6.ಭೂಮಿಯ ಅಂತರಾಳ ಬಗೆದವಳು: ಇಂಗೆ ಲೇಮನ್

 ನಿಯತವಾಗಿ ಸೂರ್ಯನ ಸುತ್ತ ಬುಗುರಿಯಂತೆ ತಿರುಗುವ ಈ ಭೂಮಿ 6370 ಕಿಲೋಮೀಟರ್ ತ್ರಿಜ್ಯದ ಒಂದು ದೊಡ್ಡ ಗ್ರಹ.

ನಮ್ಮ ಭೂಮಿಯ ಒಳಗೇನಿದೆ?

ಭೂಮಿಯ ಅಂತರಂಗದಲ್ಲಿ ಏನಿದೆ ಎಂದು ನೋಡುವ ಹಂಬಲ ಅನೇಕರಿಗೆ ಇದ್ದರೂ, ಇಣುಕಲು ಯಾವುದೇ ಕಿಂಡಿ ಕಿಟಿಕಿಗಳು ಇರದ ಕಾರಣ ...ಅದು ಅಸಂಭವ!

**



ಭೂಮಿಯ ಅಂತರಂಗದಲ್ಲಿ ಮುಖ್ಯವಾಗಿ ಮೂರು ವಲಯಗಳಿವೆ. ಭೂಮಿಯ ಹೊರವಲಯದಲ್ಲಿ ಕಾಣುವ (೧) ತೊಗಟೆ (ಅಥವಾ ಹೊರಹೊದಿಕೆ; Crust), ಆನಂತರದ (೨) ಆವರಣ (Mantle) ಮತ್ತು ಕೇಂದ್ರಭಾಗದಲ್ಲಿರುವ (೩) ಭೂಗರ್ಭ (Core).

ಭೂಮಿಯೊಳಗೆ ಆಳಕ್ಕೆ ಹೋದಂತೆ ಉಷ್ಣತೆ ಹೆಚ್ಚುವುದನ್ನು ಗಣಿಗಳಲ್ಲಿ ಹಾಗೂ ಭೂ-ಉಷ್ಣ geothermal ಶಕ್ತಿಗಳ ಅಧ್ಯಯನಗಳಿಂದ ಮನಗಾಣಲಾಗಿತ್ತು. ಅದರಂತೆ, ಭೂಮಿಯ ಒಳಭಾಗ ಅತೀವ ಉಷ್ಣತೆಯ ಕಾರಣದಿಂದ ಕರಗಿದ ಲೋಹದಂತಿರಬಹುದು ಎಂಬ ಊಹೆ ಇತ್ತು. ಇಂತಹ ಊಹೆಗಳಿಗೆ ಸಮರ್ಥ ಉತ್ತರ ನೀಡಿದ ಭೂಕಂಪವಿಜ್ಞಾನಿಯೇ ಇಂಗೆ ಲೇಮನ್.



**

ಇಂಗೆ ಲೇಮನ್ (ಜನನ: ೧೩ ಮೇ ೧೮೮೮ - ಮರಣ: ೨೧ ಫೆಬ್ರುವರಿ ೧೯೯೩; Inge Lehmann) ಡೆನ್ಮಾರ್ಕ್ ದೇಶದ ಹೆಸರಾಂತ ಭೂಭೌತವಿಜ್ಞಾನಿ (Geophysicist) . ಕೋಪೆನ್'ಹೇಗನ್ ಮತ್ತು ಕೇಂಬ್ರಿಜ್ ವಿಶ್ವವಿದ್ಯಾಯಗಳಲ್ಲಿ ಗಣಿತ ಆಧ್ಯಯನ ಮಾಡಿದ ಆಕೆ ಭೂಕಂಪವಿಜ್ಞಾನದಲ್ಲಿ (seismology ) ಪರಿಣಿತರಾಗಿದ್ದಳು. ಇಂಗೆ ಲೇಮನ್ ೧೯೨೫ ರಿಂದ ೧೯೫೨ ರವರೆಗೆ ರಾಯಲ್ ಡಾನಿಶ್ ಜಿಯೊಡೇಟಿಕ್ ಇನ್'ಸ್ಟಿಟ್ಯೂಟಿನಲ್ಲಿ ಸೇವೆ ಸಲ್ಲಿಸಿದ್ದು, ೧೯೨೮ರಿಂದ ನಿವೃತ್ತಿಯವರೆಗೂ ಭೂಕಂಪವಿಜ್ಞಾನ ವಿಭಾಗದ ಮುಖ್ಯಸ್ಥೆಯಾಗಿದ್ದಳು. ಬಹಳ ವರ್ಷಗಳ ವರೆಗೆ ಡೆನ್ಮಾರ್ಕಿನ ಭೂಕಂಪನ ವಿಭಾಗದಲ್ಲಿ ಅವಳೊಬ್ಬಳೇ ಭೂಕಂಪವಿಜ್ಞಾನಿ.



ಸಂದ ಕಾಲ ಮತ್ತು ಕಂಪನಗಳನ್ನು ಜತೆಯಾಗಿ ದಾಖಲಿಸಲು ಕಂಪನಲೇಖಿ (seismographs) ಗಳನ್ನು ಉಪಯೋಗಿಸುತ್ತಾರೆ. ಅಂದಿನ ಕಾಲದ ಕಂಪಲೇಖಿಗಳು seismographs ಸರಳವಾಗಿದ್ದವು. ಉಪಕರಣದಲ್ಲಿರುವ ತೂಗುವ ಲೋಲಕಗಳು ಭೂಮಿ ಕಂಪಿಸಿದಾಗ ಕಂಪನ ತರಂಗಗಳಿಗೆ ಅನುಗುಣವಾಗಿ ಅಲ್ಲಾಡುತ್ತವೆ. ಲೋಲಕಗಳಿಗೆ ಅಳವಡಿಸಿದ ಲೇಖನಿ ಗಡಿಯಾರದ ಕಾಲ ವೇಗದಲ್ಲಿ ತಿರುಗುವ ಪಿಪಾಯಿಯ ಮೇಲಂಟಿಸಿದ ಕಾಗದದ ಮೇಲೆ ಗೀರುತ್ತಾ ಕಂಪನದ ಪ್ರಮಾಣವನ್ನು ದಾಖಲಿಸುತ್ತದೆ. ಕಂಪನಲೇಖಿ ಕಾಗದದ ಮೇಲೆ ಸಂದಕಾಲ ಹಾಗು ಅದಕ್ಕೆ ಸಲ್ಲುವ ಕಂಪತರಂಗಗಳು ದಾಖಲಾಗಿರುತ್ತವೆ.

ಭೂಕಂಪ ತರಂಗಗಳಲ್ಲಿ ಮುಖ್ಯವಾಗಿ ಪಿ- (ಪ್ರಮುಖ) ತರಂಗಗಳು ಮತ್ತು ಎಸ್- (ದ್ವಿತಿಯ) ತರಂಗಗಳು ಎಂದು ಎರಡು ವಿಧಗಳಿವೆ. ಕಂಪನಲೇಕಿಯಲ್ಲಿ ಪಿ - (ಪ್ರಮುಖ,Primary) ತರಂಗಗಳು ಕ್ಷಿಪ್ರವಾಗಿ ದಾಖಲಾಗುತ್ತವೆ.ಎಸ್-(ದ್ವಿತಿಯ, Secondary) ತರಂಗಗಳು ನಿಧಾನವಾಗಿ ದಾಖಲಾಗುತ್ತವೆ.




**

೧೯೨೦ರಿಂದ ೧೯೩೦ ರ ಅವಧಿಯಲ್ಲಿ ತನ್ನ ಡೆನ್ಮಾರ್ಕ್ ಮತ್ತು ಗ್ರೀನ್'ಲ್ಯಾಂಡ್ ದೇಶ ವ್ಯಾಪ್ತಿಯಲ್ಲಿ ಭೂಕಂಪಗಳನ್ನು ದಾಖಲಿಸಲು ಅನೇಕ ಕಂಪಲೇಖಿಗಳನ್ನು (seismographs) ಗಳನ್ನು ನಿಯೋಜಿಸಿದಳು. ಕಂಪಲಲೇಖಿಗಳ ಸಮೂಹ ನಿಯೋಜನೆಯಿಂದ ಅವಳಿಗೆ ಜಗತ್ತಿನ ಮೂಲೆಮೂಲೆಗಳಲ್ಲಿ ಸಂಭವಿಸಿದ ಭೂಕಂಪಗಳ ಮಾಹಿತಿ ತಾನಿದ್ದಲ್ಲೇ ದೊರೆಯಲಾರಂಬಿಸಿತು. ಆಗಿನ ಕಾಲದಲ್ಲಿ ಗಣಕಯಂತ್ರಗಳು ಇನ್ನೂ ಬಂದಿರಲಿಲ್ಲ. ಕಂಪನಮಾಹಿತಿಗಳನ್ನು ದಪ್ಪಕಾಗದಗಳಲ್ಲಿ ಬರೆದುಕೊಂಡು ತಾಳ್ಮೆಯಿಂದ ವಿಶ್ಲೇಷಣೆ ಮಾಡಬೇಕಾಗಿತ್ತು.

ದೂರದೂರದ ಪ್ರದೇಶಗಳಲ್ಲಿ ಭೂಮಿ ಕಂಪಿಸುವಾಗ ಉತ್ಪತ್ತಿಯಾದ ತರಂಗಗಳನ್ನು ಅಧ್ಯಯನಮಾಡಿ ಭೂಮಿಯ ಅಂತರಾಳದ ಗರ್ಭ ವಲಯದೊಳಗೆ ಎರಡು ಉಪವಲಯಗಳು ಇರುವುದನ್ನು ಗುರುತಿಸಿದಳು. ಕರಗಿದ ಹೊರಗರ್ಭ (Outer core) ವಲಯದೊಳಗೆ ಇರುವ ಒಳಗರ್ಭ( Inner core) ವಲಯ ಘನಸ್ಥಿತಿ (ಗಟ್ಟಿಯಾದ ರೂಪ) ಹೊಂದಿದೆ ಎಂದು ೧೯೩೬ ರಲ್ಲಿ ವಿವರಿಸಿದಳು. ಅದುವರೆಗೂ ಭೂಗರ್ಭ ವಲಯ ಪೂರ್ಣವಾಗಿ ಕರಗಿದ ದ್ರವಸ್ಥಿತಿಯಲ್ಲಿದೆ ಎಂದು ನಂಬಲಾಗಿತ್ತು.

**


ಇಂಗೆ ಲೇಮನ್ ಕಂಪನ ತರಂಗಗಳ ಅಧ್ಯಯನದಿಂದ ತಾನು ಕಂಡು ಹಿಡಿದ ವಿಶಿಷ್ಟ ಮಾಹಿತಿಗಳನ್ನು ಸಮಕಾಲೀನ ಭೂಕಂಪವಿಜ್ಞಾನಿ ಇಂಗ್ಲೇಂಡ್, ಕೇಂಬ್ರಿಜಿನ ಹೆರಾಲ್ಡ್ ಜೆಫ್ರೀಸ್ ( Harold Jeffreys ) ಒಂದಿಗೆ ಪತ್ರ ಮುಖೇನ ಬರೆದು ಚರ್ಚಿಸುತಿದ್ದಳು. ನಾಲ್ಕು ವರ್ಷಗಳ ಸತತ ಅಧ್ಯಯನಗಳ ನಂತರ ತನ್ನ ಸಂಶೋಧನೆಯ ವಿವರಗಳನ್ನು ಪ್ರಕಟಿಸಿದಳು. ಅವಳ ಸಂಶೋಧನೆಗಳಲ್ಲಿ ಮುಖ್ಯವಾದದ್ದು. ಕಂಪನಮಾಪಿಗೆ ತಡವಾಗಿ ಬರುವ ಪಿ' ತರಂಗಗಳ ಕುರಿತಾಗಿ ಹಾಗೂ ಅವುಗಳ ಆಧಾರದ ಮೇಲೆ ವಿವರಿಸಿದ ಗಟ್ಟಿರೂಪದಲ್ಲಿರುವ ಒಳಗರ್ಭ ವಲಯದ ಬಗ್ಗೆ.



ನ್ಯೂಜಿಲ್ಯಾಂಡಿನ ಬುಲ್ಲರ್ ಎಂಬಲ್ಲಿ ೧೯೨೯ ರಲ್ಲಿ ಸಂಭವಿಸಿದ ಒಂದು ಭೂಕಂಪದಿಂದ ಬಂದ ಕಂಪಮಾಪಿ ದಾಖಲೆಗಳು ಆಕೆಗೆ ದಿಗ್ಬ್ರಮೆ ಉಂಟುಮಾಡಿದ್ದವು!. ಎರಡು ಕಂಪಮಾಪಿ ತಾಣಗಳು ನೆರಳಿನ ಮಂಡಲ (shadow zone) ದಲ್ಲಿದ್ದರೂ ವಿಶೇಷವಾಗಿ ಅಸಮಾನ್ಯವೆನಿಸುವಷ್ಟು ದೊಡ್ಡದಾಗಿದ್ದ ಪಿ-ತರಂಗ ಲಂಬಿಕೆ (amplitude)ಗಳನ್ನು ದಾಖಲಿಸಿದ್ದವು. ಒಂದು ಪಕ್ಷ ಭೂಗರ್ಭ ವಲಯವೇನಾದರೂ ಪೂರ್ಣ ದ್ರವಸ್ಥಿತಿಯಲ್ಲಿ ಇದ್ದರೆ, ನೆರಳಿನ ಮಂಡಲದಲ್ಲಿದ್ದ ಕಂಪಮಾಪಿ ತಾಣಗಳಲ್ಲಿ ಈ ಬಗೆಯ ತರಂಗಗಳು ದಾಖಲಾಗಲೇ ಬಾರದಿತ್ತು. ಈ ವಿಶಿಷ್ಟ ಮಾಹಿತಿ ಇಂಗೆ ಲೇಮನ್'ಗೆ ಯುರೋಪಿನ ಕಂಪಮಾಪಿ ದಾಖಲೆಗಳ ಇನ್ನಷ್ಟು ವಿವರವಾದ ಅಧ್ಯಯನಗಳನ್ನು ಮಾಡಲು ಪ್ರೇರೇಪಿಸಿತು.

**



.೧೯೬೦ ರ ನಂತರ ಕಂಪಮಾಪಿಗಳ ತಂತ್ರಜ್ಞಾನ ಬಹಳಷ್ಟು ಸುಧಾರಣೆಯಾಗಿದೆ. ೧೯೭೦ ರಲ್ಲಿ ಪ್ರಕಟವಾದ ಒಂದು ಅಧ್ಯಯನದಲ್ಲಿ ಒಳಗರ್ಭ ಘನವಾಗಿರುವ ಕಾರಣ ಪಿ ತರಂಗಗಳು ವಕ್ರೀಭವನ ಹೊಂದುವುದೆಂದು ಸಾಧಿಸಲಾಯಿತು. ನಂತರದ ಅಧ್ಯಯನಗಳಲ್ಲಿ ಒಳಗರ್ಭ ವಲಯ ಹೊರಗರ್ಭವಲಯಕ್ಕಿಂತ ಭಿನ್ನವಾಗಿ ತಿರುಗುವುದನ್ನು ಗಮನಿಸಲಾಯಿತು. ಆಧುನಿಕ ಭೂಕಂಪವಿಜ್ಞಾನ ಆಧುನಿಕ ಅನ್ವೇಷನೆಗಳು, ಸುಧಾರಿತ ಉಪಕರಣಗಳು ಹಾಗೂ ಗಣಕಯಂತ್ರಗಳ ಸಹಾಯಗಳಿಂದ, ದಾಪುಗಾಲಿಂದ ವಿಕಾಸ ಹೊಂದುತ್ತಾ ಬಂದಿದೆ. ಆದರೆ ಇಂಗೆ ಲೇಮನ್ ಅವರ ಸಾಧನೆ-ಶೋಧನೆಗಳನ್ನು ವಿಜ್ಞಾನದ ಜಗತ್ತು ಎಂದೂ ಮರೆಯುವಂತಿಲ್ಲ.

: )

ಇಲ್ಲಿರುವ ಎಲ್ಲಾ ಚಿತ್ರಗಳ ಕೃಪೆ; ಅಂತರ್ಜಾಲ

Comments

Popular posts from this blog

೩. ಜೋಗುಳ- ಒಂದು ಶಬ್ಧ ಮಿಮಾಂಸೆ

13.ಮೂಲದ್ರಾವಿಡ ಭಾಷೆ -ಪ್ರೊಟೊ ದ್ರಾವಿಡಿಯನ್.

12.ತುಳು ಲಿಪಿ ಮತ್ತು ತಿಗಳಾರಿ ಲಿಪಿ