10. ಕನ್ನಡ ನಾಡಿನ ಪೂರ್ವೇತಿಹಾಸ -ಕಡಲ ವ್ಯಾಪಾರಗಳೂ ವಿದೇಶಿ ಸಂಪರ್ಕಗಳೂ



ಕನ್ನಡನಾಡಿನ ಪೂರ್ವೇತಿಹಾಸದ ಅಂಧಕಾರದಲ್ಲಿ ಅಡಗಿರುವ ಪ್ರಾಚೀನ ವಿದೇಶಿ ಸಂಪರ್ಕಗಳ ನಿಗೂಢ ಹೊಳಹುಗಳು ಕುತೂಹಲಕಾರಿಯಾಗಿವೆ

ಆಫ್ರಿಕಾ ಖಂಡದ ಹಾಗೂ ಮೆಡಿಟರೇನಿಯನ್ ವಲಯದ ಹಲವು ದೇಶಗಳಲ್ಲಿ ಆಗಿರುವಷ್ಟು ವ್ಯಾಪಕ ಪೂರ್ವೇತಿಹಾಸ ಸಂಶೋಧನೆ ನಮ್ಮಲ್ಲಿ ಇನ್ನೂ ಆಗದೆ ಇರುವುದು ನಮ್ಮ ಮುಂದಿರುವ ದೊಡ್ಡ ಸವಾಲು ಆಗಿದೆ.

ನನ್ನ ಗಮನಕ್ಕೆ ಬಂದ ಪೂರ್ವೇತಿಹಾಸದ ಹಲವು ಪೂರಕ ಮಾಹಿತಿಗಳು ಇಲ್ಲಿವೆ:

ಚಿತ್ರ ೧:ಕಡಲ ವ್ಯಾಪಾರ....


**

ಕರಾವಳಿ ಪ್ರದೇಶ ಪೂರ್ವೇತಿಹಾಸ ಕಾಲದಿಂದಲೂ ಕನ್ನಡ ನಾಡಿನ ಎಲ್ಲಾ ಅರಸರಿಗೆ ಕಡಲ ಕಡೆಯ ಹೆಬ್ಬಾಗಿಲು ಆಗಿತ್ತು. ಕನ್ನಡದ ರಾಜ್ಯಗಳ ಸ್ಥಾಪನೆಯ ಇತಿಹಾಸದಲ್ಲಿ ಕರಾವಳಿಯ ಸಾಹಸೀ ಯುವಕರ ಪಾತ್ರ ದೊಡ್ಡದಿದೆ. ಇತಿಹಾಸದ ಕದಂಬರು, ಆಳುಪರು, ಗಂಗರು ಮತ್ತು ಪುನ್ನಾಟರು ಕರಾವಳಿಯ ಜಿಗಿಹಲಗೆ (spring board) ಯಿಂದ ಸಹ್ಯಾದ್ರಿಯ ಆಚೆಗೆ ನೆಗೆದು ಪ್ರಾಚೀನ ಕನ್ನಡ ರಾಜ್ಯಗಳ ಸ್ಥಾಪನೆಯಲ್ಲಿ ಕೈಜೋಡಿಸಿದವರೇ ಆಗಿದ್ದಾರೆ.

ಇತಿಹಾಸದ ಉದ್ದಕ್ಕೂ ಕರಾವಳಿಯಲ್ಲಿ ಕನ್ನಡವೇ ಆಡಳಿತ ಭಾಷೆಯಾಗಿ ಉಳಿದಿರಲು, ತುಳು ಮುಂತಾದ ಉಳಿದ ಸ್ಥಳೀಯ ಭಾಷೆಗಳು ಬರವಣಿಗೆ ವಂಚಿತ, ಸಂಪರ್ಕದ ಮಾತುಗಳಾಗಿಯೇ ಇತಿಹಾಸದ ನೇಪಥ್ಯದ ಹಿಂದೆ ಉಳಿದಿರಲು ಕಡಲ ಮೂಲದ ವ್ಯಾಪಾರ ಸಂಪರ್ಕ-ಸಂಘರ್ಷಗಳು ಪ್ರಮುಖ ಕಾರಣವಾಗಿದೆ.

**

ಮಾನವನ ಉಗಮ ಸುಮಾರು ಎರಡು ಲಕ್ಷ ವರ್ಷಗಳ ಹಿಂದೆ ಆಫ್ರಿಕಾಖಂಡದಲ್ಲಿ ಆಯಿತೆಂದು ಜೀವವಿಜ್ಞಾನಿಗಳು ತಿಳಿಸಿದ್ದಾರೆ.

ಇತಿಯೋಪಿಯಾದ ಓಮೋ (Omo) ಕಣಿವೆ ಜಗತ್ತಿನ ಅತೀ ಪ್ರಾಚೀನ ಮಾನವ ಅಸ್ಥಿಪಂಜರ ಪಳಿಯುಳಿಕೆಗಳು ದೊರೆತ ಸ್ಥಳಗಳಲ್ಲಿ ಒಂದು.

ಅದರಂತೆ ಮೊದಲ ಮಾನವರು ಆಫ್ರಿಕಾದಲ್ಲಿ ಉದಯಿಸಿ ನಂತರದ ಇತಿಹಾಸದಲ್ಲಿ ಮಾನವ ಸಂತತಿ ಜಗತ್ತಿನ ತುಂಬೆಲ್ಲ ಪಸರಿಸಿತು ಎನ್ನುವುದು ಜನಪ್ರಿಯ ಸಿದ್ದಾಂತಗಳಲ್ಲಿ ಒಂದು.

ಸುಮಾರು ೬೦ ಸಾವಿರ ವರ್ಷಗಳ ಹಿಂದೆ ಬರಗಾಲದ ಕಾರಣ ಆಫ್ರಿಕಾದಿಂದ ವಲಸೆ ಹೊರಟ ಆದಿಮಾನವರ ತಂಡ ಭರತಖಂಡಕ್ಕೆ ಬಂದು ನೆಲೆ ಊರಿದರೆಂಬ ಸಂಗತಿ ಇದೆ. ಹೀಗೆ ವಲಸೆ ಬಂದವರಲ್ಲಿ ಕೆಲವು ಸಾಹಸಿಗಳು ಭರತಖಂಡವನ್ನು ದಾಟಿ ಹೋಗಿ ಆಗ್ನೇಯ-ಏಸಿಯಾದ ದೇಶಗಳಲ್ಲಿ ನೆಲೆಸಿ "ಅಸ್ಟ್ರೋ-ಏಸಿಯಾಟಿಕ್" (Austro-asiatic) ಸಮುದಾಯವಾದರು.

ವರ್ಷಗಳು ಉರುಳಿದಂತೆ, ದ್ವೀಪವಾಸಿಗಳಾದ ಅಸ್ಟ್ರೋ-ಏಸಿಯಾಟಿಕ್ ಸಮುದಾಯದ ಜನ ದೋಣಿಗಳ ವಿನ್ಯಾಸದಲ್ಲಿ ಹಾಗೂ ಸುಗಮ ಕಡಲು ಪ್ರಯಾಣದ ತಂತ್ರಜ್ಞಾನದಲ್ಲಿ ನಿಷ್ಣಾತರಾದರು. ಅವರದೇ ಆದ ಭಾಷೆಗಳನ್ನು ರೂಡಿಸಿಕೊಂಡರು.

ಅದೆಷ್ಟೋ ವರ್ಷಗಳ ನಂತರದ ತಲೆಮಾರಿನ ಆಗ್ನೇಯೇಸಿಯಾದ ಸಾಹಸಿ ನಾವಿಕರು ತಮ್ಮ ದ್ವೀಪ ದೇಶಗಳಿಂದ ಜಲಮಾರ್ಗದಲ್ಲಿ ವಿಶಿಷ್ಟ ದೋಣಿಗಳಲ್ಲಿ ಹೊರಟು ಭಾರತ ಹಾಗೂ ಆಪ್ರಿಕಾದ ಕರಾವಳಿಗಳಿಗೆ ಪ್ರವಾಸ ಹೊರಟರು. ಬಂದವರಲ್ಲಿ ಕೆಲವರು ಮನಸೋತು ಇಲ್ಲಿಯೇ ನೆಲೆ ನಿಂತರು. ಹೀಗೆ ಭರತಖಂಡದಲ್ಲಿ ನೆಲೆನಿಂತ ಆಗ್ನೇಯೇಸಿಯಾ ಮೂಲದ ಆದಿವಾಸಿ ಜನಾಂಗಗಳನ್ನು ಮುಂಡಾ ಸಮುದಾಯವೆಂದು ಗುರುತಿಸಲಾಗಿದೆ.

ಮಾನವ ಜೀವಕಣಗಳಲ್ಲಿ ಇರುವ ವಂಶವಾಹಿಗಳ ("ಜೀನು"ಗಳ genes) ಅಧ್ಯಯನಗಳಿಂದ ವಿಜ್ಞಾನಿಗಳು ಈ ಬಗೆಯ ಜಾಗತಿಕ ವಲಸೆಯ ಪಥಗಳನ್ನು ಗುರುತಿಸಿದ್ದಾರೆ.

ಭರತಖಂಡದಲ್ಲಿ ನೆಲೆಸಿದ ಮೂಲವಾಸಿಗಳು ತಾವು ಆಪ್ರಿಕಾದಿಂದ ತಂದ ಮಾತುಗಳನ್ನು ಕಾಲಕಳೆದಂತೆ ಪರಿಷ್ಕರಿಸಿಕೊಂಡು ತಮ್ಮದೇ ಆದ ಭಾಷೆಗಳನ್ನು ರೂಡಿಸಿಕೊಂಡರು. ಈ ಆದಿಜನಾಂಗಗಳ ಭಾಷೆಗಳನ್ನು ಈಗ ಒಟ್ಟಾಗಿ "ಪ್ರಾಕೃತ" ಭಾಷೆಗಳೆಂದು ಹೆಸರು ನೀಡಲಾಗಿದೆ.

ಹಾಗೆಯೇ ಆಗ್ನೇಯೇಸಿಯಾ ಮೂಲದ ಸಂತತಿಗಳ ಭಾಷೆಗಳನ್ನು "ಮುಂಡಾ" ಭಾಷೆಗಳೆಂದು ತಿಳಿಯಲಾಗಿದೆ.

**

ಆಪ್ರಿಕಾದಿಂದ ಭರತಖಂಡಕ್ಕೆ ವಲಸೆ ಬಂದವರು ತಮ್ಮೊಂದಿಗೆ ತಮ್ಮ ಮೂಲದ ಮಾತುಗಳನ್ನೂ ತಂದಿರ ಬೇಕಲ್ಲ?

ಹುಡುಕಿದರೆ ಇಂತಹ ಆಫ್ರಿಕಾ ಮೂಲದ ಪದಗಳು ಸ್ಥಳನಾಮಗಳು ಪದಗಳ ಪಳಿಯುಳಿಕೆಗಳು ಭರತಖಂಡದ ಉದ್ದಗಲಕ್ಕೂ ಸಿಗುತ್ತವೆ. ಶಾಸನಗಳ ಸಾಕ್ಷಾಧಾರ ಸಿಗುವ ಹಿಂದಿನ ಕಾಲದಲ್ಲಿ ನಡೆದ ಇತಿಹಾಸದ ಘಟನೆಗಳಿಗೆ ಅಂದಿನ ಪ್ರಾಚೀನ ಪದಗಳ ಪಳಿಯುಳಿಕೆಗಳೇ ಆಧಾರವಾಗಬಲ್ಲವು.

ಕರಾವಳಿ ಭಾಗದಲ್ಲಿ ನನಗೆ ದೊರೆತ ಕೆಲವು ಆಪ್ರಿಕಾ ಆದಿವಾಸಿ ಮೂಲದಿಂದ ಬಂದಿರಬಹುದಾದ ಕುತೂಹಲಕಾರಿ ಪದಗಳನ್ನು, ಸ್ಥಳನಾಮಗಳನ್ನು  ಗಮನಿಸಿ:

೧. ತುಳು (Tulu) ! - ಇತಿಯೋಪಿಯಾದ ಅನೇಕ ಸ್ಥಳನಾಮಗಳು "ತುಳು" ಪದದಿಂದ ಆರಂಭ ವಾಗುತ್ತವೆ ! ಪದದ ಮೂಲ ಅರ್ಥ ಸ್ಪಷ್ಟವಿಲ್ಲ.

೨. ಬಂಟು (Bantu)! - ತುಳು ನಾಡವ ಬಾಂಧವರು ಸಮುದಾಯ ಸೂಚಕವಾಗಿ ಅಂಗೀಕರಿಸಿರುವ ನಾಮ ಪದ "ಬಂಟ್" ಆಪ್ರಿಕಾ ಮೂಲದ್ದು. ಅಲ್ಲಿ - ಬಂಟು- ಎಂದರೆ ಜನ ಎಂದರ್ಥ.

೩. ಕಿನ್ಯಾ (Kenya) - ತುಳುನಾಡಿನಲ್ಲಿ ಕನಿಷ್ಟ ಎರಡು ಊರುಗಳಿಗೆ ಕಿನ್ಯಾ/ಕೇನ್ಯಾ ಎಂಬ ಹೆಸರಿದೆ. ಕಿನ್ಯಾ ಆಪ್ರಿಕಾದ ಒಂದು ಪ್ರಾಂತ್ಯ/ದೇಶದ ಹೆಸರು.ಪದದ ಮೂಲ ಅರ್ಥ ಸ್ಪಷ್ಟವಿಲ್ಲ.

೪. ಮೇರು (Meru) - ನಮ್ಮ ಸಂಸ್ಕೃತಿಯಲ್ಲಿ ಪುರಾಣ ಕತೆಗಳಲ್ಲಿ ಮೇರು ಪರ್ವತದ ಹೆಸರು ಅಲ್ಲಲ್ಲಿ ಬರುವುದುಂಟು. ಮೇರು ಪರ್ವತ ಇರುವುದು ಆಪ್ರಿಕಾದಲ್ಲಿ. ಪದದ ಮೂಲ ಅರ್ಥ ಸ್ಪಷ್ಟವಿಲ್ಲ.

೫. ಓಮೊ (Omo) - ಓಮ: ಇದು ಇತಿಯೋಪಿಯಾದಲ್ಲಿ ಆದಿಮಾನವರ ಮೂಲ ನೆಲೆ - ಪಳಿಯುಳಿಕೆಗಳು ದೊರೆತ ಕಣಿವೆ-ಯ ಹೆಸರು. ಕರಾವಳಿಯ ಕನಿಷ್ಟ ಎರಡು ಊರ ಹೆಸರುಗಳಲ್ಲಿ "ಓಮ" ಸೇರಿ ಇಂದಿಗೂ ಉಳಿದುಕೊಂಡಿದೆ. (ಅ) ಓಮಂಜೂರು ಅಥವಾ ವಾಮಂಜೂರು (ಆ) ಓಮದ ಪದವು/ವಾಮದಪದವು. ಪದದ ಮೂಲ ಅರ್ಥ ಸ್ಪಷ್ಟವಿಲ್ಲ.

೬. ಕಾಪ್ರಿ (Capri) - ಕಾಪ್ರಿ ಒಂದು ಆಪ್ರಿಕಾ ಮೂಲದ ಕೀಟದೇವತೆ/ದೈವ. (ಅ) "ಕಾಪ್ರಿ" ಆರಾಧನೆ ಕಾರವಾರದ ಭಾಗದಲ್ಲಿ ಈಗಲೂ ಇದೆ!. (ಆ) ಕಾಪ್ರಿ ಗುಡ್ಡ -ಇದು ಮಂಗಳೂರಿನ ಒಂದು ಹಳೆಯ ಬಡಾವಣೆಯ ಹೆಸರು.

೭. ಉರ್ (Ur) - ಉರ್:- ಸುಮಾರು ೬೦೦೦ ವರ್ಷಗಳ ಹಿಂದಿನ ಸುಮೇರಿಯಾ ನಾಗರೀಕತೆಯಲ್ಲಿ ಇದ್ದ ಒಂದು ನಗರ/ಊರಿನ ಹೆಸರು. ದ್ರಾವಿಡ ಭಾಷೆಗಳಲ್ಲಿ ಇರುವ ಪರಿಚಿತ ಪದ ಊರು.

**

ಆಗ್ನೇಯೇಸಿಯಾ ಮುಂಡಾ ಮೂಲದ ಹಡಗು ಕಟ್ಟುವುದರಲ್ಲಿ ನಿಷ್ಣಾತರಾದ ಆದಿವಾಸಿ ನಾವಿಕರು ಕರಾವಳಿಗೆ ಬಂದಿರ ಬೇಕಲ್ಲ?

ಹೌದು, ಬಂದದ್ದು ಮಾತ್ರಾವಲ್ಲ, ಕರಾವಳಿ ಕೆಲವರಿಗೆ ಹಿಡಿಸಿದ್ದು ಇಲ್ಲಿಯೇ ನೆಲೆಸಿರಬೇಕು. ತುಳು ಕನ್ನಡ ಮತ್ತಿತರ ಸಹಭಾಷೆಗಳಿಗೆ ಮುಂಡಾ ಮೂಲದ ಪದಗಳನ್ನು ಎರವಲು ನೀಡಿದವರು ಅವರೇ ಅಲ್ಲವೆ? ಕದಂಬರು, ಆಳುಪರು ಮುಂಡಾ ಮೂಲದವರಲ್ಲವೇ?

ಆಗ್ನೇಯೇಸಿಯಾದ ದ್ವೀಪ ದೇಶ ಮಲಯ ಭಾಷೆಯ ಪದ "ಪರಹು" (=ಹಡಗು) ತುಳುವಿನಲ್ಲಿ "ಪಡವು" ಆಗಿದೆ. ತುಳುವಿನ "ಪಡವು" ಹಳೆಗನ್ನಡದಲ್ಲಿ "ಪಡಗು" ಆಗಿ ಹೊಸಗನ್ನಡದಲ್ಲಿ "ಹಡಗು" ಆಗಿದೆ. ಇದೇ ಪದ ತಮಿಳಿನಲ್ಲಿ "ಪಟಕ", ಸಿಂಹಳಿಯಲ್ಲಿ "ಪರುವ", ಪ್ರಾಕೃತದಲ್ಲಿ "ಪರ್ವಾ" ಇತ್ಯಾದಿ ಆಗಿರುವುದು, ಆಗ್ನೇಯೇಸಿಯಾದ ಪ್ರಾಚೀನ ನಾವಿಕರು ಇಲ್ಲೆಲ್ಲಾ ಕಡಲ ಮಾರ್ಗದಲ್ಲಿ ಓಡಾಡಿರುವುದಕ್ಕೆ ಸಾಕ್ಷಾಧಾರಗಳಾಗಿವೆ.

**

ಬೆರ್ಮೆರ್ ದೈವದ ಪರಿಕಲ್ಪನೆ

ಕರಾವಳಿ ತುಳುನಾಡಲ್ಲಿ ಭೂತಾರಾಧನೆ ಲಾಗಾಯ್ತಿನಿಂದ ಬಂದ ವಿಶಿಷ್ಟ ಸಂಪ್ರದಾಯ ಎನ್ನುವುದು ತಿಳಿದ ಸಂಗತಿ. ಭೂತಾರಾಧನೆಯ ವ್ಯಾಪ್ತಿಗೆ ಬರುವ ಪ್ರಾಚಿನ ಸಂಪ್ರದಾಯಗಳಲ್ಲಿ ಬೆರ್ಮೆರಿಗೆ ಒಂದು ವಿಶೇಷ ಸ್ಥಾನವಿದೆ. ಬೆರ್ಮೆರ್ ಆರಾಧನೆ ಕರಾವಳಿ ಅಥವಾ ತುಳುನಾಡಿಗೆ ಸೀಮಿತವಾದ ಸಂಪ್ರದಾಯವಲ್ಲ. ಕನ್ನಡದ ಊರುಗಳಲ್ಲಿ ಬೊಮ್ಮಯ್ಯ ದೇವರು ಆಗಿ ಇದ್ದದ್ದು ಇದೇ ಬೆರ್ಮೆರ್. ಬೆರ್ಮೆರ್ ಅಥವಾ ಬೊಮ್ಮಯ್ಯ ದೈವದ ಮೂಲವನ್ನು ಹುಡುಕುತ್ತಾ ಹೋದರೆ ನಾವು ಸುಮೇರಿಯಾದ ಇತಿಹಾಸಕ್ಕೆ ಹೋಗಿ ಮುಟ್ಟುತ್ತೇವೆ. ಅಲ್ಲಿ ಕ್ರಿಸ್ತಪೂರ್ವ ೨೦೦೦ ವರ್ಷಗಳ ಹಿಂದೆ ಪ್ರಸಿದ್ದನಾಗಿದ್ದ ಓರ್ವ ಪುರಾಣ ಪುರುಷನ ಹೆಸರು ಅಬ್ರಾಹಂ. ಅಬ್ರಾಹಂ ತೀರಿಹೋದ ಮೇಲೆ ಆತನ ದೈವರೂಪದ ಆರಾಧನೆಯ ಸಂಪ್ರದಾಯ ಹುಟ್ಟಿಕೊಂಡಿತು.

ಅಬ್ರಾಹಂ> ಬ್ರಾಹಂ/ಬ್ರಹ್ಮ> ಬೆರ್ಮ >.ಬೊಮ್ಮ.

ತುಳುವಿನ ಬೆರ್ಮೆರ್ ಎನ್ನುವ ಪದ, ಮೂಲ "ಬೆರ್ಮ" ಪದದ ಗೌರವ ಬಹುವಚನ.


ಸುಮೆರಿಯಾ ಕಡೆಯಿಂದ ವಲಸೆ ಬಂದ ಜನರು (ದ್ರಾವಿಡರೇ?) ಬೆರ್ಮೆರ್/ಬೊಮ್ಮಯ್ಯ/ಬ್ರಹ್ಮ ಪರಿಕಲ್ಪನೆಯನ್ನೂ ತಮ್ಮೊಂದಿಗೆ ಕರೆ ತಂದರು.

**

ಮೂಲ/ಆದಿ ದ್ರಾವಿಡರು ಆಫ್ರಿಕಾ ಕಡೆಯಿಂದ ಕ್ರಿಸ್ತಪೂರ್ವ ೧೫೦೦ ರ ಸುಮಾರಿಗೆ ಬಂದರೆಂದು ಪ್ರಚಲಿತ ಸಿದ್ದಾಂತಗಳು ತಿಳಿಸುತ್ತವೆ.ಹಾಗೆ ಬಂದವರು ಬರುವಾಗ ದಾರಿಯಲ್ಲಿ ಸಿಕ್ಕ ಊರಿನ ಹೆಸರು ಪದಗಳನ್ನೂ ತಾರದೇ ಇರುತ್ತಾರೆಯೇ?

ಹೀಗೆ ಬಂದವರು ಭಾರತದ ವಾಯುವ್ಯ ಭಾಗದಿಂದ- ಇಂದಿನ ಪಾಕಿಸ್ತಾನದ ಕಡೆಯಿಂದ ಭಾರತವನ್ನು ಪ್ರವೇಶಿದಂತಿದೆ. ಈಗ ಪಾಕಿಸ್ತಾನದಲ್ಲಿರುವ ಕನಿಷ್ಟ ಎರಡು ಊರ ಹೆಸರುಗಳು ಕರಾವಳಿ ಭಾಷೆ ಮತ್ತಯ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿವೆ.

೧.ಮುಲ್ತಾನ್: (=ಮೂಲತಾಣ/ಮೂಲಸ್ಥಾನ.), ತುಳು ಸಮುದಾಯಗಳಲ್ಲಿ ಮೂಲಸ್ಥಾನದ ಪರಿಕಲ್ಪನೆ ಬಲವಾಗಿ ಬೇರೂರಿದೆ. ವಲಸೆ ಬಂದ ಒಂದು ಸಮುದಾಯ ಕರಾವಳಿಯಲ್ಲಿ ಮೊದಲು ನೆಲಸಿದ ಸ್ಥಳ/ಸ್ಥಾನ/ತಾಣವೇ ಆ ಕುಟುಂಬದ ಮೂಲಸ್ಥಾನ. ಆನಂತರ ಆ ಕುಟುಂಬ ಎಲ್ಲೆ ಹೋಗಿ ನೆಲಸಿದ್ದರೂ, ಪ್ರತಿ ವರ್ಷ ಮೂಲಸ್ಥಾನಕ್ಕೆ ಹೋಗಿ ಎಡೆ ಇಟ್ಟು ಪೂಜೆ ಪುನಸ್ಕಾರ ಮಾಡಿ, ಗೌರವಿಸುವುದು ತುಳುವ ಕುಟುಂಬಗಳಲ್ಲಿ ನಿರಂತರವಾಗಿ ಬಂದಂತಹ ಪದ್ದತಿ.

(ಮೂಲಸ್ಥಾನದ ಪರಿಕಲ್ಪನೆ ಬಹುಶಃ ವಲಸೆ ಬಂದ ಎಲ್ಲಾ ಭಾರತೀಯ ಸಮುದಾಯಗಳಲ್ಲಿ ಒಂದಾನೊಂದು ಕಾಲದಲ್ಲಿ ಇದು ರೂಡಿಯಲ್ಲಿದ್ದು ಈಚೆಗೆ ನಶಿಸಿಹೋಗಿದೆ).

೨.ಪಿರಾಕ್ : ಪಾಕಿಸ್ತಾನದ ಪಿರಾಕ್ ಎಂಬ ಊರಿನಲ್ಲಿ ಪ್ರಾಚೀನ ನಾಗರೀಕತೆ ನೆಲೆಗಳ ಕುರುಹುಗಳು ದೊರೆತಿವೆ. ಈ ಊರು ದ್ರಾವಿಡರು ಪೂರ್ವದಲ್ಲಿ ನೆಲಸಿ ನಂತರ ದಾಟಿ ಬಂದ ಊರಾಗಿರಬಹುದು. ಈಗಲೂ "ಪಿರಾಕ್" ಎನ್ನುವ ಪದ ಬಹಳ ಹಳೆಯ,ಹಿಂದಿನ ಕಾಲದ ಎಂಬರ್ಥದಲ್ಲಿ ತುಳುವರ ಸಾಮಾನ್ಯ ಆಡು ಮಾತಿನಲ್ಲಿ ಬಳಕೆಯಾಗುತ್ತಿದೆ. ಅದೇ ಪಿರಾಕ್ ಪದಮೂಲದಿಂದ ಪ್ರಾಕೃತ/ಸಂಸ್ಕೃತ/ಹಿಂದಿ ಭಾಷೆಗಳ "ಪ್ರಾಕ್", ಪ್ರಾಕ್ತನ, ಪ್ರಾಕೃತ ಮುಂತಾದ ಪದಗಳು ಬಂದಿರುವಂತಿದೆ.

**

ಒಂದು ಕಾಲಹಂತದಲ್ಲಿ ದ್ರಾವಿಡರ ವಲಸೆ ಬಂದವರು ಎಂದು ಒಪ್ಪಿಕೊಂಡರೆ ಉದ್ಭವಿಸುವ ಪ್ರಶ್ನೆ ಎಷ್ಟು ಜನ, ಹೇಗೆ ಬಂದರು?

ಹಿಂದಿನ ಕಾಲದಲ್ಲಿ ಜನಸಂಖ್ಯೆ ಕಡಿಮೆ ಇತ್ತು ಒಂದು ಊರಿನಿಂದ ಇನ್ನೊಂದೂರಿಗೆ ವಲಸೆ ಹೋಗುವವರೂ ಕಡಿಮೆ. ಈ ವಿಷಯ ಮನದಟ್ಟಾಗಬೇಕಾದರೆ ಕರಾವಳಿಯಲ್ಲಿ ನಡೆದ ಒಂದು ವಲಸೆಯ ಕತೆ ಕೇಳಬಹುದು.

ಕರಾವಳಿಯ ಕುಂದಾಪುರದಲ್ಲಿ ಸುಮಾರು ೫೦೦ ವರ್ಷಗಳ ಹಿಂದೆ ನಡೆದ ಘಟನೆ. ಕಾಲ ವಿಜಯನಗರ ಅರಸರ ಆಳ್ವಿಕೆಯ ಕೊನೆಯ ಹಂತವಾಗಿರಬಹುದು. ಸೇನೆಯಲ್ಲಿ ಸೇವೆ ಸಲ್ಲಿಸುತಿದ್ದ ಐದು ಜನ ನಾಡವ ಸಮುದಾಯದ ನಾಯಕರಿಗೆ ಯಾವುದೊ ಕಾರಣಕ್ಕಾಗಿ ಮನಸ್ತಾಪವಾಯಿತು.(ದೇಶೀ ಸೇನೆಯ ಒಂದು ತುಕುಡಿಯ ನಾಯಕನಿಗೆ "ನಾಯಕ" ಎಂಬ ಅಭಿಧಾನ ಇರುತಿತ್ತು.) ತಮ್ಮ ಬೇಡಿಕೆಗೆ ನ್ಯಾಯ ದೊರೆಯದ ಕಾರಣ ಮನನೊಂದ ನಾಯಕರು ಸೇನೆಯ ಸೇವೆಯನ್ನು ತೊರೆದು ಕುಟುಂಬ ಸಮೇತರಾಗಿ ಕಾಲ್ನಡಗೆಯಲ್ಲಿ ಉತ್ತರ ಕನ್ನಡದೆಡೆಗೆ ಪ್ರಯಾಣ ಬೆಳಸಿದರು.ನಡೆಯುತ್ತಾ ಹೋಗಿ ಕುಮಟ,ಗೋಕರ್ಣ,ಅಂಕೋಲ ಪರಿಸರಗಳಲ್ಲಿ ನೆಲೆಸಿದರು. ಹೀಗೆ ೫ ಶತಮಾನಗಳ ಹಿಂದೆ ವಲಸೆಹೋದ ೫ ಕುಟುಂಬಗಳ ಜನಸಂಖ್ಯೆ ಹಲವಾರು ಸಾವಿರ ಆಗಿದೆ.ಈಗಲೂ ಈ ನಾಡವರು ನಾಯಕ ಎಂಬ ಉಪನಾಮವನ್ನು ಹೊಂದಿದ್ದು ಕುಂದಗನ್ನಡ ಶೈಲಿಯ ಹಳೆಗನ್ನಡ ವಿಕಾಸದ ಪ್ರಭೇಧವನ್ನು ಮಾತಾನಾಡುತಿದ್ದಾರೆ.

**

ಶಾತವಾಹನರು/ಶಾತಕರ್ಣಿಗಳು

ಸಾಮಾನ್ಯ ಶಕೆಯ ಆರಂಭದಲ್ಲಿದ್ದ ಇವರು ಆಳಿದ್ದು ಈಗಿನ ಮಹಾರಾಷ್ಟ್ರದ ಪೈಠಾಣ ರಾಜಧಾನಿಯಿಂದ, ಆಡಳಿತ ಭಾಷೆ ಪ್ರಾಕೃತ. ಆದರೆ ಇವರು ಕನ್ನಡವನ್ನು ಸ್ಥಾಪಿಸಿದ ಮೂಲಪುರುಷರಂತೆ ಕಂಡು ಬರುತ್ತಾರೆ.ಸಂಗಂ ಸಾಹಿತ್ಯದಲ್ಲಿ ಇವರನ್ನು "ನೂರು ಜನ ಕನ್ನರು" ಎಂದು ಕರೆಯಲಾಗಿದೆ. ಕೃಷ್ಣ ಪದದ ತದ್ಭವ ಕನ್ನ ಆಗಿದ್ದಿರಬಹುದು. ಮಲಯಾಳದಲ್ಲಿ ಕೃಷ್ಣನಿಗೆ ಕಣ್ಣನ್ ಎಂಬ ಹೆಸರಿದೆ. ಶಾತಕರ್ಣಿಯಲ್ಲಿ ಬರುವ ಕರ್ಣಿ ಎಂಬ ಪದವು ಕನ್ನ ಪದದ ಸಂಸ್ಕೃತ ಅನುವಾದದಂತೆ ಕಂಡುಬರುತ್ತದೆ. ಹಾಗಾಗಿ ಪ್ರಾಕೃತ ಮೂಲದ ಕನ್ನ/ಕನ್ನರು ಎಂಬ ಪದ ಸರಳ ಕನ್ನಡದ ಕರಿಯ ಎಂಬ ಪದಕ್ಕೆ ಸಮಾನವಾಗಿದೆ. ಕನ್ನ ಜನಾಂಗದ ಕರಿಯ ಬಣ್ಣದ ಆದಿನಿವಾಸಿಗಳು ದಖ್ಖಣದ ವಿವಿಧ ಪ್ರದೇಶಗಳಲ್ಲಿ ನೆಲೆಸಿದ್ದಂತೆ ಕಂಡುಬರುತ್ತದೆ. ಕನ್ನರ ಭಾಷೆ/ನಾಡು ಕ್ರಮೇಣ ಕನ್ನಡ,/ಕನ್ನಡನಾಡು ಆಯಿತು. ಹಾಗೇಯೆ ಕರ್ಣಿಯಿಂದ ಕರ್ಣಾಟ, ಕರ್ನಾಟ, ಕರ್ಣಾಟಕ, ಅಥವಾ ಕರ್ನಾಟಕ ಇತ್ಯಾದಿ ಪದಗಳು ಉಗಮಿಸಿವೆ.

**

ಇತಿಹಾಸದಲ್ಲಿ ಭೂಮಿ ಮಾಡಿದ ಬದಲಾವಣೆಗಳು

ಕರಾವಳಿಯ ಭೂಮಿ ಇತಿಹಾಸದುದ್ದಕ್ಕೂ ಸ್ಥಿರವಾಗಿ ನಿಂತಿಲ್ಲ. ಭೂಮಿಯ ಫಲಕಗಳ ಹಾಗೂ ಭೂಭಾಗಗಳ ಚಲನೆ,ಕಡಲ ನೀರಿನ ಮಟ್ಟದ ಏರಿಕೆ ಇಳಿಕೆ, ನದಿಗಳ ಪರಿಚಲನೆಯ ಪಥಗಳ ಬದಲಾವಣೆ,ನದಿಗಳ ಹರಿಯುವ ಜಾಡುಗಳ ಬದಲಾವಣೆ, ನದಿಗಳು ಕಡಲ ಕೂಡುವ ನದಿಮೂಕ ಅಥವಾ ಅಳಿವೆ ಸ್ಥಳಗಳ ಬದಲಾವಣೆ, ಸುಂಟರಗಾಳಿ ಸುನಾಮಿಗಳ ಹೊಡೆತ, ಕಡಲಿನ ನೀರಿನ ಮಟ್ಟದ ಏರಿಕೆ ಇಳಿಕೆಗಳು-ಇವೆಲ್ಲಾ ಒಟ್ಟಾರೆ ಕರಾವಳಿಯನ್ನು, ಕರಾವಳಿಯ ನದಿ ಅಳಿವೆಗಳನ್ನು, ಬಂದರುಗಳನ್ನು ಕಾಲಕಾಲಕ್ಕೆ ಬಾಧಿಸಿವೆ.

ಪ್ರಾಚೀನ ಚೋಳರ ಕಾಲದ ಪ್ರಸಿದ್ಧ ಬಂದರುಗಳಾದ ತಮಿಳುನಾಡಿನ ಪೂಂಪುಹಾರ್ ಮತ್ತು ಕೇರಳದ ಚೇರರ ಕಾಲದ ಮುಸ್ರಿ ಇತ್ತೀಚೆಗೆ ಬಹುಶ್ರುತ multi-disciplinary ಅಧ್ಯಯನಗಳ ವ್ಯಾಪ್ತಿಗೆ ಒಳಪಟ್ಟಿವೆ. ಹೊಸ ಸಂಶೋಧನೆಗಳಿಂದ ಹೊಸ ಮಾಹಿತಿಗಳು ಬರುತ್ತಿವೆ.

ಕನ್ನಡ ನಾಡಿನ ಕರಾವಳಿಯ ಪ್ರಾಚೀನ ಬಂದರುಗಳಿಗೆ ಅಂತಹ ಆಧ್ಯಯನಗಳ ಸುಯೋಗ ಇನ್ನೂ ಲಭಿಸಿಲ್ಲ.

**

ಚಿತ್ರ ೨:ನಂದರು, ಕೋಸರರು, ಮುಗೇರರು, ಮೋರಿಯರು, ಕೊರಗರು, ಕದಂಬರು, ಅಳುಪರು - ಬಾಳಿದ ಆಳಿದ ನೆಲ

ನಂದರ ಕಾಲದ ಕರಾವಳಿ/ತುಳುನಾಡು

ನಂದ ಮನೆತನದ ಅರಸರು ತುಳುನಾಡಿನ ಭಾಗಗಳನ್ನು ಆಳಿದ ಬಗ್ಗೆ ಹಿಂದಿನ ತಲೆಮಾರಿನ ಹಿರಿಯರು ಮಕ್ಕಳಿಗೆ ಕತೆಯಾಗಿ ಹೇಳಿದ್ದುಂಟು. ನಂದರು ಆಳಿದ ಇತಿಹಾಸ ಶಾಸನಗಳಲ್ಲಿ ದಾಖಲಾಗಿರದ ಕಾರಣ ತುಳುನಾಡ ಬಹುತೇಕ ಇತಿಹಾಸಕಾರರು ನಂದರ ಯಾವುದೇ ಸುದ್ದಿ ಎತ್ತಿಲ್ಲ. ಆದರೆ ತಮಿಳುನಾಡಿನ ಸಂಗಂ ಕಾವ್ಯಗಳಲ್ಲಿ (ಮುಖ್ಯವಾಗಿ ಅಗನಾನೂರು) "ತುಳುನಾಟ್" ಮತ್ತು ಅಲ್ಲಿ ಆಳಿದ "ನನ್ನ"ಅರಸರ ಪ್ರಸ್ತಾಪ ಬಂದಿದೆ.ಸಂಗಂ ಕಾಲದ ತಮಿಳು ಕವಿಗಳು ಹೊಗಳಿದ ಈ ನನ್ನ ಅರಸರು ತುಳುವರ ಅಜ್ಜಿಕತೆಗಳಲ್ಲಿ ಬರುವ ನಂದ ಅರಸರು ಎಂಬುವುದರಲ್ಲಿ ಸಂಶಯವಿಲ್ಲ. ಪೂರಕವಾಗಿ ತುಳುನಾಡಿನಲ್ಲಿ ಅನೇಕ ಸ್ಥಳನಾಮಗಳು ನಂದರ ಹೆಸರನ್ನು ಇನ್ನೂ ಹೊತ್ತುಕೊಂಡಿವೆ.(ನಂದಾವರ, ನಂದಳಿಕೆ, ನಂದಿಕೂರು, ನಂದಿಗುಡ್ಡೆ, ನಂದನಬಿತ್ತಿಲ್ ಇತ್ಯಾದಿ). ಸಂಗಂ ಕಾವ್ಯಗಳನ್ನು ಅಧ್ಯಯನ ಮಾಡಿದ ವಿಮರ್ಶಕರ ಅನುಸಾರ ಈ ನಂದ ಅರಸರ ಕಾಲ ಸಾಮಾನ್ಯ ಶಕೆಯ ೧ ಮತ್ತು ೨ನೆಯ ಶತಮಾನಗಳು.(ಅಂದರೆ ಅಳುಪ ಅರಸರ ಆಡಳಿತೆ ಆರಂಭವಾಗುವ ಮೊದಲಿನ ಕಾಲ). ಸಂಗಂ ಕಾವ್ಯಗಳಲ್ಲಿ ಮೂರು ತಲೆಮಾರಿನ ನನ್ನ (ನಂದ) ಅರಸರ ಉಲ್ಲೇಖವಿದ್ದರೂ ನಂದ ಅರಸರ ವೈಯಕ್ತಿಕ ಹೆಸರುಗಳು ಬಂದಿಲ್ಲ.ಅದಕ್ಕೆ ಕಾರಣವನ್ನು ಹೀಗೆ ಊಹಿಸಬಹುದು. ಸಂಗಂ ಕಾವ್ಯಗಳಲ್ಲಿ ನಂದರನ್ನು ವರ್ಣಿಸಿದ ಕವಿ ತುಳುನಾಡನ್ನು ಸ್ವತಃ ನೋಡಿರಲಿಕ್ಕಿಲ್ಲ. ಅವರಿವರು, ಹೋಗಿ ಬಂದ ಪ್ರವಾಸಿಗಳು ಹೇಳಿದ ಮಾಹಿತಿಗಳ ಆಧಾರದ ಮೇಲೆ ಕಾವ್ಯಕವನ ಕಟ್ಟಿರಬಹುದು.

ನಂದ ಅರಸರ ಹೆಸರನ್ನು ಮಗದ ದೇಶದ ಪಾಟಲೀಪುತ್ರದಲ್ಲಿ ಕ್ರಿಸ್ತಪೂರ್ವ ೪೦೦ರಸುಮಾರಿಗೆ ಕೇಳುತ್ತೇವೆ.ಅಲ್ಲಿ ನಂದರ ದುರಾಡಳಿತದಿಂದ ನೊಂದ ಚಾಣಿಕ್ಯ ನಂದರನ್ನು ಉಚ್ಚಾಟಿಸಿ ಚಂದ್ರಗುಪ್ತನನ್ನು ಮಗದ ದೇಶದ ಸಿಂಹಾಸನದಲ್ಲಿ ಸ್ಥಾಪಿಸುತ್ತಾನೆ. ಅಲ್ಲಿ ಪರಾಭವಗೊಂಡ ನಂದರ ಸಂತತಿಯವರು ಕರಾವಳಿಗೆ ಬಂದು ನೆಲೆಸಿ ಇಲ್ಲಿಸಣ್ಣ ಪುಟ್ಟ ಅರಸೊತ್ತಿಗೆಗಳ ಸ್ಥಾಪಿಸಿರಬಹುದೇ ಎನ್ನುವುದು ಒಂದು ಊಹೆ.

ಸಂಗಂ ಕಾವ್ಯಗಳ ನಂದರ ಕಾಲದಲ್ಲಿ ಕೋಸರರು, ಕಂಕರು (ಕೊಂಗ/ಗಂಗ),ಪುನ್ನಾಟರ ಪ್ರಸ್ತಾಪ ಬಂದಿದೆ.

**

ಕರುಂಬ/ಕದಂಬರ ಮೊದಲ ಹೆಜ್ಜೆಗಳು

ಕೇರಳ/ಮಲಬಾರದ ಮುಸ್ರಿ ಬಂದರು ಕಾಳುಮೆಣಸಿನ ವ್ಯಾಪಾರಕ್ಕೆ ಪ್ರಸಿದ್ದಿ ಪಡೆದಿತ್ತು. ಕ್ರಿಸ್ತಪೂರ್ವ ೧೨೦೦ರ ಸುಮಾರಿಗೆ ಸತ್ತ ಫಾರೋ ಅರಸ ಎರಡನೆ ರಾಮಸೆಸ (Pharoh Ramses II )ನ ಸಂರಕ್ಷಿತ ಹೆಣ (ಮಮ್ಮಿಯ)ದ ಮೂಗಿನ ಹೊಳ್ಳೆಯಲ್ಲಿ ಸುವಾಸನೆಗಾಗಿ ಮಲಬಾರಿನ ಕಾಳುಮೆಣಸು ಸಿಕ್ಕಿಸಿಡಲಾಗಿತ್ತೆಂದು ವರದಿಗಳಿವೆ.

ಗ್ರೀಕರ ಪ್ರವಾಸ ಸಾಹಿತ್ಯಗಳಲ್ಲಿ ಅಳುಪ ಕಡಲುಗಳ್ಳರ ಪ್ರಸ್ತಾಪ ಬಂದಿರುವಂತೆ, ಅದೇ ಕಾಲದ ಸಂಗಂ ಕಾವ್ಯಗಳಲ್ಲಿ ಕೂಡಾ ಕರುಂಬ ನಾವಿಕರು ಕಡಲುಗಳ್ಳತನ ಮಾಡುತಿದ್ದ ವರ್ಣನೆ ಬಂದಿದೆ. ಈ ಕರುಂಬ ನಾವಿಕರ ತಂಡ ಕರಾವಳಿ ಕಡಲ ದ್ವೀಪಗಳಲ್ಲಿ ನೆಲೆಸಿ ಪಹರೆ ಮಾಡುತ್ತಾ , ನಂದ ಅರಸರ ಆಣತಿಯ ಮೇರೆಗೆ ಆ ದಾರಿಯಾಗಿ ಬರುವ ಯವನರ ಹಡಗುಗಳನ್ನು ಬೆದರಿಸಿ ದೋಚುತ್ತಿದ್ದರೆಂದು ಹೇಳಿದೆ. ಕರುಂಬರು ನೆಲೆಸಿದ ಕಡಲ ದ್ವೀಪದಲ್ಲಿ ಕದಂಬ ವೃಕ್ಷವನ್ನು ನೆಟ್ಟು ಉಪಾಸನೆ ಮಾಡುತಿದ್ದ ವಿವರ ಕೂಡಾ ಇದೆ. ಒಟ್ಟಿನಲ್ಲಿ ಸಾಮಾನ್ಯ ಶಕೆಯ ಆರಂಭದ ಎರಡು ಶತಮಾನಗಳಲ್ಲಿ ಕರಾವಳಿ ಬಂದರುಗಳಿಗೆ ಬರುವ ಯವನರ ಹಡಗುಗಳ ಸಂಖ್ಯೆ ಕಡಿಮೆಯಾದಂತೆ ಅನಿಸುತ್ತದೆ. ಯವನರ ಹಡಗುಗಳು ಕರಾವಳಿಯ ಬಂದರಗಳಿಗೆ ಬಾರದೇ ಕಾಳುಮೆಣಸಿನ ಮಲಬಾರದ ಕಡೆಗೆ ಧಾವಿಸುವುದನ್ನು ನಿಯಂತ್ರಿಸಲು ಅಥವಾ ಯವನರಿಂದ ಹಿಂದಿನ ವ್ಯಾಪಾರದ ಬಾಬ್ತು ಬರಬೇಕಾಗಿ ಉಳಿದಿದ್ದ ಬಾಕಿಯ ವಸೂಲಿಗಾಗಿ ಕರುಂಬ ಯುವಕರ ತಂಡವನ್ನು ನಂದ ಅರಸರು ನಿಯೋಜಿಸಿರಲೂ ಬಹುದು. ಏನೇ ಇರಲಿ, ಮಲಬಾರಿನ ತಮ್ಮ ಬಂದರಿಗೆ ಬರುವುದನ್ನು ತಡೆದ ಕರುಂಬರ ತಂಡದ ಕೆಲಸದಿಂದ ಕುಪಿತನಾದ ಚೇರ (ಕೇರಳ) ರಾಜಕುಮಾರನೊಬ್ಬ ಇವರ ಮೇಲೆ ದಂಡೆತ್ತಿ ಬಂದು ಕರುಂಬರನ್ನು ಸದೆಬಡಿದ ವೃತ್ತಾಂತ ಕೂಡಾ ಸಂಗಂ ಅಗನಾನೂರು ಕಾವ್ಯದಲ್ಲಿ ಬಂದಿದೆ.

ಎಲ್ಲಾ ಅರಸರಂತೆ ನಂದರು ವಿದೇಶಿಯರೊಂದಿಗೆ ಕಡಲ ವ್ಯಾಪಾರದಲ್ಲಿ ತೊಡಗಿದ್ದರು. ವಿದೇಶಿಯರ ಎಲ್ಲಾ ವ್ಯಾಪಾರಗಳೂ ನ್ಯಾಯಯುತವಾಗಿಯೇ ಇದ್ದವು ಎನ್ನಲಾಗುವುದಿಲ್ಲ. ಇನ್ನೊಮ್ಮೆ ಬಂದಾಗ ಉಳಿದ ಹಣ ನೀಡುತ್ತೇನೆ ಎಂದು ಭರವಸೆ ನೀಡಿ ವಿದೇಶಿ ಹಡಗುಗಳು ಹೊರಟು ಹೋಗಿರಬಹುದು.ಬರಬೇಕಾದ ಬಾಕಿ ವಸೂಲಿಗಾಗಿ ನಂದರು ಕದಂಬ/ಕರುಂಬ/ಅಳುಪ ಯುವಕರನ್ನು ನೇಮಿಸಿರಬಹುದು.ವಿದೇಶಿಯರಿಗೆ ಭಾರತದಲ್ಲಿ ಬಹಳಷ್ಟು ಬಂದರಗಳ ಆಯ್ಕೆ ಇತ್ತು. ಇದಲ್ಲದಿದ್ದರೆ ಇನ್ನೊಂದು ಎಂದು ಬಂದರುಗಳನ್ನು ಬದಲಾಯಿಸುವ ಚಾಳಿ ಇದ್ದಿರಬಹುದು.

ಕಡಲುಗಳ್ಳತನದ ಆಪಾದನೆ ಹೊತ್ತು ಪ್ರಸಿದ್ದಿಯಾದ ಈ ಕರುಂಬ ಯುವಕರು ಯಾರು? ಕರುಂಬರು ಕದಂಬ ಮರವನ್ನು ಪೂಜಿಸುತಿದ್ದ ಸಾಕ್ಷದ ಆಧಾರದಲ್ಲಿ ಅವರು ಮುಂದಿನ ನಾಲ್ಕನೆ ಶತಮಾನದಲ್ಲಿ ಬನವಾಸಿಯಲ್ಲಿ ಕದಂಬ ರಾಜ್ಯ ಸ್ಥಾಪಿಸದ ಕದಂಬರ ಪೂರ್ವಜರೆಂದು ಹಲವು ಸಂಗಂ ವಿಮರ್ಶಕರು ಅಭಿಪ್ರಾಯ ಪಟ್ಟಿದ್ದಾರೆ. ಕರುಂಬರ ಹೆಸರಿನ ಊರುಗಳು (ಕರಂಬಾರ್ , ಕಾರಂದೂರು ಇತ್ಯಾದಿ) ಹಾಗೂ ನಂತರದ ಕದಂಬ ವಂಶಜರ ಇರುವಿಕೆ ತಿಳಿಸುವ ವಾಮಂಜೂರಿನ ಶಾಸನಗಳ ಹಿನ್ನೆಲೆಯಲ್ಲಿ ಈ ಊಹೆ ಸರಿಯೆಂದು ತೋರುತ್ತದೆ.

ಕದಂಬರಿಗೆ ಬನವಾಸಿಯ ಹೊಸ ರಾಜ್ಯ ಸ್ಥಾಪನೆಯಲ್ಲಿ ಸಹಕರಿಸಲು ಕರಾವಳಿಯಿಂದ ಹೋದವರು ಅಳುಪರು ಎಂಬ ಮಾಹಿತಿಯ ಹಿನ್ನೆಲೆಯಲ್ಲಿ, ಕಡಲ ವ್ಯಾಪಾರದೊಂದಿಗೆ ಕಡಲುಗಳ್ಳತನದ ಆಪಾದನೆಯನ್ನೂ ಹೊತ್ತ ಕದಂಬ ಹಾಗೂ ಆಳುಪ ವಂಶಜರು ಕರಾವಳಿಯಲ್ಲಿ ಮೊದಲೇ ಸ್ನೇಹಿತರಾಗಿದ್ದರು ಎಂದು ತೀರ್ಮಾನಿಸ ಬಹುದು.

**

ಚಿತ್ರ ೩: ಗಂಗಾವಳಿ - ಗಂಗರ ಪೂರ್ವೇತಿಹಾಸದ ನೆಲೆಗಳು


ಕಂಕ (ಕೊಂಗ/ಗಂಗ)ರ ಕರಾವಳಿಯ ಹೆಜ್ಜೆಗಳು

ಉತ್ತರದಿಂದ ಬಂದು ಕರಾವಳಿಯ ಭಾಗಗಳನ್ನು ಆಳಿದ ನಂದರಂತೆ, ಕಂಕ(>ಗಂಗ)ರು ಕರಾವಳಿಯಲ್ಲಿ ನಡೆದಾಡಿದ ಹೆಜ್ಜೆ ಗುರುತುಗಳಿವೆ.ಕಂಕರು ಕೊಂಕಣದ ಕಂಕಾವಳಿಯಿಂದ ಹೊರಟು, ಗೋಕರ್ಣದ ಬಳಿಯ ಗಂಗಾವಳಿ (< ಕಂಕಾವಳಿ) , ಕುಂದಾಪುರದ ಬಳಿಯ ಗಂಗೊಳ್ಳಿ (< ಕಂಕೊಳ್ಳಿ) ದಾಟಿ ತೆಂಕಣ ಕರಾವಳಿಗೆ ಬಂದು ಮಂಗಳೂರಿನ ಕಂಕನಾಡಿಯಲ್ಲಿ ಬೀಡು ಬಿಟ್ಟ ವೃತ್ತಾಂತ ಈ ಊರುಗಳ ಹಳೆಯ ಹೆಸರುಗಳಲ್ಲಿ ದಾಖಲಾಗಿದೆ. ಸಾ.ಶಕೆಯ ಸುಮಾರು ಮೂರು - ನಾಲ್ಕನೆಯ ಶತಮಾನಗಳ ಅವಧಿಯಲ್ಲಿ ಆಗಿರಬಹುದಾದ ಹೆಸರುಗಳ ವಿಕಾಸ ಕಂಕ > ಕೊಂಗ ಮತ್ತು ಕಂಕ > ಗಂಗ ಪೂರ್ವದ ಹಳೆಗನ್ನಡದಿಂದ ಹಳೆಗನ್ನಡಕ್ಕೆ ದಾಟುವಾಗ ಕನ್ನಡ ವರ್ಣಮಾಲೆಯಲ್ಲಿ ಆಗಿರಬಹುದಾದ ವಿಕಾಸವನ್ನು ಸೂಚಿಸುತ್ತಿರುವಂತಿದೆ. ಕಂಕ > ಕೊಂಕ/ಕೊಂಗ ಮಾರ್ಪಾಡಿನಲ್ಲಿ ಪ್ರಾಕೃತದ ಛಾಯೆ ಕಂಡರೆ, ಕಂಕ > ಗಂಗ ಅಕ್ಷರ ವಿಕಾಸ/ ಬದಲಾವಣೆ ಆ ಮೊದಲು ತಮಿಳು ವರ್ಣಮಾಲೆಯಂತೆ ಪೂರ್ದ ಹಳೆಗನ್ನಡದಲ್ಲೂ ವ್ಯಂಜನಗಳ ಕೊರತೆ ಇದ್ದಿರಬಹುದಾದ ಸಾಧ್ಯತೆಯನ್ನು ನಿರೂಪಿಸುತ್ತವೆ.

ಕಂಕನಾಡಿಯಿಂದ ಕಂಕ/ಗಂಗರು ನಾಲ್ಕನೆ ಶತಮಾನದಲ್ಲಿ ಚಿನ್ನದ ಆಸೆಯ ಬೆಂಬತ್ತಿ ಕೋಲಾರದ ಕಡೆಗೆ ಪ್ರಯಾಣ ಬೆಳೆಸಿದಂತೆ ಕಾಣುತ್ತದೆ. ಒಂದಷ್ಟು ವರ್ಷ ಕುವಲಯ(ಕೋಲಾರ)ದಲ್ಲಿ ಕಳೆದ ಗಂಗರು ನಂತರ ಕಾವೇರಿ ತೀರದ ತಲಕಾಡಿನಲ್ಲಿ ನೆಲೆಸಿದರು.

ಅದೇ ರೀತಿ, ಪುನ್ನಾಟರ ಆರಂಭದ ಹೆಜ್ಜೆ ಗುರುತುಗಳು ಕರಾವಳಿಯ ಊರುಗಳಲ್ಲಿ (ಪುಣೆ,,.. ಪುನರೂರು, ಪುಣಚ ಇತ್ಯಾದಿ) ಮೂಡಿವೆ.

**

ಕೋಸರರ ನೆಲೆ-ಕಾಸರಗೋಡು-"ನೌರ"

ಸಂಗಂ ಕಾವ್ಯಗಳಲ್ಲಿ ಮಾತು ತಪ್ಪದ ಕೋಸರ ವೀರರನ್ನು ಹೊಗಳಿದೆ. ಕಾಸರ>ಕೋಸರ ಪದ ಮಾರ್ಪಟುಗಳ ಹಿನ್ನೆಲೆಯಲ್ಲಿ ಡಾ|ಶೆಟ್ಟರ್ ಅವರು ಕಾಸರಗೋಡು ಕೋಸರರ ನೆಲೆಯಾಗಿತ್ತು ಎಂದು ಊಹಿಸಿದ್ದು ಸರಿಯಾಗಿದೆ ಅನಿಸುತ್ತದೆ.ಕರಾವಳಿಯಲ್ಲಿ ಎರಡು ಕಾಸರಗೋಡು/ಕಾಸರಕೋಡುಗಳಿವೆ. ಒಂದು ಕೇರಳದ ಗಡಿಯಲ್ಲಿ ಎರಡನೆಯದು ಉತ್ತರ ಕನ್ನಡದ ಹೊನ್ನಾವರದ ಹತ್ತಿರ. ಹೊನ್ನಾವರದ ಬಳಿ ಶರಾವತಿ ನದಿ ದೊಡ್ಡ ಅಳಿವೆ ನಿರ್ಮಿಸಿ ಕಡಲ ಸೇರುತ್ತದೆ. ಒಂದಾನೊಂದು ಕಾಲದಲ್ಲಿ ಇದು ದೊಡ್ಡ ಬಂದರು ಆಗಿದ್ದಂತೆ ಕಂಡುಬರುತ್ತದೆ.

ಪ್ರಾಚೀನ ಗ್ರೀಕರ ಸಾಹಿತ್ಯದಲ್ಲಿ ಬರುವ "ನೌರ" ಬಂದರು ಹೊನ್ನಾವರದ ಹಳೆಯ ಹೆಸರು ಆಗಿರಬಹುದೇನೋ?

**

ದ್ವಾರಸಮುದ್ರ-ಬಾರಕೂರು

ಹೊಯ್ಸಳರ ವಿಷ್ಣುವರ್ಧನ ತನ್ನ ನಗರಕ್ಕೆ "ದ್ವಾರಸಮುದ್ರ" ಎಂದು ಕರೆದುಕೊಂಡ. ಬಾರಕ+ಊರಿನ ಹೆಸರಿನಲ್ಲಿ ಅರಬ ವ್ಯಾಪಾರಿಗಳ "ಬಾರಕ" (ಕಡಲ ದ್ವಾರ/ದ್ವಾರಕ) ಪದದ ಛಾಯೆ ಇದೆ.ವಿಷ್ಣುವರ್ಧನನ ವಂಶಜರು ಬಾರಕೂರಿನ ಅಳುಪರೊಂದಿಗೆ ವೈವಾಹಿಕ ಸಂಭಂಧದ ನೆಲೆಯಲ್ಲಿ ಬಾರಕೂರಿನ ಸನಿಹದ ಬಂದರುಗಳು ಹೊಯ್ಸಳರ ಕಡಲ ವ್ಯಾಪಾರಗಳಿಗೆ ದ್ವಾರವಾಗಿದ್ದಿರಬಹುದು.ವಿದೇಶಿ ವರ್ತಕರು- ಅರಬರು ತದನಂತರ ಪೋರ್ಚುಗೀಸರು ಕರಾವಳಿಯ ಬಂದರಗಳನ್ನು ಚೆನ್ನಾಗಿ ಉಪಯೋಗಿಸಿಕೊಂಡರು.

ಆನಂತರದ ಕಾಲದಲ್ಲಿ ವಿಜಯನಗರದ ಅರಸರು, ಕೆಳದಿ-ಇಕ್ಕೆರಿಯ ನಾಯಕರು ಮತ್ತು ಸುಲ್ತಾನರು ಕರಾವಳಿಯ ಬಂದರುಗಳನ್ನು ವಿದೇಶಿ ವ್ಯಾಪಾರದ ಸಲುವಾಗಿ ವ್ಯಾಪಕವಾಗಿ ಬಳಸಿಕೊಂಡರು.

** **



Comments

Popular posts from this blog

೩. ಜೋಗುಳ- ಒಂದು ಶಬ್ಧ ಮಿಮಾಂಸೆ

15. ದಕ್ಕಣ ಪೀಠಭೂಮಿ ಮತ್ತು ದಕ್ಕಣ ಟ್ರಾಪ್ಸ್( ಲಾವಾಭೂಮಿ)

13.ಮೂಲದ್ರಾವಿಡ ಭಾಷೆ -ಪ್ರೊಟೊ ದ್ರಾವಿಡಿಯನ್.