ನಷ್ಟು  ಅಗಲಗೊಳಿಸಿ,  ಪಾದಾಚಾರಿಗಳು  ಕ್ಷೇಮವಾಗಿ ದಾಟಲು ಯೋಗ್ಯವಾದ  ಜೀಬ್ರಾ ದಾಟುಗಳನ್ನು ಮಾಡಿಸಿ:  ದಾರಿದಿಬ್ಬ ಹೊಂದಿದ ದಾಟುಗಳು ೧೦  ರಿಂದ ೧೨ ಅಡಿ ಅಗಲವಾದರೂ ಇರಲಿ. ರಸ್ತೆಯ ಎರಡು ಪಾರ್ಶ್ವ ದ ಪಾದಮಾರ್ಗಗಳನ್ನು ಪರಸ್ಪರ  ಲಂಬ ರೇಖೆಯಲ್ಲಿ ಜೋಡಿಸುವಂತಿರಲಿ.  ದಾರಿದಿಬ್ಬ ಗಳು  ವಿಶಾಲ ವಾಗಿದ್ದು  ಎತ್ತರದ  ಮೇಲಿನ ಮೈ  ಚಪ್ಪಟೆಯಾಗಿರಲಿ. (ಬೆಂಗಳೂರಿನಲ್ಲಿರುವಂತೆ)  ಇದರ ಮೇಲೆ   ಉತ್ತಮ ಬಿಳಿ ಪೇಯಿಂಟಿನಿಂದ  ದಪ್ಪನೆಯ ಜೀಬ್ರಾ ಪಟ್ಟೆಗಳನ್ನು ಸರಿಯಾಗಿ ಬರೆಯಿಸಿದರೆ,  ವೇಗದ ವಾಹನ ಸವಾರರ  ಗಮನವನ್ನು ಸೆಳೆಯುವಲ್ಲಿ ಹಾಗೂ ವಾಹನದ  ವೇಗ ತಗ್ಗಿಸುವಲ್ಲಿ ವಾಹನ  ನಿಲ್ಲಿಸಲು  ಸಹಕಾರಿಯಾಗಬಹುದು. ಇದರೊಂದಿಗೆ ರಸ್ತೆ ದಾಟಲು ಸಂಚಾರ ಸಂಕೇತ ದೀಪಗಳನ್ನು ಹಾಕಿದರೆ  ಹಸಿರು ದೀಪ  ಬೆಳಗಿದಾಗ ವಾಹನಗಳು  ನಿಂತು ಪಾದಾಚಾರಿಗಳು  ಸುಖವಾಗಿ  ಕ್ಷೇಮವಾಗಿ ರಸ್ತೆ ದಾಟಬಹುದು.

ಹಂಪನಕಟ್ಟೆ ಪ್ರದೇಶದಲ್ಲಿ ಅಗತ್ಯವಾಗಿ ಬೇಕಾದ  ದಾರಿದಿಬ್ಬ ಸಹಿತ ಜೀಬ್ರಾದಾಟುಗಳು: (೧)  ಹ್ಯಾಮಿಲ್ಟನ್  ಸರ್ಕಲ್ (೨) ಎ ಜೆ ಶೆಟ್ಟಿ ಸರ್ಕಲ್ ದರ್ಗ ಎದುರು (೩) ಎ ಜೆ ಶೆಟ್ಟಿ ಸರ್ಕಲ್ ಆರ್‍ಟಿ ಒ  ಕಚೇರಿಎದುರು (೪) ಟೌನ್ ಹಾಲ್ ನಿಂದ –/ ರೈಲ್ವೇ ಸ್ಟೇಷನ್ ಅಡ್ಡ ರಸ್ತೆ ಬಳಿ (೫) ಹಿಂದೆ ಇದ್ದ ಗಡಿಯಾರ ಗೋಪುರದ - ಮಿನಿ ವಿಧಾನ ಸೌಧ  ಎದುರು (೬) ಪಿರೇರಾ ಹೋಟೆಲ್-ವಿಶ್ವ ವಿದ್ಯಾನಿಲಯ  ಕಾಲೆಜು ಎದುರು (೭) ವೆನ್ಲಾಕ್ ಆಸ್ಪತ್ರೆ ಆಡಳಿತ ಕಚೇರಿ - ಸಿಟಿ ಬಸ್ ನಿಲ್ದಾಣ/ರಿಕ್ಷಾ ನಿಲ್ದಾಣ ಎದುರು (೮) ಕೋಮಲ್ ರೆಡ್ ರೋಸ್- ಎದುರು (೯) ಧನ್ಯವಾದ ಹೋಟೇಲ್-ತಾಜಮಹಲ್-ರೈಲ್ವೇ ಸ್ಟೇಷನ್ ಅಡ್ಡ ರಸ್ತೆ ಎದುರು (೧೦) ಕೇಥೋಲಿಕ್ ಕ್ಲಬ್ - ಜೋಸ್ ಅಲುಕಾಸ್ ಎದುರು (೧೧) ಜ್ಯೋತಿ ಟಾಕಿಸ್- ಪಾಲ್ಕಿ ಎದುರು (೧೨) ಜ್ಯೋತಿ ಟಾಕೀಸ್ - ಕುಡ್ಲ /ಕ್ವಾಲಿಟಿ ಎದುರು.(೧೩) ಬೆಂದೂರ ವೆಲ್ ೯೧೪) ಕರಾವಳಿ ಸರ್ಕಲ್ (೧೫) ಕಂಕನಾಡಿ ಸರ್ಕಲ್ ಇತ್ಯಾದಿ.

ನಮ್ಮ  ಯೋಜಿತ  ಸ್ಮಾರ್ಟ್  ನಗರದಲ್ಲಿ ನಗರ ಆಡಳಿತ ಸೂತ್ರದಾರರು  ಪಾದ ಮಾರ್ಗಗಳ ಬಗ್ಗೆ ಹಾಗೂ ರಸ್ತೆ  ದಾಟುವ ಪಾದಚಾರಿಗಳ  ಕ್ಷೇಮದ  ಬಗ್ಗೆ ಕಾಳಜಿ ವಹಿಸಿದರೆ ನಗರದ ಸಹಜ ನಾಗರೀಕ  ಮೌಲ್ಯ ವರ್ಧಿಸುವುದರಲ್ಲಿ ಸಂದೇಹ ಬೇಡ.

-ರವಿ ಮುಂಡ್ಕೂರು.

Comments

Popular posts from this blog

೩. ಜೋಗುಳ- ಒಂದು ಶಬ್ಧ ಮಿಮಾಂಸೆ

15. ದಕ್ಕಣ ಪೀಠಭೂಮಿ ಮತ್ತು ದಕ್ಕಣ ಟ್ರಾಪ್ಸ್( ಲಾವಾಭೂಮಿ)

13.ಮೂಲದ್ರಾವಿಡ ಭಾಷೆ -ಪ್ರೊಟೊ ದ್ರಾವಿಡಿಯನ್.