5. ಇತಿಹಾಸದ ಮಂಗಳೂರಿನಲ್ಲಿ ಕನ್ನಡ

 ಇತಿಹಾಸದ ಮಂಗಳೂರಿನಲ್ಲಿ ಕನ್ನಡ

ಇತಿಹಾಸದ ಅಧ್ಯಾಯಗಳು ಸಾಕಷ್ಟು ಅಸ್ಪಷ್ಟವಾಗಿರುವ ಕಾರಣ, ಮಂಗಳೂರಿನಲ್ಲಿ ಎಷ್ಟು ಹಿಂದಿನಿಂದ ಕನ್ನಡ ಬಳಕೆಯಲ್ಲಿತ್ತು ಎಂಬ ಪ್ರಶ್ನೆಗೆ ಸರಳ ಉತ್ತರ ಹೇಳುವುದು ಸುಲಭವಿಲ್ಲ. ನೀವು ತಾಳ್ಮೆಯಿಂದ ಇತಿಹಾಸ ಓದುವ ಮನೋಭೂಮಿಕೆಯಲ್ಲಿ ಇರುವುದಾದರೆ, ಸಣ್ಣ ಸಣ್ಣ ಕತೆಗಳನ್ನು ಹೇಳುತ್ತೇನೆ, ಕೇಳಿ! .

**

ಇತಿಹಾಸವನ್ನು ಸ್ಥೂಲವಾಗಿ ನೋಡುವವರಿಗೆ ವಿಜಯನಗರದ ಅರಸರು ಹದಿನಾಲ್ಕನೆಯ ಶತಮಾನದಲ್ಲಿ ಕರಾವಳಿಗೆ ಲಗ್ಗೆ ಇಟ್ಟ ಮೇಲೆ ಮಂಗಳೂರಿನಲ್ಲಿ ಕನ್ನಡ ಬೇರೂರಿತು ಎಂದು ಅನಿಸುವುದುಂಟು.

ಆದರೆ ಅದಕ್ಕೆ ಮೊದಲೇ ಕನ್ನಡ ಮತ್ತು ತುಳು ಅಕ್ಕ-ತಂಗಿಯರಂತೆ ಇತಿಹಾಸದಲ್ಲಿ ಒಟ್ಟಿಗೆ ಜೊತೆ ಜೊತೆಯಲ್ಲಿ ಬೆಳೆದು ಬಂದ ಭಾಷೆಗಳು ಎನ್ನುವುದಕ್ಕೆ ಸಾಕಷ್ಟು ಸಾಕ್ಷಾಧಾರಗಳಿವೆ. ಕನ್ನಡನಾಡಿನ ಪ್ರದೇಶಗಳ ಭೌಗೋಳಿಕ ವಿಶಾಲತೆ, ತುಳು ಪ್ರದೇಶಗಳ ಸೀಮಿತ ವ್ಯಾಪ್ತಿ ಹಾಗೂ ಅದಕ್ಕೆ ಸಂಬಂಧಿಸಿದ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಕಾರಣಗಳಿಂದ, ಇತಿಹಾಸದ ಕಾಲದಲ್ಲಿ ಈ ಎರಡು ಭಾಷೆಗಳ ಬೆಳವಣಿಗೆ ಮತ್ತು ಪ್ರಸಾರದಲ್ಲಿ ವ್ಯತ್ಯಯ ಉಂಟಾಗಿದೆ. ಈ ಎರಡು ಭಾಷೆಗಳು ವಿಕಾಸ ಹೊಂದುತ್ತಾ ಬೆಳೆದು ಬಂದ ಉದ್ದನೆಯ ಕಾಲಮಾನದ ಹಾದಿಯಲ್ಲಿ ಇದೇ ಕರಾವಳಿಯಲ್ಲಿಯೇ ಹಲವು ಉಪಭಾಷೆಗಳು (ಬ್ರಾಹ್ಮಣರ ತುಳು, ಹವ್ಯಕಗನ್ನಡ, ಕುಂದಗನ್ನಡ, ಅಂಕೋಲ-ಕನ್ನಡ ಇತ್ಯಾದಿ) ಉತ್ಪನ್ನವಾಗಿವೆ.

ಇತಿಹಾಸದ ಹಾದಿಯಲ್ಲಿ ಒಂದೊಂದೆ ಹೆಜ್ಜೆ ಹಿಂದೆ ಹೋದರೆ, ತುಳು ಮತ್ತು ಕನ್ನಡ ಒಟ್ಟಿಗೆ ಬೆಳೆದ ಸಂಗತಿಗಳು ಸ್ಪಷ್ಟವಾಗುತ್ತಾ ಹೋಗುತ್ತವೆ. ಕ್ರಿಸ್ತಶಕದ ಆರಂಭದ ಶತಮಾನಗಳಲ್ಲಿ ಮಂಗಳೂರಿನ ನದಿಗಳ ಪರಿಸರ, ಬಂದರಗಳು ಆಳಿದ ಅರಸರ ಊರುಗಳು, ಆದಿವಾಸಿಗಳ ಊರುಗಳ ಪರಿಕಲ್ಪನೆಗೆ ಮೂರ್ತಸ್ವರೂಪಕ್ಕಾಗಿ ಇದರೊಂದಿಗೆ ಒಂದು ಭೂಪಟ ಒದಗಿಸಿದ್ದೇನೆ.

ಪ್ರಾಚೀನ ಕಾಲದ ಮಂಗಳೂರು ಪರಿಸರ

**

ತುಳು-ಕನ್ನಡ ವಿಕಾಸದ ಸಂಬಂಧಗಳನ್ನು ಪರಿಶೀಲಿಸುವಾಗ ಆ ಪುರಾತನ ಪರಿಸರದಲ್ಲಿ ಹಾಜರಿದ್ದ ಉಳಿದ ದೇಶೀ ಭಾಷೆಗಳನ್ನು ನೆನಪಿಸಿಕೊಳ್ಳದಿದ್ದರೆ ಅಪಚಾರವಾಗುತ್ತದೆ.

ಐದಾರು ಸಹಸ್ರಮಾನಗಳ ಹಿಂದೆಯೇ ಈಗ ಮಂಗಳೂರು ಇರುವ ಕರಾವಳಿ ಪ್ರದೇಶದಲ್ಲಿ ವಿವಿಧ ಆದಿವಾಸಿ ಜನಾಂಗಗಳು ನೆಲೆಸಿದ್ದರು. ಇಂದೂ ಕೂಡಾ ಇರುವ ಕೊರಗ, ಮೇರ, ಮನ್ಸ, ಮುಂಡಾಲ ಆದಿವಾಸಿಗಳಲ್ಲದೆ, ಇಂದು ಕಾಣಿಸದ ಇನ್ನೂ ಹಲವಾರು ಜನಾಂಗಗಳಿದ್ದರು (ಕೋಂ, ಬಿಜ, ಎಯ್ಯ, ಎಡವ, ಎಲಿಯ, ದೇರೆ ಇತ್ಯಾದಿ) ಇದು ಮಂಗಳೂರಿನ ಹಳೆಯ ಊರುಗಳ ಹೆಸರುಗಳಿಂದ ತಿಳಿಯುತ್ತದೆ. ಇವರಿಗೆಲ್ಲ ಅವರವರದೆ ಆದ ಭಾಷೆಗಳು ಇದ್ದವು!.ಉದಾಹರಣೆಗೆ ಕೊರಗರಿಗೆ ಈಗಲೂ ಅವರದೇ ಆದ ಒಂದು ಸ್ವತಂತ್ರ ‍ಭಾಷೆಯಿದೆ, ಹಲವು ಪ್ರಾಚೀನ ಭಾಷೆಗಳು ಪ್ರಬಲ ಭಾಷೆಗಳ ಪ್ರಭಾವದಡಿಯಲ್ಲಿ ಸೊರಗಿದರೆ ಇನ್ನು ಕೆಲವು ತುಳು ಅಥವಾ ಕನ್ನಡದಲ್ಲಿ ಲೀನವಾಗಿ ಹೋಗಿವೆ. ಈಗ ಬಹಳಷ್ಟು ಆದಿವಾಸಿ ಸಂಜಾತರು ಕೀಳರಿಮೆಯಿಂದ ಈಗ ಅವರ ಸ್ವಂತ ಭಾಷೆಗಳನ್ನು ಬಳಸಲು ಹಿಂಜರಿಯುತ್ತಾರೆ; ಅಥವಾ ಬಳಸದೆ ಮರೆತು ಬಿಟ್ಟಿದ್ದಾರೆ.

ತಮಿಳು ಸಂಗಂ ಕಾವ್ಯಗಳಲ್ಲಿ ಪ್ರಾಚೀನ ಕರಾವಳಿ/ತುಳುನಾಡಿಗೆ ಕೊಂ-ಕಾನಂ ಎಂಬ ಹೆಸರಿದೆ. ಇದು "ಕೊಂ" ಆದಿನಿವಾಸಿಗಳ "ಕಾನ" (ಕಾಡು) ಆಗಿತ್ತು ಎಂಬ ಅರ್ಥ ನೀಡುತ್ತದೆ. ಸಂಗಂನಲ್ಲಿ ಹೇಳಿದ "ಕೊಂಕಾನಂ" ಕ್ರಮೇಣ "ಕೊಂಕಣ" ಎಂದಾಗಿದೆ. ಇತಿಹಾಸದ ಈ "ಕೋಮ"ರು ಯಾರು? ಎಲ್ಲಿಂದ ಬಂದವರು? ವಿವರಗಳು ತಿಳಿಯದು, ಆದರೆ ಅವರ ವಿಳಾಸದ ಹೆಸರಿನ ಗ್ರಾಮಗಳು ಇಂದಿಗೂ ಉಳಿದಿವೆ. ಮಂಗಳೂರಿನ ಉತ್ತರ ಭಾಗದ "ಕೊಂಚಾಡಿ" (ಕೊಂ+ಚ+ಅಡಿ = ಕೊಂಚರ ನೆಲೆ). (ಇಲ್ಲಿ ಗಮನಿಸಿ: "ಚ" ಪ್ರತ್ಯಯ ಪ್ರಾಕೃತದ್ದು, ತುಳುವಿನಲ್ಲಿ ಇಲ್ಲ!), ಅದರಾಚೆಗೆ ಇರುವ ದೂರದ "ಕೊಂಪದವು" ಊರುಗಳು ಇತಿಹಾಸದಲ್ಲಿ ಹಿಂದೆ ಕೊಂ ಆದಿವಾಸಿಗಳ ಇರುವಿಕೆಯನ್ನು ಊರ ಹೆಸರುಗಳಲ್ಲಿ ಹಿಡಿದು ಇಟ್ಟುಕೊಂಡಿವೆ!

**

ಕ್ರಿಸ್ತ ಶಕದ ಆರಂಭ ಕಾಲದಲ್ಲಿ ದಕ್ಕಣವನ್ನು ಆಳಿದ ಶಾತವಾಹನರು ಶಾತಕರ್ಣಿಗಳು ಎಂದು ಕೂಡಾ ಹೆಸರಾಗಿದ್ದಾರೆ. ಮಹಾರಾಷ್ಟ್ರದ ಹಲವು ಬೌದ ಗುಹೆಗಳನ್ನು ಕೆತ್ತಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಅರಸೊತ್ತಿಗೆಯ ಪ್ರತಿಷ್ಠೆಗಾಗಿ ಇವರು ಪ್ರಾಕೃತ ಮತ್ತು ಸಂಸ್ಕೃತ ಭಾಷೆಯಲ್ಲಿ ವ್ಯವಹರಿಸುತಿದ್ದರೂ ಪೂರ್ವದ ಹಳೆಕನ್ನಡ ಇವರ ಮನೆ ಮಾತಾಗಿತ್ತು ಎಂದು ತಿಳಿಯಬಹುದು.. ಸಂಗಂ ಕಾವ್ಯಗಳಲ್ಲಿ ಶಾತಕರ್ಣಿಗಳನ್ನು "ನೂರು ಮಂದಿ ಕನ್ನರು "ಎಂದು ಕರೆದಿರುವುದು ವಿಶೇಷ. "ಕರ್ಣಿ" ಅಂದರೆ ಕನ್ನ ಪದದ ಸಂಸ್ಕೃತ ಅನುವಾದ ಎಂದು ತಿಳಿಯಬಹುದು. ಕನ್ನರ ನಾಡು ಕನ್ನ+ನಾಡು ಕನ್ನಾಡು ಕಾಲಕ್ರಮದಲ್ಲಿ ಕನ್ನಡ ಆಗಿರುವಂತಿದೆ. ಅದೇ ಕನ್ನಡ ನಾಡು ಪದವನ್ನು ಸಂಸ್ಕೃತಕ್ಕೆ ಕರ್ಣ+ನಾಟ/ಕ .ಕರ್ಣಾಟಕ > ಕರ್ನಾಟಕ ಎಂದು ಅನುವಾದ ಮಾಡಿರುವಂತಿದೆ. ಶಾತವಾಹನನ ವಂಶಜರು ಇಲ್ಲವೆ ಕನ್ನರು ಮಂಗಳೂರಿನಲ್ಲೂ ಇದ್ದರೆ? ಹೌದು, ಮಂಗಳೂರಿನ ಪೂರ್ವದ ಗಡಿಯ "ಕಣ್ಣೂರು" ಇವರ ಹೆಸರನ್ನು ಹೊತ್ತುಕೊಂಡಿದೆ. ಅದಲ್ಲದೆ ಸ್ವಲ್ಪ ದೂರದ ಕನ್ನರಗುಡ್ಡೆ, ಉಡುಪಿ ಹತ್ತಿರದ ಕನ್ನರಪಾಡಿಗಳು ಇತ್ಯಾದಿ ಸ್ಥಳನಾಮ ರೂಪದ ಪಳಿಯುಳಿಕೆಗಳಿವೆ.


**

ಮಂಗಳೂರನ್ನು ಇತಿಹಾಸದಲ್ಲಿ ದೀರ್ಘವಾಗಿ ಆಳಿದ ಅರಸರ ಆಳುಪರಿಗೆ ಗೌರವದ ಸ್ಥಾನವಿದೆ. ಅವರ ಕುಲನಾಮ (ಅಡ್ಡಹೆಸರು) ಅಳುಪ/ಅಲೂಪ ಎನ್ನುವ ಪದ ಹೇಗೆ ಬಂದಿರಬಹುದೆಂದು ಇತಿಹಾಸಕಾರರು ಬಗೆಬಗೆಯ ಊಹೆಗಳನ್ನು ಮಾಡಿದ್ದುಂಟು. ಆದರೆ, ಮಂಜೇಶ್ವರ ಗೋವಿಂದ ಪೈಯವರು ಒಂದು ಲೇಖನದ ಅಡಿಟಿಪ್ಪಣಿಯಲ್ಲಿ ಮಂಗಳೂರಿನ ಅಳಪೆ ಎಂಬ ಹಳ್ಳಿ ಆಲುವ(ಖೇಟ) ಆಗಿರಬಹುದೇ ಎಂಬ ಸಂದೇಹವನ್ನು ಸೂಚಿಸಿದ್ದುಂಟು. (ನನಗೆ ದೊರೆತ ಪೂರಕ ಮಾಹಿತಿಗಳು ಪೈ ಅವರ ಸಂದೇಹವನ್ನು ದೃಡೀಕರಿಸುತ್ತವೆ).

ಮಂಗಳೂರು ನಗರದ ಪೂರ್ವ ಭಾಗದಲ್ಲಿರುವ ಊರು ಅಳುಪೆ. ಆಳುಪರು ಆಳುಪೆ ಗ್ರಾಮಕ್ಕೆ ಸೇರಿದವರು. ಅಳುಪೆ ಪಟ್ಟಣದ "ಅಳಿಕೆ"ಯಿಂದ ಆಳಲು ಆರಂಬಿಸಿದರು. (ಅಳಿಕೆ /ಅಲಕಾಪುರಿ= ಕುಬೇರನ ರಾಜಧಾನಿ/ಅರಮನೆಯ ಹೆಸರು). ಆಳುಪ ಅರಸರು ಅಂದಾಜು ಕ್ರಿಸ್ತಶಕ ೪೫೦ ರಿಂದ ೧೪೧೦ ರವರೆಗೆ ಆಳಿದರೆಂದು ಲಭ್ಯ ಶಾಸನಗಳಿಂದ ಇತಿಹಾಸ ತಿಳಿಸುತ್ತದೆ. ಅಳುಪರ ಕಾಲದ ಹತ್ತನೆಯ ಶತಮಾನದ ವರೆಗಿನ ಶಿಲಾಶಾಸನಗಳು ಹಳೆಗನ್ನಡ ಲಿಪಿಯಲ್ಲಿ ಇರುವುದು ವಿಶೇಷ. ಅಳುಪರ ನಾಣ್ಯಗಳಲ್ಲಿ ಕೂಡಾ ಕನ್ನಡ ಮತ್ತು ನಾಗರಿ ಲಿಪಿಗಳನ್ನು ಕಾಣಬಹುದು. ಅಂದರೆ, ಅವರು ಆಡಳಿತ-ವ್ಯವಹಾರಗಳಿಗೆ ಕನ್ನಡ (ಹಳೆಗನ್ನಡ) ಲಿಪಿ ಬಳಸುತಿದ್ದರು. ತುಳು ಆಗ ಇರಲಿಲ್ಲವೇ? ಪುರಾತನ ಮೌಕಿಕ ಸಂಪ್ರದಾಯದ ಎಲ್ಲಾ "ಪಾಡ್ದನ"ಗಳು ಇರುವುದು ತುಳು ಭಾಷೆಯಲ್ಲಿಯೇ. (ಪಾಡ್ದನ=ಹಾಡುವಿಕೆ). ಸುಮಾರು ಹತ್ತು-ಹನ್ನೊಂದನೆ ಶತಮಾನದ ಉಡುಪಿಯಲ್ಲಿ ಮಧ್ವಾಚಾರ್ಯರ ಕಾಲದ ತಾಳೆಗರಿ ಬರಹಗಳಲ್ಲಿ ಮತ್ತು ನಂತರದ ಶಾಸನಗಳಲ್ಲಿ ತಿಗಳಾರಿ ಮೂಲದ ತುಳು ಲಿಪಿ ಕಂಡು ಬರುತ್ತದೆ.

ಅಳುಪರಿಗಿಂತ ಮೊದಲು, ಕ್ರಿಸ್ತ ಶಕ ನಾಲ್ಕನೆ ಶತಮಾನದ ಹಿಂದಿನ ಭಾಷಾ ಪರಿಸರ-ಪರಿಸ್ಥಿತಿಗಳು ಹೇಗಿದ್ದವು?

**

ತಮಿಳರ ಸಂಗಂ ಸಾಹಿತ್ಯಗಳ ಅಗನಾನೂರು ಕಾವ್ಯದಲ್ಲಿ (ಅಂದಾಜು ಕ್ರಿಸ್ತ ಶಕ ೧೦೦-೨೦೦) ತುಳುನಾಡಿನ ಬಗ್ಗೆ ಹಾಗೂ ಅಲ್ಲಿ ಹೆಸರಾಗಿದ್ದ "ನನ್ನನ್" ಅರಸರ ಬಗ್ಗೆ ಉಲ್ಲೇಖವಿದೆ. ಅದರಲ್ಲಿ ತುಳುಭಾಷೆಯನ್ನು "ತುಳುನಾಟ್ಟ ತಮಿಳ್" ಎಂದು ವರ್ಣಿಸಿರುವಂತಿದೆ. ಅಂದರೆ ಅಂದಿನ ಹಳೆತುಳು ಭಾಷೆ ಅಂದಿನ ಹಳೆ ತಮಿಳಿಗೆ ಹತ್ತಿರವಾಗಿತ್ತು ಅನಿಸುತ್ತದೆ. ಪುರಾತನ ತಮಿಳು ಕವಿಗಳು ಹೇಳಿದ ನನ್ನನ್ ಅರಸರು ಯಾರು? ತುಳು ಹಿರಿಯರು ಹೇಳುತಿದ್ದ ಅಜ್ಜಿಕತೆಗಳಲ್ಲಿ ನನ್ನನ್ ಎಂಬ ಹೆಸರು ಕೇಳಿಲ್ಲ, ಆದರೆ ಬಾಳಿ ಆಳಿ ಹೋದ "ನಂದರ" ಹೆಸರು ಕೇಳಿದ್ದುಂಟು! " ನಂದರಾಯನ ಬದುಕು ನರಿನಾಯಿ ತಿಂದೋಯ್ತು" ಎನ್ನುವುದು ತುಳುವಿನ ಹಳೆಯ ಗಾದೆಗಳಲ್ಲಿ ಒಂದು. ಒಬ್ಬ ನಂದ ಅರಸನ ಕಾಲದಲ್ಲಿ ಊರಿಗೆ ತೀವ್ರ ಬರಗಾಲ ಬಂದು, ತಿನ್ನಲು ಗತಿಯಿಲ್ಲದ ಬಡತನದ ಪರಿಸ್ಥಿತಿಯಲ್ಲಿ, ಆತ ಚರ್ಮದ ನಾಣ್ಯಗಳನ್ನು ಚಲಾವಣೆ ತಂದನಂತೆ. ಚರ್ಮದ ನಾಣ್ಯಗಳು ಕರಾವಳಿಯ ಅತಿ ಮಳೆಯಲ್ಲಿ ನೆನೆದು ಒದ್ದೆಯಾಗಿ ನರಿನಾಯಿಗಳಿಗೆ ಆಹಾರವಾಗಿದ್ದ ಪೂರ್ವಜರ ಪ್ರಸಂಗವನ್ನು ತುಳುವ ಹಿರಿಯರು ಗಾದೆಯಾಗಿ ನೆನಪಿನಲ್ಲಿ ಇಟ್ಟುಕೊಂಡಿದ್ದಾರೆ. ಆದರೆ, ತಮಿಳು ಕವಿಗಳು ಮೂರು ತಲೆಮಾರುಗಳ "ನಂದ" ( ಹಳೆತಮಿಳಲ್ಲಿ-"ನನ್ನನ್") ಅರಸರ ಬಗ್ಗೆ ಹಾಡಿ ಹೊಗಳಿವೆ. ತಮಿಳು ಅಗನಾನೂರು ಕಾವ್ಯದಲ್ಲಿ ಮೂವರು ನನ್ನನ್ (ನಂದ) ಎನ್ನುವ ಅಡ್ಡ ಹೆಸರುಗಳು ಮಾತ್ರಾ ಇದೆ. ಆ ಮೂರು ನಂದ ಅರಸರ ನಿಜವಾದ ಹೆಸರುಗಳು ಉಲ್ಲೇಖವಾಗಿಲ್ಲ. ಅಂದರೆ ಹಾಡಿದ ಸಂಗಂ ಕವಿಗಳಿಗೆ ನಂದರ ಹತ್ತಿರದ ಪರಿಚಯವಿರಲಿಲ್ಲ: ಅವರಿವರು, ಪ್ರವಾಸಿಗಳು ಹೇಳಿದ ಕಥನಗಳ ಆಧಾರದ ಮೇಲೆ ಕಾವ್ಯ ಕಟ್ಟಿದರೋ ಎನ್ನುವ ಸಂದೇಹ ಬಾರದೆ ಇರುವುದಿಲ್ಲ. ಸಂಗಂ ಕಾವ್ಯಗಳಲ್ಲಿ ವರ್ಣಿಸಿದ ತುಳುನಾಡ ಊರುಗಳೂ ಅಷ್ಟೇ! ಕೆಲವು ಹೆಸರುಗಳು ಪುರಾತನ ತಮಿಳರ ಉಚ್ಚಾರಣೆಯಲ್ಲಿ ಬದಲಾಗಿದ್ದರೆ, ಇನ್ನು ಹಲವು ಊರ ಹೆಸರುಗಳು ವಿಕಾಸದ ಕಾಲಾಂತರದಲ್ಲಿ ಬದಲಾಗಿರುವ ಸಾಧ್ಯತೆಗಳನ್ನು ಸೂಚಿಸುತ್ತವೆ.

ಅಂದ ಹಾಗೆ ಈ ನಂದರು ಎಲ್ಲಿಂದ ಬಂದರು? ಅವರ ಮೂಲವೆಲ್ಲಿ? ಒಂದು ಊಹೆಯ ಪ್ರಕಾರ ಇವರು ಕ್ರಿಸ್ತ ಪೂರ್ವ ೪ನೆ ಶತಮಾನದ ಹೊತ್ತಿಗೆ ಮಗಧ ರಾಜ್ಯ (ಇಂದಿನ ಬಿಹಾರ)ದ ಪಾಟಲಿಪುತ್ರದಲ್ಲಿ ಆಳುತಿದ್ದ ನಂದ ಅರಸರ ವಂಶಜರು. ನಂದರ ದುರಾಡಳಿತ ಸಹಿಸದೆ ಚಾಣಿಕ್ಯ ಚಂದ್ರಗುಪ್ತರ ಜೋಡಿ ನಂದರನ್ನು ಅಲ್ಲಿಂದ ಒದ್ದೋಡಿಸಿದರು. ಹಾಗೆ ವಲಸೆ ಬಂದವರ ವಂಶಜರು ಕರಾವಳಿಯ ಹಾಗೂ ದಕ್ಕಣದ ಊರುಗಳಲ್ಲಿ ನೆಲೆಯಾಗಿರಬಹುದು. ನಂದರು ಸಂಗಂ ಕಾಲದ ತಮಿಳು ಹೊಗಳುಭಟ ಕವಿಗಳ ಕಾವ್ಯಗಳಲ್ಲಿ ಕಾಣಿಸಿಕೊಳ್ಳಲು, ನಂದರು ಆ ಮೊದಲೇ ಪ್ರಾದೇಶಿಕವಾಗಿ ಹೆಸರಾಂತ ವ್ಯಕ್ತಿ (celebrity ಸೆಲೆಬ್ರಿಟಿ) ಗಳಾಗಿದ್ದ ಕಾರಣವಿರಬಹುದು.

ನಂದರು ಬಿಹಾರ/ಉತ್ತರ ಭಾರತದಿಂದ ಬಂದವರಾಗಿದ್ದರೆ ಪ್ರಾಕೃತ/ಮುಂಡಾ ಭಾಷೆಗಳೂ ಅವರೊಂದಿಗೆ ಇಲ್ಲಿಗೆ ಬಂದಿರುವ ಸಾಧ್ಯತೆ ದಟ್ಟವಾಗಿದೆ. ಕ್ರಿಸ್ತಶಕದ ಆರಂಭದ ಶತಮಾನಗಳಲ್ಲಿ ಕನ್ನಡನಾಡಿನಲ್ಲಿ ಪ್ರಾಕೃತ ಆಡಳಿತ ಭಾಷೆಯಾಗಿತ್ತು. ಉತ್ತರದ ಅರಸರ ಆಳ್ವಿಕೆಯಲ್ಲಿ ಇದ್ದ ಕಾರಣ ತುಳುನಾಡಿನಲ್ಲೂ ಅದೇ ರೀತಿ ಪ್ರಾಕೃತ/ಮುಂಡಾ ಭಾಷೆಗಳ ಉಪಸ್ಥಿತಿ ಇದ್ದಿರಬಹುದು.

ನಂದರ ಹೆಸರು ಹೇಳುವ ಊರುಗಳು ಬಹಳಿವಿವೆ. ಮಂಗಳೂರಿನ ಒಳಗೆ "ನಂದಿಗುಡ್ಡೆ" ಇದೆ. ಈಗ ಇಲ್ಲಿ ಸ್ಮಶಾನ ಇದೆ. ಕಂಕ(ಗಂಗ)ರು ಕೋಲಾರಕ್ಕೆ ಚಿನ್ನದ ಆಸೆಯಿಂದ ಹೋಗಿ ನೆಲಸಿದಂತೆ ನಂದರು ಕೂಡಾ ಕ್ರಮೇಣ ಕೋಲಾರಕ್ಕೆ ವಲಸೆ ಹೋಗಿ ನೆಲಸಿದಂತಿದೆ. ಕೋಲಾರದ "ನಂದಗುಡಿ" ಅವರು ಅಲ್ಲಿ ನೆಲೆಸಿದ್ದ ವಿಳಾಸ ತಿಳಿಸುವಂತಿದೆ. ಕೋಲಾರದ ನಂದಗುಡಿಗೂ, ಮಂಗಳೂರಿನ ನಂದಿಗುಡ್ಡೆಗೂ ಸಾಮ್ಯತೆ ನೋಡಿ. ಮಂಗಳೂರಿನ "ನಂದಿಗುಡ್ಡೆ" ಮೊದಲು "ನಂದಗುಡಿ"/"ನಂದಿಗುಡಿ" ಆಗಿದ್ದಿರಬಹುದೇ? ಉತ್ತರದ ಬಿಹಾರ-ಒಡಿಸಾ ಕಡೆ ಕೂಡಾ ನಂದಗುಡ ಹೆಸರಿನ ಗ್ರಾಮಗಳಿವೆ.

ಕರಾವಳಿಯಲ್ಲಿ ನಂದರ ಹೆಸರು ಹೇಳುವ ಇನ್ನೂ ಬಹಳ ಊರುಗಳಿವೆ; ನಂದಾವರ, ನಂದಳಿಕೆ, ನಂದಿಕೂರು, ನಂದೂರು, ನಂದನಬಿತ್ತಿಲ್ ..ಇತ್ಯಾದಿ. ನಂದರ ಕುಟುಂಬದವರು ಸಣ್ಣ ಸಣ್ಣ ಪಾಳಯಗಾರರಂತೆ ಅಲ್ಲಲ್ಲಿ ನೆಲಸಿದಂತಿದೆ.

**

ನಂತರದ ಮೌಕಿಕ ಜಾನಪದ ಇತಿಹಾಸದಲ್ಲಿ ನಂದ ಅರಸರು ಹರಿಜನರಾಗಿದ್ದಾರು ಎನ್ನಲಾಗಿದೆ. ಹಾಗೆಯೆ, ಹರಿಜನರಲ್ಲಿ ಇಂದಿಗೂ ನಂದಿ, ನಂದ, ನಂದು ಹೆಸರುಗಳು ಉಳಿದಿವೆ. ಸಂಗಂ ಕಾವ್ಯಗಳಲ್ಲಿ ಉತ್ತರ ಭಾರತದಿಂದ ರಥಗಳನ್ನು ಏರಿ ಬಂದ ಮೊರಿಯರು (ಮೌರ್ಯರು) ಮೊಹುರ(ಮುಗೇರ)ರ ಮೇಲೆ ಧಾಳಿ ನಡೆಸಿದ ಸುದ್ದಿ ಇದೆ. ಒಂದುಕಾಲದಲ್ಲಿ ಮುಗೇರರು ಆಳ್ವಿಕೆ ನಡೆಸಿದ ಮಾಹಿತಿ ಇಲ್ಲಿ ಸಿಗುತ್ತದೆ. ಹಾಗೆಯೆ ಕದಂಬರ ಕಾಲದ ಸಾಹಿತ್ಯದಲ್ಲಿ ಹಿಂದೆ ಕೊರಗರು ಕರಾವಳಿ ಭಾಗಗಳನ್ನು ಆಳಿದ ಸುದ್ದಿಗಳಿವೆ. ಜಾತಿ ಪದ್ದತಿಗಳು ಅನುಷ್ಠಾನಕ್ಕೆ ಮೇಲೆ ಮುಂದುವರಿದವರು ಎಂದು ಹೇಳಿಕೊಂಡವರು ಮೂಲವಾಸಿಗಳನ್ನು ಪರಿಶಿಷ್ಟರು ಎಂದು ದೂರವಿಟ್ಟ ಕಾರಣ ಈ ಬಗೆಯ ಸಾಮಾಜಿಕ ಮೇಲು-ಕೀಳು ಭಾವನೆಗಳು ಹುಟ್ಟಿರುವಂತಿದೆ.

**

ಸಂಗಂ ಕಾವ್ಯಗಳಲ್ಲಿ ನಂದರ ಕಾವ್ಯಮಯ ವರ್ಣನೆಗಳ ನಡುವೆ ಕಂಕರು ಮತ್ತು ಕೋಸರ ಯುದ್ದ ವೀರರ ಪ್ರಸ್ತಾಪ ಬಂದಿದೆ.

ಯುದ್ದವಿದ್ಯೆಯಲ್ಲಿ ನಿಪುಣರಾಗಿದ್ದ ಕೋಸರ ವೀರರ (<ಕಾಸರರು) ಕುರಿತಾಗಿ - ಕಾಸರಗೋಡು ಅವರ ನೆಲೆಯಾಗಿರಬಹುದು ಎಂದು ಡಾ| ಷ.ಶೆಟ್ಟರ್ ಅವರು ಊಹಿಸಿದ್ದಾರೆ.

ಕಂಕರು ಕನ್ನಡದ ಇತಿಹಾಸದಲ್ಲಿ ಗಮನಾರ್ಹ ಕಾಣಿಕೆ ನೀಡಿದವರು. ಕನ್ನಡ ಇತಿಹಾಸದಲ್ಲಿ ನಾಲ್ಕನೆ ಶತಮಾನದ ನಡುವೆ ಅವರು ಕೋಲಾರದಲ್ಲಿ ಪ್ರತ್ಯಕ್ಷರಾಗಿದ್ದಾರೆ! ಅವರು ಎಲ್ಲಿಂದ ಬಂದರು, ಆ ಮೊದಲು ಎಲ್ಲಿದ್ದರು ? ಇದು ಇತಿಹಾಸಕಾರರಿಗೆ ಬಗೆಹರಿಯದ ಚರ್ಚೆಯ ವಿಷಯಗಳು:

ನನ್ನ ಸೂಚನೆ: ಗಂಗರು ಮಂಗಳೂರಿಂದ ಬಂದಿರಬಹುದೆ? ಹೌದು, ಮಂಗಳೂರಿನ "ಕಂಕನಾಡಿ" ಗಂಗರ ಕನ್ನಡಪೂರ್ವ ರಾಜಚರಿತ್ರೆಯ ಕಳೆದುಹೋದ ಕೊಂಡಿಯಾಗಿರುವಂತಿದೆ! ಕ್ರಿಸ್ತಶಕದ ಆರಂಭದ ಹಳೆತುಳು- ಹಳೆಕನ್ನಡ ಭಾಷೆಗಳಲ್ಲಿ ತಮಿಳಿನಂತೆ ವ್ಯಂಜನಗಳ ಕೊರತೆ ಇದ್ದಂತಿದೆ. ಕ-ಗ ವ್ಯತ್ಯಾಸ ಆಗಿನ್ನು ಬಂದಿರಲಿಲ್ಲವೇನೋ. ಏಕೆಂದರೆ ಕರಾವಳಿಯ "ಕಂಕ"ರು ನಾಲ್ಕನೆ ಶತಮಾನದ ನಂತರ "ಗಂಗ"ರಾದರು! (ಅಂದರೆ: ಕಂಕ > ಗಂಗ; ಕಂಕಾವಳಿ > ಗಂಗಾವಳಿ; ಇತ್ಯಾದಿ ಭಾಷಾ ವಿಕಾಸದ ಬದಲಾವಣೆಗಳು). ಕಂಕರಿಗೆ ಕೊಂಗರು ಎನ್ನುವ ಹೆಸರೂ ಇತ್ತು. (ಕಂಕ>ಕೊಂಗ).

ಕರಾವಳಿಯ ಕಂಕರು (ಕಂಕ>ಗಂಗ) ಉತ್ತರದ ಕಡೆಯಿಂದ ಕರಾವಳಿಗೆ ಬಂದು ನೆಲಸಿ ಆಳುಪೆಯ ಹತ್ತಿರದ "ಕಂಕನಾಡಿ"ನಲ್ಲಿ ಆಳುತಿದ್ದಂತಿದೆ. ಮಹಾರಾಷ್ಟ್ರದ ಕಂಕಾವಳಿ, ಉತ್ತರ ಕನ್ನಡದ ಗಂಗಾವಳಿ, ಕುಂದಾಪುರದ ಸನಿಹದ ಗಂಗೊಳ್ಳಿ ಕಂಕ(ಗಂಗ)ರು ಉತ್ತರದಿಂದ ದಕ್ಷಿಣಕ್ಕೆ ಪಶ್ಚಿಮ ಕರಾವಳಿಯಲ್ಲಿ ವಲಸೆ ಬಂದ ದಾರಿಯನ್ನು ಸೂಚಿಸುತ್ತವೆ. ಮಂಗಳೂರಿನ "ಕಂಕನಾಡಿ" ಆಳುಪೆಯ ಪಕ್ಕದಲ್ಲಿರುವ ಊರು. (ಭೂಪಟ ನೋಡಿ). ಕಂಕ/ಗಂಗರು ಕ್ರಿಸ್ತಶಕ ೩೫೦ ರ ನಂತರ ಚಿನ್ನದ ಆಸೆಯಿಂದ ಕಂಕನಾಡಿಯಿಂದ ಕೋಲಾರಕ್ಕೆ ಹೋಗಿ ನೆಲಸಿದಂತೆ ಕಾಣುತ್ತದೆ. ಕೋಲಾರದಲ್ಲಿ ನೆಲೆಸಿದ ಮೊದಲ ಗಂಗ ಅರಸನ ಹೆಸರು ಕೊಂಗಾಣಿ ವರ್ಮನ್!. ಪಶ್ಚಿಮ ಕರಾವಳಿಗೆ ಕೊಂ-ಕಾನ ಎಂಬ ಹೆಸರು ಇದೆ ಎಂದು ಸಂಗಂ ಸಾಹಿತ್ಯ ತಿಳಿಸುತ್ತದೆ. "ಕೊಂ ಕಾನ"ದಿಂದ ವಲಸೆ ಬಂದು ನೆಲೆಯಾದವನು, ಇಲ್ಲವೆ ಕೊಂಗರ ನಾಯಕ "ಕೊಂಗಾಣಿ" ವರ್ಮ, ಅಲ್ಲವೇ? ಮುಂದೆ ಸ್ವಲ್ಪ ಕಾಲಾನಂತರ ಗಂಗ ಅರಸರು ಕೋಲಾರ (ಕುವಲಾಯ) ತೊರೆದು ಕಾವೇರಿಯ ದಡದ ತಲಕಾಡಲ್ಲಿ ನೆಲೆಸಿದರು.

**

ಸಂಗಂ ಕಾವ್ಯಗಳಲ್ಲಿ ಆಳುಪರ ಉಲ್ಲೇಖವಿಲ್ಲದೆ ಬಿಟ್ಟು ಹೋಗಿದೆ! ಬಹುಶ: ಅಗನಾನೂರು ರಚನೆಯಾದಾಗ ಅಳುಪರು ಇನ್ನೂ ಅರಸರಾಗಿರಲಿಲ್ಲ. ಅಥವಾ:ಆಗ ಅಳುಪರು ಗ್ರೀಕರ ಆ ಕಾಲದ ವರದಿಗಳು ಸೂಚಿಸುವಂತೆ ಜೀವನಕ್ಕಾಗಿ ಕಡಲಲ್ಲಿ ಪಾಂಡಿಗಳನ್ನು ಚಲಾಯಿಸಿ ವ್ಯಾಪಾರ ವಹಿವಾಟು ಮಾಡುತ್ತಾ ಕೆಲವೊಮ್ಮೆ ಸಂದರ್ಭಾನುಸಾರ ಕಡಲುಗಳ್ಳರಾಗಿದ್ದಂತೆ ಕಂಡು ಬರುತ್ತಾರೆ. ಕಡಲುಗಳ್ಳರು ಅಂದಾಗ ಸಂಗಂ ಕಾವ್ಯಗಳಲ್ಲಿ ಬರುವ "ಕರುಂಬ" ಕಡಲುಗಳ್ಳರ ಒಂದು ವೃತ್ತಾಂತ ನೆನಪಾಗುತ್ತದೆ. ಕರುಂಬ ನಾವಿಕರ ಒಂದು ತಂಡ ಕರಾವಳಿಯ ಕಡಲ ಒಂದು ದ್ವೀಪದಲ್ಲಿ ನೆಲೆಸಿದ್ದರು. (ಇಂದಿನ ಸೈಂಟ್ ಮೇರಿ ದ್ವೀಪಗಳೇ?.. ತಿಳಿಯದು). ದ್ವೀಪದಲ್ಲಿ ಅವರು ಕದಂಬ ಮರವನ್ನು ಬೆಳೆಸಿದ್ದು ಅದು ಅವರ ಕಾವಲು ಮರವಾಗಿತ್ತು. ಅಂದಿನ ಕಾಲದಲ್ಲಿ ಆಳುವ ಅರಸು ಮನೆತನದವರು ಒಂದು ನಿರ್ದಿಷ್ಟ ಮರವನ್ನು ಕಾವಲು ಮರವಾಗಿ ಇಟ್ಟುಕೊಂಡು ಪೂಜಿಸುವುದು ಆ ಕಾಲದ ರೂಡಿ. ನಂದ ಅರಸರ ಆಣತಿಯ ಮೇರೆಗೆ ಈ ಕರುಂಬ ವೀರರು ಚೇರನಾಡಿಗೆ (ಕೇರಳಕ್ಕೆ) ಹೋಗುವ ಯವನರ (ಗ್ರೀಕರು) ಹಡಗುಗಳನ್ನು ತಡೆದು ಸೂರೆಗೈದು ಬಂದ ಸಂಪತ್ತನ್ನು ನಂದರೊಂದಿಗೆ ಹಂಚಿಕೊಳ್ಳುತ್ತಿದ್ದಂತೆ ಕಾಣುತ್ತದೆ. ಈ ಕಾರಣವಾಗಿ ಕುಪಿತನಾದ ಒಬ್ಬ ಚೇರ ಅರಸ ತನ್ನ ಸೇನೆಯನ್ನು ಕಳುಹಿಸಿ ಈ ಕರುಂಬ ನಾವಿಕರ ತಂಡವನ್ನು ಸದೆಬಡೆದು ಬುದ್ದಿ ಕಲಿಸಿದನಂತೆ!

ಈ ಕತೆಯ ಬಗ್ಗೆ ಸಂಗಂ ಕಾವ್ಯಗಳ ವಿಮರ್ಶಕರಲ್ಲಿ ಎರಡು ಅಭಿಪ್ರಾಯಗಳಿವೆ. (೧) ಕದಂಬ ಮರ ಸಾಕಿದ್ದ ಕರಾವಳಿಯ ಕರುಂಬರು ನಂತರ ಬನವಾಸಿಯಲ್ಲಿ ನೆಲೆಸಿ ಆಳಿದ ಕದಂಬರ ಮೂಲಪುರುಷರು. (೨) ಅವರಿಗೂ ಇವರಿಗೂ ಸಂಬಂಧವಿರಲಿಕ್ಕಿಲ್ಲ.

ನನಗೆ ಒಂದನೆ ಅಭಿಪ್ರಾಯ ಸರಿಯೆಂದು ಕಾಣುತ್ತದೆ. ಕರುಂಬರು ಮುಂಡಾ ಜನಾಂಗಕ್ಕೆ ಸೇರಿದವರು. ಮುಂಡಾ ಆದಿವಾಸಿಗಳಿಗೆ ಕದಂಬ ಮರ ಪೂಜನೀಯ. ಕದಂಬ ಮರ ಇತಿಹಾಸದಲ್ಲಿ ಬನವಾಸಿ ಕದಂಬರ ವಂಶದ ಗುರುತಾಗಿ ಉಳಿದಿದೆ. ಕದಂಬರಂತೆ ಆಳುಪರೂ ಮುಂಡಾ ಜನಾಂಗಕ್ಕೆ ಸೇರಿದವರು. ಮುಂಡಾ ಜನರಿಗೆ ಸಿಂಗಬೊಂಗ (ಸೂರ್ಯ) ಅತೀ ಪೂಜನೀಯ ದೇವರು. ಆಳುಪೆಯ ಒಳಭಾಗದಲ್ಲಿ ಒಂದು ಸೂರ್ಯನಾರಾಯಣ ದೇವಸ್ಥಾನ ಇದೆ. ಅಪರೂಪವಾಗಿರುವ ಸೂರ್ಯನಾರಾಯಣ ದೇವಾರಾಧನೆಯ ಮೂಲ ಮುಂಡ ಜನಾಂಗ ಮೂಲದ "ಸಿಂಗಬೊಂಗ" ಪರಿಕಲ್ಪನೆ ಎಂದು ನನ್ನ ಅಭಿಪ್ರಾಯ.

ಕರುಂಬರ ಒಂದು ನೆಲೆ ಕರಂಬಾರು ಮಂಗಳೂರು ವಿಮಾನ ನಿಲ್ದಾಣದ ಹತ್ತಿರ ಇದೆ. ಕರುಂಬ/ಕದಂಬರಿಗೂ ಮಂಗಳೂರಿನ ಆಳುಪರಿಗೂ ಮೊದಲಿನಂದಲೂ ಸ್ನೇಹ ಬಾಂದವ್ಯವಿತ್ತು: ಏಕೆಂದರೆ ಕದಂಬರು ಬನವಾಸಿಗೆ ವಲಸೆ ಹೋಗಿ ಅಲ್ಲಿ ಹೊಸ ರಾಜ್ಯ ಸ್ಥಾಪಿಸಿದಾಗ ಅವರಿಗೆ ಸಹಾಯಕ್ಕೆ ಹೋದವರು ಮಂಗಳೂರಿನ ಆಳುಪ ಕುಟುಂಬದ ಯುವಕರು!

ಕದಂಬರ ಶಾಸನಗಳು ಹಳೆಗನ್ನಡದಲ್ಲಿವೆ. ಅಂದು ಹಳೆತುಳು ಮತ್ತು ಹಳೆಗನ್ನಡಗಳ ನಡುವೆ ಬಹಳ ವ್ಯತ್ಯಾಸ ಇರಲಿಲ್ಲ ಆದುದರಿಂದ ಕನ್ನಡದ ಬನವಾಸಿ ನೆಲದಲ್ಲಿ ತಳ ಊರಲು ಕದಂಬರಿಗೆ ಕಷ್ಟವಾಗಲಿಲ್ಲ. ಕದಂಬರೂ ಗಂಗರೂ ಸೇರಿ ಅದುವರೆಗೂ ನಾಡನ್ನು ಆಳಿದ ಪ್ರಾಕೃತ ಭಾಷೆಯ ಬಾವುಟವನ್ನು ಕೆಳಗಿಳಿಸಿ ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಮಾಡಿದರು.


**


ಸಾರಾಂಶ: ಮಂಗಳೂರಿನಲ್ಲಿ ಕ್ರಿಸ್ತಶಕದ ಆರಂಭ ಕಾಲದಿಂದಲೂ ಹಳೆತುಳುವಿನೊಂದಿಗೆ ಹಳೆಕನ್ನಡ ಭಾಷೆ ಅಸ್ಥಿತ್ವದಲ್ಲಿ ಇತ್ತು. ಆರಂಭದಲ್ಲಿ ಉತ್ತರದಿಂದ ಬಂದ ಅರಸರು ಆಳಿದ ಕಾರಣ ಪ್ರಾಕೃತ (ಮತ್ತು ಮುಂಡಾ) ಆಡಳಿತ ಭಾಷೆಗಳಾಗಿದ್ದಂತೆ ಕಂಡು ಬರುತ್ತದೆ.ಅಳುಪರು ಕದಂಬರ ಸ್ನೇಹಿತರಾಗಿದ್ದು, ಹಳೆಗನ್ನಡ (ಮತ್ತು ನಾಗರಿ) ಲಿಪಿಯನ್ನೇ ಶಾಸನಗಳಲ್ಲಿ, ನಾಣ್ಯಗಳಲ್ಲಿ ಬಳಸಿರುವುದು ಕನ್ನಡ ಭಾಷೆಯ ಬಳಕೆಗೆ ನಿದರ್ಶನವಾಗಿದೆ. ತುಳು ಭಾಷೆ ಮೌಕಿಕವಾಗಿಯೇ ಉಳಿದು ಬೆಳೆದು ಬಂತು. ತಿಗಳಾರಿ ಲಿಪಿಯನ್ನು ತುಳು ಭಾಷೆಯ ಬರವಣಿಗೆಗೆ ಬಳಸಿಕೊಂಡದ್ದು ಹತ್ತನೆಯ ಶತಮಾನದ ನಂತರ ಉಡುಪಿಯ ಮಠಗಳಲ್ಲಿ. ಸುಮಾರು ಹದಿಮೂರು-ಹದಿನಾಲ್ಕನೆಯ ಶತಮಾನದ ನಂತರದ ಶಾಸನಗಳಲ್ಲಿ ತಿಗಳಾರಿ - ತುಳು ಲಿಪಿ ಪ್ರಕಟವಾಗಿದೆ. ಹದಿನಾಲ್ಕನೆ ಶತಮಾನದಲ್ಲಿ ವಿಜಯನಗರ ಅರಸರು ಆಳಲು ಆರಂಬಿಸಿದ ಮೇಲೆ ಮಂಗಳೂರಿನಲ್ಲಿ ಕನ್ನಡದ ಬಳಕೆ ಇನ್ನಷ್ಟು ಗಟ್ಟಿಯಾಯಿತು.

:)


Comments

Popular posts from this blog

೩. ಜೋಗುಳ- ಒಂದು ಶಬ್ಧ ಮಿಮಾಂಸೆ

15. ದಕ್ಕಣ ಪೀಠಭೂಮಿ ಮತ್ತು ದಕ್ಕಣ ಟ್ರಾಪ್ಸ್( ಲಾವಾಭೂಮಿ)

13.ಮೂಲದ್ರಾವಿಡ ಭಾಷೆ -ಪ್ರೊಟೊ ದ್ರಾವಿಡಿಯನ್.