7.ಮಂಗಳೂರಿನ ಹೆಸರುಗಳ ಇತಿಹಾಸ

 ಮಂಗಳೂರಿನ ಹೆಸರುಗಳ ಇತಿಹಾಸ

ಇಂದಿನ ಮಂಗಳೂರು ಕನಿಷ್ಟ ಐದು ಸಾವಿರ ವರ್ಷಗಳ ಇತಿಹಾಸ ಕಾಲ ನೋಡಿದೆ. ಊರು ಬೆಳೆದು ಬಂದ ಕಾಲಘಟ್ಟಗಳಲ್ಲಿ ಬಗೆಬಗೆಯ ವಿಶಿಷ್ಟ ಹೆಸರುಗಳನ್ನು ಹೊತ್ತು ಬಂದಿದೆ. ಹೆಸರುಗಳೇ ಇತಿಹಾಸ ಹೇಳುವಂತಿವೆ.

ಮಂಗಳೂರಿಗೆ ಈ ಹೆಸರು ಹೇಗೆ ಬಂತು? ಯಾವಾಗ ಬಂತು?ಆ ಮೊದಲು ಇದ್ದ ಬಗೆ ಬಗೆಯ ಹೆಸರುಗಳಾವು?

ವಿಕಾಸದ ಸುದೀರ್ಘ ಹಾದಿಯಲ್ಲಿ ಪಡುವಣ ಕಡಲ ತೀರದ ಮನಮೋಹಕ ಊರು ಮಂಗಳೂರು ಸಂಪಾದಿಸಿದ ಹೆಸರುಗಳು ಯಾವುವು?

ಮಂಗಳಾದೇವಿಯ ದೇವಸ್ಥಾನದಿಂದ ನಗರಕ್ಕೆ ಹೆಸರು ಬಂತು ಎನ್ನುವುದು ಸರಳ ಜನಪ್ರಿಯ ವಾದ. ಆದರ ನಡುವೆ ಈ ದೇಗುಲ ಸ್ಥಾಪನೆ ಅಗುವ ಮೊದಲೇ ಊರಿಗೆ ಮಂಗಲ/ಮಂಗಲಾಪುರ ಎಂಬ ಹೆಸರಿತ್ತು ಎನ್ನುವ ವಾದವೂ ಇದೆ.

ಆ ಹಳೆಯ ಹೆಸರುಗಳ ಹಿಂದೆ ದೊರೆಯುವ ಕತೆಗಳೇನು?

**

ಮಂಗಳೂರು:

ಇಂದು ನೋಡುಗರಿಗೆ ಮಂಗಳೂರು ಎರಡು ನದಿಗಳ ತೆಕ್ಕೆಯ ನಡುವೆ ಮಗುವಿನಂತೆ ಬೆಳೆದ ಊರಿನಂತೆ ಕಾಣುತ್ತದೆ. ಈಗಿರುವಂತೆ ನಗರದ ಬಡಗಣ ಮಗ್ಗುಲಲ್ಲಿ ಗುರುಪುರ (ಫಲ್ಗುಣಿ) ಮತ್ತು ತೆಂಕಣ ಮಗ್ಗುಲಲ್ಲಿ ನೇತ್ರಾವತಿ ನದಿಗಳು ಮೂಡಣ ದಿಕ್ಕಿನಿಂದ ಬಂದು ಪಡುವಣದೆಡೆಗೆ ಹರಿಯುತ್ತವೆ. ಈ ನದಿಗಳು ಸಹ್ಯಾದ್ರಿ ಘಟ್ಟಗಳಿಂದ ಉಗಮಿಸಿ ಹೊರಟು ಮಂಗಳೂರಿನ ಬಳಿ ಚಂದದ ಕಡಲನ್ನು ನೋಡಿ ಸೇರಲು ಬಂದಿವೆ! ಇದು ಇವತ್ತು ನಿನ್ನೆಯ ಕತೆಯಲ್ಲ: ಈ ನದಿಗಳು ಏನಿಲ್ಲವೆಂದರೂ ಕನಿಷ್ಟ ಎಂಟು ಹತ್ತು ದಶಲಕ್ಷ ವರ್ಷಗಳಿಂದ ಕಡಲಿನೆಡೆಗೆ ಹರಿಯುತ್ತಿವೆ!

ಇಷ್ಟು ದೀರ್ಘ ಕಾಲ: ಭೂಮಿ ಸುಮ್ಮನಿರುತ್ತದೆಯೇ? ಭೂಮಿಯ ಮೇಲಿನ ಚಲಿಸುವ ಫಲಕಗಳು ಸುಮ್ಮನಿರುತ್ತವೆಯೇ?

ಹಾಗಾಗಿ ಇಲ್ಲಿಯ ಇತಿಹಾಸ ಮಾತ್ರವಲ್ಲ ನದಿಗಳು ಮತ್ತು ಭೂವಿಜ್ಞಾನ ಕೂಡಾ ಇಲ್ಲಿ ವಿಶೇಷ ಗಮನೀಯವಾಗಿದೆ. ನದಿಗಳು ಹರಿದ ಜಾಡುಗಳು ಕಾಲಕಾಲಕ್ಕೆ ಬದಲಾಗಿವೆ. ಅಂತೆಯೇ, ನದಿ ಅಳಿವೆಗಳ, ಕಡಲ ಸೇರುವ ದ್ವಾರಗಳ, ಸ್ಥಾನಿಕ ಬದಲಾವಣೆಗಳಿಂದ ಬಂದರಗಳು ಇದ್ದ ತಾಣಗಳು ಕೂಡಾ ಇತಿಹಾಸದಲ್ಲಿ ಬದಲಾಗುತ್ತಾ ಬಂದಿದೆ. ಕಳೆದ ಹತ್ತು ಸಾವಿರ ವರ್ಷಗಳಲ್ಲಿ ಅಂತೂ ಈ ಎರಡು ನದಿಗಳು ಮಂಗಳೂರಿನಲ್ಲಿ ಬೇಕಾದಷ್ಟು ತಿರುಗಾಡಿದ ಕುರುಹುಗಳು ಇನ್ನೂ ಉಳಿದಿವೆ.

ಭೂವಿಜ್ಞಾನಿಯ ದೃಷ್ಟಿಗೆ ಗೋಚರಿಸುವ ಇಂತಹ ಅನೇಕ ಘಟನೆಗಳು ನಡೆದ ನಿಖರ ಕಾಲವನ್ನು ಗುರುತಿಸುವುದು ಬಹು ಪ್ರಯಾಸದ ಕೆಲಸ.

ಆದರೆ ಕಳೆದ ನಾಲ್ಕು ಸಾವಿರ ವರ್ಷಗಳಲ್ಲಿ ಹರಿದ ಈ ನದಿಗಳ ಚಲನೆಯ ಚಂಚಲ ಜಾಡುಗಳು ಮತ್ತು ಇಲ್ಲಿ ಆಳಿ ಅಳಿದ ಅರಸರ ಸಿಗುವ ಇತಿಹಾಸದ ತುಣುಕುಗಳನ್ನು ತಾಳೆ ಮಾಡಿದಾಗ ಹಲವು ಮಹತ್ವದ ಸಂಗತಿಗಳು ತೆರೆದುಕೊಳ್ಳುತ್ತವೆ.




**

ಹೆಸರುಗಳಲ್ಲಿ ಏನಿದೆ? ಯಾವ ಹೆಸರಿಂದ ಕರೆದರೂ ಒಂದೇ ಅಲ್ಲವೆ?

ಇರಬಹುದು.

ಆದರೆ, ಊರುಗಳ ಪುರಾತನ ಹೆಸರುಗಳಲ್ಲಿ ಊರಿನ ಇತಿಹಾಸ ಮತ್ತು ವಿಕಾಸ ಪಥದ ಹೆಜ್ಜೆಗಳು ಅಡಗಿವೆ.

ಮಂಗಳೂರಿನ ನಾಲ್ಕು ಪುರಾತನ ಹೆಸರುಗಳ ವಿಕಾಸ ಪಥ ಹೀಗಿದೆ:


೧. ಕುಡಾಲ > ಕುಡಲ > ಕುಡ್ಲ > ಕೊಡಾಲ > ಕೊಡೆಯಾಲ > ಕೊಡಿಯಾಲ > ಕೊಡಿಯಾಲ ಬೈಲು.

೨. ಮಾಯಕಳ > ಮಾಯಿಕಳ > ಮಯಿಕಲ > ಮೈಕಲ್.

೩. ಮಂಜರೂರು > (ಮಂಜಾರೂನ್) > ೦

೪. ಮಂಗಾರ > (ಮಂಗಾರೂತ್) > ಮಂಗಳ> ಮಂಗಳಾದೇವಿ > ಮಂಗಲಾಪುರ/ಮಂಗಳಾಪುರ > ಮಂಗಳೂರು.> (ಮೆಂಗಲೋರ್ Mangalore) > ಮಂಗಳೂರು.


ಬನ್ನಿ, ಗತ ಇತಿಹಾಸದ ಅವಲೋಕನ ಮಾಡೋಣ!.


** **

1.ಕುಡಲ/ ಕುಡ್ಲ :

ಕ್ರಿಸ್ತ ಪೂರ್ವ ಕಾಲ: ಕನಿಷ್ಟ ೪೫೦೦ ವರ್ಷಗಳ ಹಿಂದೆ.

ನಾಗರೀಕತೆಯ ಆರಂಭದಿಂದ ಇದ್ದು ಇದುವರೆಗೂ ಉಳಿದಿರುವ ಹೆಸರುಗಳಲ್ಲಿ "ಕುಡಾಲ" ಅತ್ಯಂತ ಹಳೆಯದೆಂದು ಅನಿಸುತ್ತದೆ. ಅಂದಾಜು ೪೫೦೦ ವರ್ಷಗಳ ಹಿಂದೆ, ಮಾನವ ವಿಕಾಸದ ಆರಂಭದ ಹಂತದಲ್ಲಿ ಬೇಟೆಯಿಂದ ಬೇಸಾಯದ ದಾರಿ ಹಿಡಿದು ಆದಿಮಾನವ ಕಾಡಿನಿಂದ ನಾಡಿಗೆ ಬಂದು ನೆಲೆ ನಿಂತು ಬೇಸಾಯಕ್ಕೆ ಸೂಕ್ತ ನೀರಿನ ಆಶ್ರಯದ ನೆಲೆಗಳನ್ನು ಆಯ್ದು ಹುಡುಕಿಕೊಂಡು ಕೃಷಿ ಆರಂಭಿಸಿದ ಕಾಲಘಟ್ಟ. ದ್ರಾವಿಡ ಭಾಷೆಗಳು ಬಹುಶಃ ಇನ್ನೂ ಕಾಲಿಟ್ಟಿರಲಿಲ್ಲ. ಆದಿವಾಸಿಗಳ ಬಾಯಲ್ಲಿ ಅಂದಿನ ಮುಂಡಾ ಭಾಷೆಗಳು, ಇನ್ನು ಹಲವೆಡೆ ಪ್ರಾಕೃತ ಬಾಷೆಗಳು.

ಹೀಗೆ ಪೂರ್ವಜ ಅದಿವಾಸಿಗಳು ಹರಿವ ಒಂದು ಸುಂದರ ನದಿಯ ಬಯಲನ್ನು ಬೇಸಾಯ ಮಾಡಲು ಸೂಕ್ತವೆಂದು ಆಯ್ದುಕೊಂಡ ಪ್ರದೇಶಕ್ಕೆ ಅಂದು ಇಟ್ಟ ಹೆಸರು: ಕುಡಾಲ.

"ಕುಡಾಲ" ಪದವನ್ನು ಬಿಡಿಸಿ ನಾವು ಅರ್ಥ ಮಾಡಿಕೊಳ್ಳುವಾಗ - ಅದು "ಕೂಡಲ" ಇರಬಹುದು, ಎರಡು ನದಿಗಳು ಪರಸ್ಪರ ಕೂಡುವ/ಕೂಡಿದ ಜಾಗ - ಎಂದು ಹಿಂದೆ ಭಾವಿಸಿದ್ದು ಉಂಟು. ಆದರೆ ಗಮನಿಸಿ: ಅದು ಕುಡಾಲ/ಕುಡಲ, ಕೂಡಲ ಅಲ್ಲ!

"ಕುಡಾಲ" (ಕುಡ+ಅಲ), ಈ ಪ್ರಾಚೀನ ಪದದಲ್ಲಿ: ಕುಡ = (ಕು+ಡ) = ಉತ್ತಮ + ನೆಲ/ಭೂಮಿ;

ಆಲ = ನೀರು ('ಆಲ'= 'ಜಲ' ಪದದ ಪ್ರಾಚೀನ ಮೂಲರೂಪ).

ಹೀಗೆ ಒಟ್ಟಿನಲ್ಲಿ, ಕುಡಾಲ ಎಂದರೆ ಜಲಮೂಲ ಸೌಲಭ್ಯ ಇದ್ದ ಉತ್ತಮ ಭೂಮಿ.

ಇಂತಹ ಉತ್ತಮ ನೆಲ ("ಕುಡ") ದಲ್ಲಿ ಮೊದಲು ಬೆಳೆದ ಕಾಳಿಗೆ ನಮ್ಮ ಪೂರ್ವಜರು ನೀಡಿದ ಹೆಸರು ಏನಿರಬಹುದು?

ಕುಡು! ಕುಡು (Macrotyloma uniflorum) ಅಂದರೆ ಹುರುಳಿ. ಹುರುಳಿ ದಕ್ಷಿಣಭಾರತದಲ್ಲಿ ಬೆಳೆದ ಮೂಲ ಬೆಳೆಗಳಲ್ಲಿ ಒಂದು. ಇದು ಡಾ| ಡೊರಿಸ್ ಫುಲ್ಲರ್ ಮತ್ತವರ ಸಂಗಡಿಗರು (Doris Fuller and others) ಪ್ರಾಚ್ಯ ಸಸ್ಯವಿಜ್ಞಾನ (archeo-botany) ಅಂದರೆ ಪ್ರಾಚ್ಯಕಾಲದ ಕಾಳು ಧಾನ್ಯಗಳ ಪಳಿಯುಳಿಕೆಗಳನ್ನು ಅಧ್ಯಯನ ಮಾಡಿ ಪ್ರಕಟಿಸಿದ ವರದಿಗಳ ಅನುಸಾರ. ಡಾ| ಫುಲ್ಲರ್ ಅವರ ತಂಡ ಕರ್ನಾಟಕದಲ್ಲಿ ಪ್ರಾಚೀನಕಾಳುಗಳ ಅವಶೇಷಗಳ ಅಧ್ಯಯನ ನಡೆಸಿದ್ದು ಬಳ್ಳಾರಿಯ ಹತ್ತಿರದ ಸಂಗನಕಲ್ಲು, ಬೂದಿಹಾಳ ಪ್ರದೇಶಗಳಲ್ಲಿ. ಈ ಕಾಲುಗಳ ಕಾಡುಪ್ರಬೇಧಗಳು ಸಹ್ಯಾದ್ರಿ ತಪ್ಪಲುಗಳಲ್ಲಿ ಕಾಣ ಸಿಕ್ಕಿವೆ ಎಂದ ಮೇಲೆ ಬಳ್ಳಾರಿಯ ಸುತ್ತ ಬೆಳೆದ ಬೆಳೆಗಳು ಮಲೆನಾಡು ಕರಾವಳಿಗಳಲ್ಲಿ ಕೂಡಾ ಇದ್ದವು ಎಂದು ತಿಳಿಯಬಹುದಾಗಿದೆ.(ಕರಾವಳಿ ಮಲೆನಾಡು ಭಾಗದಲ್ಲಿ ಈ ಬಗೆಯ ಅಧ್ಯಯನಗಳು ಇನ್ನಷ್ಟೇ ಆಗಬೇಕಿವೆ).ಅಂದಿನ ಕಾಳು ಧಾನ್ಯಗಳ ಬೆಳೆಗಳಲ್ಲಿ ಮುಖ್ಯವಾದದ್ದು ಹುರುಳಿ (ಕುಡು/ ಕುಲತಿ), ಉದ್ದು, ಹೆಸರು, ಬಟಾಣಿ, ತೊಗರಿ ನವಣೆ ಇತ್ಯಾದಿ.

*

ಮಂಗಳೂರಿನಂತಹ ಅತಿ ಮಳೆ ಬೀಳುವ ಪ್ರದೇಶಗಳಲ್ಲಿ ಅತಿ ಮಳೆಯ ಕಾರಣದಿಂದ ಇಲ್ಲಿ ಕಾಳುಕಡ್ಡಿಗಳ ಅವಶೇಷಗಳು ಉಳಿದಿರಲಿಕ್ಕಿಲ್ಲ. ಪ್ರಾಚ್ಯಸಸ್ಯವಿಜ್ಞಾನ ಕಾಲು ಅವಶೇಷಗಳ ಅಧ್ಯಯನಗಳು ಇದುವರೆಗೂ ಆದಂತಿಲ್ಲ

ಆದರೆ ಕುಡಲ-ಕುಡು ಈ ಪ್ರಾಚೀನ ಪದಗಳ ಅನ್ಯೋನ್ಯತೆ ನೋಡಿ ನನಗನಿಸಿದ್ದು ಏನೆಂದರೆ ಅಕ್ಕಿ/ಭತ್ತದ ಬೆಳೆ ದಕ್ಷಿಣ ಭಾರತಕ್ಕೆ ಪ್ರವೇಶವಾಗುವ ಮೊದಲು (ಅಂದರೆ ೩೫೦೦ ವರ್ಷಗಳ ಹಿಂದೆ), ಕುಡಲದಲ್ಲಿ ಬೆಳೆಯುತಿದ್ದ ಬೆಳೆಗಳಲ್ಲಿ ಕುಡು ಪ್ರಧಾನ ಸ್ಥಾನದಲ್ಲಿತ್ತು ಎಂದು. ಪ್ರಾಚ್ಯಕಾಳುಗಳ ಪಳಿಯುಳಿಕೆ ಅಧ್ಯಯನಗಳೂ ಕೂಡಾ ಕುಡು ಭಾರತ ಮೂಲದ ಪ್ರಾಚೀನ ಬೆಳೆ ಎನ್ನುವುದನ್ನು ಸಮರ್ಥಿಸಿವೆ.

ಅಂದ ಹಾಗೆ, ಈ ಪ್ರಾಚೀನ ಪದಗಳು ಕುಡಲ, ಕುಡು, ಆಲ ಇತ್ಯಾದಿ ಪ್ರಾಚೀನ ಆಸ್ತ್ರೋ-ಏಸಿಯಾಟಿಕ್/ಮುಂಡಾ ಭಾಷೆಯ ಮೂಲದ ಪದಗಳು.

ತುಳುವರಲ್ಲಿ ವ್ಯಾಪಕವಾಗಿ ಈ ಪ್ರಾಚೀನ ಕುಡಲ ಪದವನ್ನು ಹಿಂದೆ ಇದ್ದ ಭಾಷೆಗಳಿಂದ ಎರವಲು ಪಡೆದುಕೊಂಡಿರುವಂತಿದೆ.

ಅಂದಿನಿಂದ ಇಂದಿನ ವರೆಗೂ ಕುಡಾಲ/ಕುಡಲ/ಕುಡ್ಲ ಹೆಸರು ಉಳಿದಿದೆ.

**

1.1 ಕೊಡಾಲ

ಇತಿಹಾಸದಲ್ಲಿ ಈ ನಡುವೆ ಶಾಸನಗಳಲ್ಲಿ ಕುಡಾಲ > ಕೊಡಾಲ ರೂಪ ಪಡೆದುದ್ದನ್ನು ಕಾಣುತ್ತೇವೆ.

ಕ್ರಿಸ್ತಶಕ ಎಂಟನೆ ಶತಮಾನದ ಆಳುಪ ಚಿತ್ರವಾಹನನ ಶಾಸನದಲ್ಲಿ "ಕೊಡಾಲ" ಎಂದಿದೆ. ಕೊಡಾಲದಿಂದ ಪ್ರತ್ಯೇಕವಾಗಿದ್ದ ತೆಂಕಣ ನಗರ ಪ್ರದೇಶ "ಮಂಗಲಪುರ" ಎನ್ನುವ ಹೆಸರು ಕೂಡಾ ಆಗ ರೂಡಿಯಲ್ಲಿತ್ತು.

ಸುಮಾರು ಕ್ರಿಸ್ತ ಶಕ 785: ಎರಡನೆಯ ಚಿತ್ರವಾಹನನ (ಸು.760-800) ಉದ್ಯಾವರ ಶಾಸನದಲ್ಲಿ "ಕೊಡಾಲ" ಮತ್ತು "ಮಂಗಲಪುರ"ದ ಉಲ್ಲೇಖವಿದೆ. ಚಿತ್ರವಾಹನನ ಜೀವಿತಾವಧಿಯಲ್ಲಿಯೇ ಕೊಡಾಲ ಮತ್ತು ಮಂಗಲಪುರಗಳು ಪ್ರತ್ಯೇಕ ಸ್ಥಳಿಯ ಆಡಳಿತ ವ್ಯವಸ್ಥೆಗೆ ಒಳಗಾಗಿದ್ದವು.

**

1.2. ಕೊಡೆಯಾಲ

ಕ್ರಿಸ್ತ ಶಕ 14 ನೆಯ ಶತಮಾನ :

ಕೊಡಾಲ > ಕೊಡೆಯಾಲ

ಮಂಗಳೂರು 14ನೆಯ ಶತಮಾನದಲ್ಲಿ ವಿಜಯನಗರದ ಅರಸರ ಪಾಲಾದಾಗ ಕನ್ನಡ ಆಡಳಿತ ಭಾಷೆಯಾಯಿತು. ಸ್ಥಳೀಯವಾಗಿ ಆಗ ರೂಢಿಯಲ್ಲಿದ್ದ "ಕೊಡಾಲ" ಹೆಸರು ಕನ್ನಡಕ್ಕೆ ಅನುವಾದಿಸುವಾಗ "ಕೊಡೆಯಾಲ" ಎಂದಾಯಿತು!

ಆ ಕಾಲದ ತರುವಾಯದ ಶಾಸನಗಳಲ್ಲಿ ಕೊಡೆಯಾಲ ನೆಲೆಯಾಗಿದೆ.

ಕೊಡಿಯಾಲಬೈಲು ಮೂಲಕ ಹರಿಯುತಿದ್ದ ಗುರುಪುರ ನದಿ ಕುದ್ರೋಳಿಯ-ಬೋಳಾರದ ಬಳಿ ಕಡಲು ಸೇರುತಿತ್ತು (ಈಗ ಇಲ್ಲ! ನದಿ - ಕಡಲ ಸಂಗಮ ಸ್ಥಾನ ಬದಲಾಗಿದೆ.). ವಿಜಯನಗರದ ಅರಸರಿಗೆ ಈ ಕೊಡಿಯಾಲ (ಮಂಗಳೂರು) ಬಂದರು ವಿದೇಶ ವ್ಯಾಪಾರ-ವಹಿವಾಟುಗಳಿಗೆ ಅತಿ ಅಗತ್ಯವಾಗಿತ್ತು.

ಕುದ್ರೋಳಿಯ ಹೆಸರು ಕೂತುಹಲಕಾರಿಯಾಗಿ ಇತಿಹಾಸವನ್ನು ಬಚ್ಚಿಟ್ಟುಕೊಂಡಿದೆ! ಕುದ್ರೋಳಿ = ಕುದುರು+ಓಳಿ! ಕುದುರು ಅಂದರೆ ನದಿ ನಡುವಿನ ದ್ವೀಪ. ಓಳಿ (ಪ್ರಾಕೃತ) ಅಂದರೆ ಹಳ್ಳಿ. ಕುದ್ರೋಳಿಯು ನದಿ ಕಡಲ ಸಂಗಮ ಸ್ಥಾನದಲ್ಲಿ ಒಂದು ಇದ್ದ ಕುದುರು (ದ್ವೀಪ)! ಕುದ್ರೋಳಿ: ಕೆಲವರ ಪ್ರಕಾರ ಅದು ಕುದುರೆ ಓಳಿ ಕುದುರೆ ಕಟ್ಟುತಿದ್ದ ಜಾಗ.

**

1.3 ಕೊಡಿಯಾಲ

ಕೊಡೆಯಾಲ > ಕೊಡಿಯಾಲ.

ಹದಿನೈದು ಹದಿನಾರನೆಯ ಶತಮಾನದಲ್ಲಿ ಗೋವಾದಿಂದ ಕುಡಲಕ್ಕೆ ಬಂದು ನೆಲೆಸಿದವರು ಗೌಡ ಸಾರಸ್ವತರು ಕುಡಲ ಪರಿಸರದಲ್ಲಿ ನೆಲಸಿ ಊರಿಗೆ "ಕೊಡಿಯಾಲ" ಹೆಸರನ್ನು ಬಳಸಿದರು. ಅವರು ಸ್ಥಾಪಿಸಿದ ವೆಂಕಟರಮಣ ದೇವರ ವಾರ್ಷಿಕ ರಥೋತ್ಸವಕ್ಕೆ "ಕೊಡಿಯಾಲ್ ತೇರು" ಅಂತ ಹೆಸರು.

ಅಂದಿನ ಕುಡಲ/ಕೊಡಲ/ಕೊಡಿಯಾಲ ಒಂದು ಬೇಸಾಯದ ಬಯಲು ಪ್ರದೇಶವಾಗಿದ್ದ ಕಾರಣ "ಬೈಲು" (< ಬಯಲು) ಸೇರಿಕೊಂಡು ಊರ ಹೆಸರು "ಕೊಡಿಯಾಲ ಬೈಲು" ಆಯಿತು. ಬೈಲುಗಳು ಹರಿಯುವ ನದಿಗಳ ಬದಿಯಲ್ಲಿರುವುದು ಕರಾವಳಿಯಲ್ಲಿ ನಾವು ಕಾಣುವ ರೂಡಿ. ಈ ಕೊಡಿಯಾಲಬೈಲಿನ ಹತ್ತಿರ ಈ ಹಿಂದೆ ಯಾವುದಾದರೂ ನದಿ ಇತ್ತೆ? ಹೌದು! ಈಗ ಮಹಾತ್ಮ ಗಾಂಧಿ ರಸ್ತೆ (ಎಂ.ಜಿ. ರೋಡ್) ಯಲ್ಲಿ, ಈಗ ಕೊಡಿಯಾಲ-ಬೈಲು ದಾಟಿ ಬಲ್ಲಾಳ-ಬಾಗ್ ಬರುವ ಮುನ್ನ ಒಂದು ರಾಜಾಕಾಲುವೆ ಇದೆಯಲ್ಲಾ, ಅದು ಹಿಂದೆ ಗುರುಪುರ ನದಿ ಹರಿಯುತ್ತಿದ್ದ ಜಾಡು! ಕೊಡಿಯಾಲ ಒಂದು ಸ್ಥಳದ ಹೆಸರಾಗಿ ಉಳಿಯಿತು. ದಕ್ಷಿಣ ಭಾಗದ ಮಂಗಳೂರು ಹೆಸರು ಇಡೀ ಊರಿಗೆ ಸ್ಥಿರವಾಯಿತು.

ಬಂಗ ಅರಸರು ಕೊಡಿಯಾಲದಲ್ಲಿ ಅರಮನೆ ಕಟ್ಟಿಕೊಂಡಿದ್ದರು. ಬಂಗರ ನಂತರ ಕೊಡಿಯಾಲ ಒಂದು "ಗುತ್ತು" (ದೊಡ್ಡಮನೆ) ಆಗಿ ಉಳಿದಿದೆ.

ಗುರುಪುರ ನದಿ ಅಂದಿನ ಕಾಲದಲ್ಲಿ ಕೊಡಿಯಾಲ ಬೈಲಿನ ಬಳಿ ಹರಿಯುತಿತ್ತು. ಈ ನದಿಗೆ "ಬೋಳೂರು ನದಿ" ಅಂತ ಪ್ರವಾಸಿ ಪೀಟ್ರೊ ದಲ್ಲಾ ವಲ್ಲೆ (೧೬೨೩) ಬಣ್ಣಿಸಿದ್ದಾನೆ. ಅಂದು ಅಲ್ಲಿ ಹರಿಯುತಿದ್ದ ನದಿ, ಕಾಲಕ್ರಮೇಣ ತನ್ನ ಹರಿಯುವ ಜಾಡನ್ನು ಬದಲಾಯಿಸಿದರೂ, ಹಳೆಯ ನದಿಜಾಡು ಈಗ ಒಣಗಿ ಹೋಗಿದ್ದು ಉಳಿದಿದೆ., ಆ ಜಾಡಿನಲ್ಲಿ ನದಿಗಳಲ್ಲಿ ಸಿಗುವ ದುಂಡು ಕಲ್ಲುಗಳ ಕುರುಹುಗಳು (ನಗರೀಕರಣದ ದಟ್ಟತೆರೆಯ ಹಿಂದೆ ಅಡಗಿದ್ದರೂ) ಇಂದೂ ಕೂಡಾ ಸಾಕ್ಷಿಯಾಗಿ ಉಳಿದಿವೆ.

ಕುದ್ರೋಳಿಯ ಕೊಡಿಯಾಲ ಬಂದರವಿದ್ದ ಸ್ಥಳದ ಉತ್ತರ ಬದಿಯಲ್ಲಿ ವಿಜಯನಗರ ಆಳ್ವಿಕೆಯ ಕಾಲದಲ್ಲಿ ಇದ್ದ ಮೊಗವೀರರ (ಮೀನುಗಾರರ) ಒಂದು ವಸಾಹತು ಇದೆ. ಮೊಗವೀರರ ಜನವಸತಿಗಳಿಗೆ "ಪಟ್ಟಣ" ಎಂದು ಕರೆಯುತ್ತಾರೆ. ಕೊಡಿಯಾಲ ಬಂದರದ ಸನಿಹದ ಈ ಜನವಸತಿಯ ಹೆಸರು ಬೊಕ್ಕ ಪಟ್ಟಣ! ಬೊಕ್ಕ (ಬುಕ್ಕರಾಯ) ವಿಜಯನಗರದ ದೊರೆಯಾಗಿದ್ದ. ಬೊಕ್ಕನ ಹೆಸರಿನಲ್ಲಿದೆ. ಬೋಳೂರಿನ "ಬೊಕ್ಕಪಟ್ಟಣ" ಈಗಲೂ ಇದೆ.

*

ಕೊಡಿಯಾಲ ಬಂದರ ಇತಿಹಾಸದಲ್ಲಿ :

1469. ವಿಜಯನಗರ ಕಾಲದಲ್ಲಿ ಕೊಡಿಯಾಲ ಬಂದರ ಮಂಗಳೂರು ಬಂದರವಾಗಿತ್ತು. ವಿಜಯನಗರದ ಪ್ರತಿನಿಧಿ ವಿಟ್ಟರಸ ಒಡೆಯನು ಆಳುತಿದ್ದಾಗ ಬಂಗ ಅರಸ ಕಾಮಿರಾಯನ ಕೊಡೆಯಾಲದ ಅರಮನೆಯನ್ನು ಮತ್ತು ನೀರುಮಾರ್ಗದ ಮನೆಗಳನ್ನು ಸುಟ್ಟುಹಾಕಿದ ವೃತ್ತಾಂತವಿದೆ.

1498 ಪೋರ್ಚುಗೀಸ್ ದೇಶದ ನಾವಿಕ-ವರ್ತಕ ವಾಸ್ಕೊಡಗಾಮನ ಮಂಗಳೂರು-ಸೈಂಟ್ ಮೇರಿ ದ್ವೀಪಗಳ ಬೇಟಿ

ಸು.1530 ಮಂಗಳೂರಿಗೆ ಪೋರ್ಚುಗೀಸ್ ವರ್ತಕರ ಆಗಮನ.

ಸು.1618 ಇಕ್ಕೇರಿಯ ವೆಂಕಟಪ್ಪ ನಾಯಕ ಪೋರ್ಚುಗೀಸರನ್ನು ಸೋಲಿಸಿ ಮಂಗಳೂರಿನ ಆಡಳಿತ ವಹಿಸಿಕೊಂಡರು.

1623 ಇಟಲಿ ಪ್ರವಾಸಿ ಪೀಟ್ರೊ ದಲ್ಲಾ ವಲ್ಲೆಯ ಮಂಗಳೂರು ಸಂದರ್ಶನ. ಗುರುಪುರ ನದಿ ಅಂದಿನ ಕಾಲದಲ್ಲಿ ಕೊಡಿಯಾಲ-ಬೋಳೂರು ಬಳಿ ಹರಿಯುತಿತ್ತು. ಅಂದು ಅಲ್ಲಿ ಹರಿಯುತಿದ್ದ ನದಿಗೆ "ಬೋಳೂರು ನದಿ" ಅಂತ (೧೬೨೩) ಬಣ್ಣಿಸಿದ್ದಾನೆ.

1784 ಮಂಗಳೂರನ್ನು ವಶಪಡಿಸಿಕೊಂಡ ಟಿಪ್ಪು ಸುಲ್ತಾನ ಕೊಡಿಯಾಲ ಬಂದರಿನ ಮೂಲಕ ಪ್ರವೇಶಿಸುವ ಶತ್ರುಗಳ ನಿರ್ನಾಮ ಮಾಡಲು ಬೋಳೂರು ಗ್ರಾಮದ ಗುರುಪುರ ನದಿಯ ಅಳಿವೆ ದಂಡೆಯಲ್ಲಿ ಒಂದು ಬತ್ತೇರಿ (ಮದ್ದುಗುಂಡುಗಳ ಸಂಗ್ರಹಾಲಯ-"ಸುಲ್ತಾನ ಬತ್ತೇರಿ") ನಿರ್ಮಾಣ ಮಾಡಿದನು.

1800 ಫ್ರಾನ್ಸಿಸ್ ಬುಕಾನೆನ್.(1762-1829) (ಲಂಡನ್, ಇಂಗ್ಲೇಂಡಿನ ಪ್ರವಾಸಿ). "ಕೊಡಿಯಾಲ್ ಬಂದರಿನ ವರ್ಣನೆ. ಇಕ್ಕೇರಿ ನಾಯಕರ ಅರಸರ ಆಳ್ವಿಕೆಯಲ್ಲಿ ಎತ್ತರವಾದ ಸ್ಥಳದಲ್ಲಿ ಕೋಟೆ ಇತ್ತು.

1877 ಬೋಳೂರು ನದಿ (ಗುರುಪುರ ನದಿಯ ತಣ್ಣೀರುಬಾವಿಯ ಹತ್ತಿರದ ಅಳಿವೆ ಭಾಗ) ತನ್ನ ಹರಿವ ಪಥ ಬದಲಾಯಿಸಿಕೊಂಡು ದಕ್ಷಿಣಕ್ಕೆ ಬೋಳಾರದ ಕಡೆಗೆ ಚಲಿಸಿತು. ನಿಸರ್ಗದ ಪ್ರಕೋಪದಿಂದ ಒಂದು ಜಡಿಮಳೆಯ ದಿನ ಕೊಡಿಯಾಲ ಬಂದರದ ಬಳಿ ಅರಬಿ ಕಡಲನ್ನು ಸೇರುತಿದ್ದ ಗುರುಪುರ ನದಿ ಇದ್ದಕಿದ್ದಂತೆ ಪಥ ಬದಲಾಯಿಸಿ ದಕ್ಷಿಣಕ್ಕೆ ಹರಿದು ನೇತ್ರಾವತಿಯನ್ನು ಸೇರಿ, ಎರಡೂ ನದಿಗಳು ಒಟ್ಟಾಗಿ (ಈಗಲೂ ಇರುವಂತಹ) ಕಡಲಸೇರುವ ಸನ್ನಿವೇಶ ಆರಂಭವಾಯಿತು. ಅಂದು ಕೊಡಿಯಾಲ ಬಂದರದ ಅಸ್ತಿತ್ವ ಕೊನೆಗೊಂಡಿತು.

ಸು .1880 .ಕೊಡಿಯಾಲ ಬಂದರು ಮುಚ್ಚಿಹೋದ ಮೇಲೆ ಬ್ರಿಟಿಷರ ಕಾಲದ ಹಳೆ ಬಂದರು ಆರಂಭವಾಯಿತು. ಅದೀಗ ಮುಖ್ಯವಾಗಿ ಮೀನುಗಾರಿಕೆಯ ಧಕ್ಕೆಯಾಗಿದೆ.

*

ಮುಚ್ಚಿಹೋದ ಕೊಡಿಯಾಲ ಬಂದರ:

೧೮೭೭ ನಂತರ ಕೊಡಿಯಾಲ ಬಂದರಿನ ಕಡಲ ಪ್ರವೇಶ ದ್ವಾರ ಮರಳುದಿನ್ನೆಯಿಂದ ಮುಚ್ಚಿ ಹೋಯಿತು. ಈಗ ಅಲ್ಲಿ ಈ ಹಿಂದೆ ಬಂದರು ಇದ್ದ ಸ್ಪಷ್ಟ ಭೌಗೋಳಿಕ ಕುರುಹುಗಳು ಬಹುತೇಕ ಕಾಣೆಯಾಗಿವೆ. ಸುತ್ತುಮುತ್ತಲ ಸ್ಥಳಗಳ ಹೆಸರುಗಳು, ಸುಲ್ತಾನ ಬತ್ತೇರಿಯ ಕುರುಹು ಹಾಗೂ ಇತರ ಅಸ್ಪಷ್ಟವಾಗಿರುವ ಇತಿಹಾಸದ ಮೂಕ ದಾಖಲೆಗಳು ಮಾತ್ರಾ ಮುಂದಿನ ಪೀಳಿಗೆಯವರ ಮಾಹಿತಿಗಾಗಿ ಉಳಿದುಕೊಂಡಿವೆ!

** **



2. ಮಾಯಕಳ ದಿಂದ ಮೈಕಲ ದವರೆಗೆ

ಕ್ರಿಸ್ತಪೂರ್ವದ ಕೊನೆ ಹಾಗೂ ಕ್ರಿಸ್ತ ಶಕ ಆರಂಭದ ಶತಮಾನಗಳು

ಮಾಯಕಳ > ಮೈಕಲ:

ಮಾಯ+ಕಳ : ಮಾಯದೇವಿ, (ಗೌತಮ ಬುಧ್ಧನ ತಾಯಿಯ ಹೆಸರು) .ಕಳ (=ಅಂಗಣ). ಮಾಯಕಳ ಬೌಧರ ಒಂದು ಚೌತಾಲಯ.

*

ಮಂಗಳೂರಿನ ಬಂದರದಲ್ಲಿರುವ ಜೀನತ್ ಬಕ್ಷ್ ಮಸೀದಿ ಸಾಮಾನ್ಯ ಶಕ ೬೪೪ ರಲ್ಲಿ ಸ್ಥಾಪನೆ ಮಾಡಿದ್ದು ಎಂದು ತಿಳಿಯಲಾಗಿದೆ. ಕೇರಳದಿಂದ ಮಂಗಳೂರಿಗೆ ಸುಮಾರು ಕ್ರಿಸ್ತ ಶಕ ಆರನೆ ಶತಮಾನಗಳಿಂದ ಅರಬರು ಮತ್ತು ಬ್ಯಾರಿ ವರ್ತಕರು ವ್ಯಾಪಾರಕ್ಕೆಂದು ಬರುತಿದ್ದರು. ಅವರು ಮಂಗಳೂರಿನ ಬಂದರು ಪ್ರದೇಶಕ್ಕೆ "ಮಯಿಕಲ" ಎನ್ನುತಿದ್ದರು. ಬ್ಯಾರಿ ಬಾಂದವರು ಇಂದಿಗೂ ಮಂಗಳೂರನ್ನು "ಮೈಕಲ" ಎಂದೇ ಕರೆಯತ್ತಾರೆ. ಈ ವರ್ತಕರು ಬಂದರ ಪ್ರದೇಶಕ್ಕೆ ಇದ್ದಿಲು ಖರೀದಿಸಲು ಬರುತಿದ್ದರು, "ಮೈಕಲ" ಅಂದರೆ ಇದ್ದಿಲಿನ ಅಂಗಡಿ ಆಥವಾ ಸಂತೆ ಅಂತ ಜನಸಾಮಾನ್ಯ ಜನಾಭಿಪ್ರಾಯ. ಆಗ ಇದ್ದಿಲು (charcoal ) ಮಾರುವ ಅಂಗಡಿ ಈಗಿನ ರಥಬೀದಿಯ ಪಡುವಣ ಭಾಗದಲ್ಲಿತ್ತು ಎಂದು ಹೇಳಲಾಗಿದೆ.

"ಮೈಕಲ" ಪದವನ್ನು ಬಿಡಿಸಿದರೆ ಕೂತುಹಲಕಾರಿ ಮಾಹಿತಿ ದೊರೆಯುತ್ತದೆ. ಮಯಿ+ಕಲ. ಮಯಿ ಅಂದರೆ (ತುಳುವಿನಲ್ಲಿ) ಕಣ್ಣಿಗೆ ಹಚ್ಚುವ ಕಾಡಿಗೆ, ಇದ್ದಿಲು ಅಲ್ಲ! (ಇದ್ದಿಲಿಗೆ ತುಳುವಿನ ಸಮಾನ ಪದ: ಮಜ್ಜಿ).

ಹಾಗೆಯೇ, ಕಲ/ಕಳ (=ಅಂಕಣ/ಅಂಗಣ/ಚೌಕ) ಎನ್ನುವ ಹಳೆಯ ಪದವನ್ನು ಭೂತಾರಾಧನೆ ಗಾಢ ವಾಗಿದ್ದ ಕಾಲದ್ದಲ್ಲಿ ತೆರೆದ ಪೂಜಾ ಅಂಕಣಗಳನ್ನು ನಿರ್ದೇಶಿಸಲು ಬಳಸುತಿದ್ದರು. ಅನೇಕ ಊರುಗಳ ಹೆಸರುಗಳಲ್ಲಿ ಕಲ/ಕಳ ಉಳಿದಿದೆ (ಉದಾ: ಐಕಳ, ಕಾರ್ಕಳ, ಜಾರ್ಕಳ, ಭಟ್ಕಳ,,.. ಇತ್ಯಾದಿ)

ಹಾಗಾದರೆ, ಈ ಹೆಸರು ಮೂಲತಃ "ಮಾಯಕಳ" ಅಥವಾ "ಮಾಯಿಕಳ" ಆಗಿರಬಹುದೇ? ಮಾಯಕಳ/ಮಾಯಿಕಲ ಜನರು ಉಚ್ಚರಿಸುವಾಗ "ಮೈಕಲ" ಆಗಿದೆಯೆ? ಹೌದು, ಸಾಧ್ಯತೆ ದಟ್ಟವಾಗಿದೆ.


ಮಾಯದೇವಿ ಅಂದರೆ ಗೌತಮ ಬುದ್ಧನ ತಾಯಿಯ ಹೆಸರು. ಮಾಯಿ (ತಾಯಿ) ಎನ್ನುವ ರೂಡಿಯೂ ಇತ್ತು. ಮಾಯದೇವಿಯ ಆರಾಧನೆ ಬೌದ ಧರ್ಮ ಉನ್ನತಿಕಾಲದಲ್ಲಿ ರೂಡಿಯಲ್ಲಿತ್ತು.

ತುಳುನಾಡು ಕ್ರಿಸ್ತ ಶಕದ ಆರಂಭದ ಮೊದಲೇ ಭಾಗಶಃ ಬುದ್ದ ಧರ್ಮದ ಪ್ರಭಾವದಡಿಯಲ್ಲಿತ್ತು. ದಕ್ಕಣವನ್ನು ಕ್ರಿಸ್ತ ಶಕದ ಆರಂಭದಲ್ಲಿ ಆಳಿದ ಶಾತವಾಹನರು (ಕನ್ನರು) ಮಹಾರಾಷ್ಟ್ರದ ಸಹ್ಯಾದ್ರಿ ಸ್ತೋಮದ ಕಪ್ಪು ಬಸಾಲ್ಟ್ ಶಿಲೆಗಳಲ್ಲಿ ಗುಹೆ ಕೊರೆದು ರೂಪಿಸಿದ ಬೌದ ವಿಹಾರಗಳು ಇಂದಿಗೂ ಅಚ್ಚರಿ ಹುಟ್ಟಿಸುತ್ತವೆ. ಅವರ ಕಾಲ ಅಥವ ಅದಕ್ಕಿಂತ ಮುಂಚೆ ಬಂದ ನಂದರ ಕಾಲದಲ್ಲಿ ಬೌದಧರ್ಮ ಕರಾವಳಿಗೆ ಬಂದು ನೆಲೆಯಾದಂತಿದೆ.

ಹಾಗಿರುವಾಗ ಮಂಗಳೂರಿನ ಪ್ರಾಚೀನ ಬಂದರು ಪ್ರದೇಶದಲ್ಲಿ ಮಾಯದೇವಿಯ ಆರಾಧನೆಯ ಕಳ(ಸ್ಥಳ) ಮಾಯಕಳ ಇದ್ದಿರಬಹುದು. ಬಂದರ ಪ್ರದೇಶದ ಇದ್ದಿಲು ಮಾರುಕಟ್ಟೆಯ ಸ್ಥಳದಲ್ಲಿ ಇದ್ದ ಮಾಯಕಳದ ಹೆಸರು ಬಂದಿರುವುದು ಸಹಜವಾಗಿದೆ. ಮಾಯಕಳ (ಮಾಯಿಕಲ) ಎಂಬ ಹೆಸರು ಉಚ್ಚಾರಣೆಯಲ್ಲಿ "ಮೈಕಲ್" ಆಗಿದೆ.

ಅರಬರು ಬಂದರಿಗೆ ವ್ಯಾಪಾರಕ್ಕೆ ಬರುವ ವೇಳೆಗೆ ಮಂಗಳೂರಿನ ಪ್ರಾಚೀನ ಬೌಧ ಸಂಪ್ರದಾಯಗಳು ಅವನತಿಯ ಹಾದಿಯಲ್ಲಿ ಇದ್ದಿರಬಹುದು. ಆದರೂ ಮಾಯಿಕಳ ಎಂಬ ಹೆಸರು ತದನಂತರವೂ ಉಳಿದಿರುವ ಸಾಧ್ಯತೆ ಇದೆ. ಕೆಲವು ಪ್ರಸಿದ್ಧ ನೆಲಗುರುತುಗಳು ( landmarks) ಕಾಲಕ್ರಮೇಣ ಅವನತಿ ಹೊಂದಿದರೂ ಆ ಹೆಸರುಗಳು ಹಾಗೆಯೆ ಉಳಿಯುವುದುಂಟು! ಮಾಯಿಕಳವು ಕಾರಣಾಂತರದಿಂದ ಅಳಿದ ಮೇಲೂ ಆ ಸ್ಥಳನಾಮ ಅಳಿಯದೇ ಉಳಿದಿರಬಹುದು.

ಮಂಗಳೂರಿನ ಪ್ರಾಚೀನ ಚರಿತ್ರೆಯನ್ನು ತಿಳಿಸುವ ಈ ಹೆಸರನ್ನು ಉಳಿಸಿ ಇಂದಿಗೂ ಜೀವಂತವಾಗಿಟ್ಟ ನಮ್ಮ ಬ್ಯಾರಿ ಬಾಂಧವರನ್ನು ಇತಿಹಾಸ ಪ್ರೇಮಿಗಳು ಕೃತಜ್ಞತೆಯಿಂದ ನೆನೆಯಬೇಕು.

** **



3.ಮಂಜರೂರು

(ಕ್ರಿಸ್ತಶಕ ಹತ್ತರಿಂದ - ಹದಿನಾಲ್ಕನೆಯ ಶತಮಾನವರೆಗೆ)

ಹಲವು ಸಂಶೋಧಕರಿಗೆ ಮಂಜರೂರು ಎಂಬ ಹೆಸರು ಮಂಗಳೂರು ಪದದ ಅಪಭ್ರಂಶವೋ ಏನೋ ಎಂಬ ಸಂದೇಹ ನೀಡಿದೆ. ಅಲ್ಲ! ಅದು ಮಂಜರ+ಊರು - ಮಂಜುನಾಥನ ಊರು.

ಮಂಗಳೂರಿನ ನಡುಭಾಗಕ್ಕೆ ಮಂಜರೂರು ಎಂಬ ಹೆಸರು ವಿದೇಶಿ ಪ್ರವಾಸಿಗಳ ವರದಿಗಳ ಅನುಸಾರ ಕ್ರಿಸ್ತ ಶಕ ಹತ್ತನೆಯಿಂದ ಹದಿನಾಲ್ಕನೆ ಶತಮಾನದ ವರೆಗೆ ರೂಡಿಯಲ್ಲಿತ್ತು. ಮಂಜರೂರು ಅರಬ ವರ್ತಕರ ಬಾಯಲ್ಲಿ ಮಂಜರೂನ್ ಆಗಿತ್ತು.ಮಂಜರೂರು ಆಗ ಕೊಂಚಾಡಿ-ಆಳುಪೆ-ಕದ್ರಿಯಿಂದ ಕೊಡಿಯಾಲ ಬಂದರದವರೆಗೆ ಆಗ ಇದ್ದ ಊರ ಹೆಸರು.ಮಂಜರೂರು ಹೆಸರು ಬಂದದ್ದು ಹೇಗೆ?

ಕದ್ರಿ ಪದವಿನ ಒಂದು ಕಡಿದಾದ ಗುಡ್ಡದ ಕೆಳಗೆ ಕಣಿವೆಯಲ್ಲಿದ್ದ ಹಳೆಯ ಕದರಿಕಾ ಎಂಬ ಬೌಧ ಯತಿಗಳ ವಿಹಾರವಾಗಿತ್ತು. ಕದ್ರಿಯ ಪರಿಸರ ರಮಣಿಯವಾಗಿತ್ತು. ಗುಡ್ಡದ ತಪ್ಪಲಿನಿಂದ ಒಸರುತಿದ್ದ ಒಂದು ಚಿಲುಮೆ (ಝರಿ) ವಿಹಾರಕ್ಕೆ ನೀರಿನ ಆಶ್ರಯವಾಗಿತ್ತು. ನಿರಂತರವಾಗಿ ತಂಪಾದ ನೀರು ಸುರಿಯುತಿದ್ದ ಕದ್ರಿಯ ಚಿಲುಮೆ (ಝರಿ). ಅದನ್ನು ನೋಡಿ ಊರಿನ ಜನಸಾಮಾನ್ಯರು ನೀರು ಕಾಶಿಯಿಂದ ಬರುತ್ತಿರಬೇಕು ಅಂದುಕೊಳ್ಳುತ್ತಿದ್ದರು. ಕದರಿಕಾ ವಿಹಾರ ಪಾಳು ಬಿದ್ದ ಮೇಲೆ ಉತ್ತರ ಭಾರತದಿಂದ ಬಂದ ಯೋಗಿಗಳು ಮತ್ಸೇಂದ್ರನಾಥ ಮತ್ತು ಆತನ ಶಿಷ್ಯ ಗೋರಖನಾಥ ಅಳುಪ ಅರಸ ಕುಂದವರ್ಮನ (920-970) ಆಶ್ರಯದಲ್ಲಿ ಇಲ್ಲಿ ಜೋಗಿ ಮಠ ಕಟ್ಟಿ ನೆಲಸಿ ನಾಥ ಪಂಥವನ್ನು ಸ್ಥಾಪನೆ ಮಾಡಿದರು. ಕದ್ರಿಯ ನಾಥರ ಮಠಕ್ಕೂ ಆಳುಪರ ಅರಮನೆ ಇದ್ದ ಆಳುಪೆ-ಮರೋಳಿ ಪದವಿನ ಅಳಿಕೆಗೂ ನಡಿಗೆಯ ದೂರ ಸುಮಾರು ಒಂದೂವರೆ ಕಿಲೋಮೀಟರ್. ಈ ಅಳಕೆ ಈಗಿನ ಬಿಕರ್ನಕಟ್ಟೆಯ ಉತ್ತರ ಭಾಗದಲ್ಲಿದೆ. ಮತ್ಸೇಂದ್ರನಾಥರ ಪ್ರಭಾವಕ್ಕೆ ಸಿಲುಕಿ ಬೌದ ಧರ್ಮದ ಹಿಡಿತದಿಂದ ಹೊರಬಂದ ಆಳುಪ ಅರಸರು ಹೊಸ ಶೈವ ಸಂಪ್ರದಾಯದ ನಾಥ ಪಂಥದ ಅನುಯಾಯಿಗಳಾದರು.

ಕದ್ರಿ ಮಂಜುನಾಥರ ಹೆಸರಿನಿಂದ ಮಂಜರೂರು ಬಂದಿದೆ. ಮಂಗಳೂರಿನ ತೆಂಕಣ ಭಾಗ ಮಂಗಳಾಪುರ ಆಗಿದ್ದಾಗ ಬೋಳೂರು ನದಿಯಿಂದ ಉತ್ತರ ಭಾಗ ಮಂಜರೂರು ಆಯಿತು.ಮಂಗಳಾದೇವಿಯ ಪರಿಸರ ಮಂಗಳಾಪುರ ವಾದರೆ, ಮಂಜುನಾಥನ ಪರಿಸರ ಮಂಜರೂರು ಆಗಿತ್ತು. ಮಂಜರೂರು ಕದ್ರಿ ಪದವಿನಿಂದ (ಕುಡಲ> ಕೊಡಾಲ >) ಕೊಡಿಯಾಲ ನದಿ ಅಳಿವೆಯ ಕೊಡಿಯಾಲ ಬಂದರಿನ ವರೆಗೆ, ಉತ್ತರದಲ್ಲಿ ಕೊಂಚಾಡಿಯವರೆಗೆ ಹಾಗೂ ಪೂರ್ವದಲ್ಲಿ ಅಳಕೆ-ಅಳುಪೆಯವರೆಗೆ ವಿಸ್ತಾರವಾಗಿತ್ತು.

ಮಂಜುನಾಥ ಕದ್ರಿಯಲ್ಲಿ ನೆಲೆಯಾದ ಶಿವನ ರೂಪ. ಶಿವನಿಗೆ ನಾಥ ಪಂಥ ಸ್ಥಾಪನೆ ಮಾಡಿದ ಮಚ್ಚೇಂದ್ರನಾಥ ಯತಿಗಳ ಕಾಲದಲ್ಲಿ ಮಂಜುನಾಥ ಎಂಬ ಹೆಸರು ಬಂದದ್ದು ಮಂಗಳೂರಿನಲ್ಲಿಯೇ. "ಮಂಜುನಾಥ" ಹೆಸರಿನಲ್ಲಿ "ನಾಥ" ಉಪನಾಮ ನಾಥ ಪಂಥದವರ ಕೊಡುಗೆ. ಹೆಸರಿನಲ್ಲಿ "ಮಂಜು" ಎಲ್ಲಿಂದ ಬಂತು? ನಾಥ ಪಂಥದ ಸ್ಥಾಪಕರು ಯತಿಗಳು ಹಿಮಾಲಯ ಸುತ್ತಿ ಬಂದವರು. ಮಂಜು ಮುಸುಕಿದ ಹಿಮಾಲಯದ ಶಿವನ ಸನ್ನಿಧಿಯ ನೆನಪಿಗೆ "ಮಂಜು"ನಾಥ ಹೆಸರು ನೀಡಿದರೆ? ಮತ್ಸೇಂದ್ರನಾಥ (ಮಚ್ಚೇಂದ್ರನಾಥ) ಗುರು ಮತ್ತು ಗೋರಖನಾಥ ಶಿಷ್ಯ ಮುನಿಗಳು ಆಳುಪ ಅರಸ ಕದ್ರಿಯಲ್ಲಿ ಲೋಕೇಶ್ವರನ ಪಂಚಲೋಹದ ವಿಗ್ರಹವನ್ನು ಕುಂದವರ್ಮ ಅರಸ ಸ್ಥಾಪಿಸಿದ ಕಾಲ ಸಾಮಾನ್ಯ ಶಕ ೯೬೮. ಆಳುಪರ ನಾಣ್ಯಗಳಲ್ಲಿ ಎರಡು ಮೀನುಗಳ ಲಾಂಛನವಿದೆ. ಮತ್ಸೇಂದ್ರನಾಥ-ಗೋರಕ್ಷನಾಥರ ಪ್ರಭಾವದ ಅಡಿ ಆಳುಪರು ಈ ಜೋಡಿ ಮೀನುಗಳ ಲಾಂಚನವನ್ನು ಅಂಗಿಕರಿಸಿದರು ಎನ್ನುವ ಅಭಿಮತವಿದೆ. ಹಲವಾರು ಈ ಲಾಂಛನ ನಾಥರಿಂತ ಮೊದಲೇ ಇತ್ತೆಂದು ವಾದಿಸಿದ್ದಾರೆ.

ಹಲವು ಶತಮಾನಗಳ ನಂತರ ಅಣ್ಣಪ್ಪ ಎಂಬವರು ಕದ್ರಿಯ ಕೆರೆಯಲ್ಲಿದ್ದ ಒಂದು ಲಿಂಗವನ್ನು ಧರ್ಮಸ್ಥಳಕ್ಕೆ ಒಯ್ದು ಅಲ್ಲಿ ಸ್ಥಾಪನೆ ಮಾಡಿದರೆಂದು ಸ್ಥಳಪುರಾಣ-ಐತಿಹ್ಯಗಳು ಹೇಳುತ್ತವೆ. ಧರ್ಮಸ್ಥಳದಲ್ಲಿ ಕೂಡಾ ಶಿವನಿಗೆ ಮಂಜುನಾಥ ಎಂಬ ಕದ್ರಿ ದೇವರ ಮೂಲ ಹೆಸರು ಮುಂದುವರಿದಿದೆ.

*

ಕೊಡಿಯಾಲ/ಮಂಜರೂರು ಬಂದರು ನಗರಕ್ಕೆ ಭೇಟಿ ನೀಡಿದ ವಿದೇಶೀ ಪ್ರವಾಸಿಗಳು ತಮ್ಮ ವರದಿಗಳಲ್ಲಿ ಮಂಜರೂರು- ಹೆಸರನ್ನು ದಾಖಲಿಸಿದ್ದಾರೆ.

ಸು.1132- "ಮಂಜರೂರು": Manjarur. ಅಬ್ರಾಹಂ ಬಿನ್ ಯಿಜು - ಆಫ್ರಿಕಾದ ಟುನಿಸಿಯಾ ದೇಶದ ಯಹೂದಿ ವ್ಯಾಪಾರಿ ಕೊಡಿಯಾಲ ಬಂದರಿಗೆ ಬೇಟಿ ನೀಡಿದ. ಈತ ನೋಡಿದ ನಾಡಿನ ಹೆಸರು: "ತುಳುವ". ಊರಿನ ಹೆಸರು: "ಮಂಜರೂರು".

ಸು.1300- "ಮಂಜರೂರು": ರಶೀದುದ್ದೀನ್ ಎಂಬ ಪ್ರವಾಸಿಯ ವರದಿಯಲ್ಲಿ ಮಲಬಾರಿಗೆ ಹೋಗುವ ಜಲಮಾರ್ಗದಲ್ಲಿ ಮಂಜರೂರು ಪ್ರದೇಶ country ಸಿಗುತ್ತದೆ ಎಂದಿದ್ದಾನೆ.

ಸು.1335- "ಮಂಜರೂರು": Manjarur. ಮೊರಾಕ್ಕೊ ದೇಶದ ಪ್ರವಾಸಿ ಇಬ್ನ್ ಬಟೂಟನ ( 1307-1377) ವರದಿಯಂತೆ ಒಂದು ನದಿಯ ಅಳಿವೆಯ ಬಾಗಿಲಿನಲ್ಲಿ ಇರುವ ಮಂಜರೂರು ಒಂದು ದೊಡ್ಡ ಬಂದರು ನಗರ, ಯೆಮೆನ್ ಮೊದಲಾದ ದೂರದೇಶಗಳ ವ್ಯಾಪಾರಿಗಳನ್ನು ಕಾಣಬಹುದು.ಇಲ್ಲಿ ಕಾಳು-ಮೆಣಸು ಮತ್ತು ಶುಂಠಿ ಹೇರಳವಾಗಿದೆ.

ಮಂಜರೂರು ಅರಬ ವರ್ತಕರ ಬಾಯಿಯಲ್ಲಿ ಉಚ್ಚರಿಸುವಾಗ ಮಂಜರೂನ್ ಆಗಿತ್ತು. ಹದಿನಾಲ್ಕನೆ ಶತಮಾನದಲ್ಲಿ ವಿಜಯನಗರದ ಅರಸರ ಕಾಲದಲ್ಲಿ ಕೊಡೆಯಾಲ,ಮಂಜರೂರು, ಮಂಗಲಾಪುರ ಎಲ್ಲವನ್ನು ಸೇರಿಸಿ ಮಂಗಳೂರು ರಾಜ್ಯವನ್ನು ರಚಿಸಿದರು. ಆ ಬಳಿಕ "ಮಂಜರೂರು' ಹೆಸರು ಬಳಕೆಯಿಂದ ದೂರಸರಿಯಿತು.


** **



4.ಮಂಗಾರ (>"ಮಂಗಾರೂತ್")

ಮಂಗಾರ ಹೆಸರು ಕ್ರಿಸ್ತ ಪೂರ್ವದಲ್ಲಿ ಎಷ್ಟು ಹಳೆಯದೋ ಸ್ಪಷ್ಟ ಮಾಹಿತಿ ಇಲ್ಲ. ಮಂಗಾರ ಮತ್ತು ಅದರ ಬಳಿ ಇರುವ ಮಂಕಿ ಮುಂಡಾ ಆದಿವಾಸಿಗಳ ಬೀಡು ಆಗಿತ್ತು ಎಂದು ಅಲ್ಲಿ ಈಗಲೂ ಉಳಿದಿರುವ ಹೆಸರುಗಳೆ ತಿಳಿಸುತ್ತವೆ.

ಇಸವಿ 545 ಯಲ್ಲಿ (ಕ್ರಿಸ್ತ ಶಕ ಆರನೆ ಶತಮಾನ) ಕರಾವಳಿಗೆ ಬಂದ ಗ್ರೀಕ್ ಸನ್ಯಾಸಿ ಪ್ರವಾಸಿ ಕಾಸ್ಮೊಸ್ ಇಂಡಿಕೊಪ್ಲೂಸ್ಟೆಸ್ ಎಂಬಾತ ಮಂಗಾರ-ಪಾಂಡೇಶ್ವರದ ಬಳಿ ನದಿಮುಖದಲ್ಲಿ ಇದ್ದ ಅಂದಿನ ಪಾಂಡೆಲ ( ಪಾಂಡಿಗಳ ತಂಗುದಾಣ)ವನ್ನು ನೋಡಿ "ಮಂಗರೂತ್" ಎಂದು ಬರೆದಿದ್ದಾನೆ. ಅರಬರ ವರ್ತಕರು ನಂತರ ಬಳಕೆಗೆ ತಂದ ಪದ "ಬಂದರ" ರೂಡಿಗೆ ಬರುವ ಮೊದಲು "ಪಾಂಡಿ" ಗಳು ತಂಗುವ ಸ್ಥಳಕ್ಕೆ "ಪಾಂಡೆಲ" ಎಂಬ ಸ್ಥಳೀಯ ಹೆಸರು ಇತ್ತು. ಪಾಂಡಿ ಎಂದರೆ ಹಳೆಯ ಕಾಲದಲ್ಲಿ ಸರಕುಗಳನ್ನು ಸಾಗಿಸಲು ಬಳಸುತಿದ್ದ ದೋಣಿ. ಪಾಂಡಿಗಳನ್ನು ನಡೆಸುವವರಿಗೆ ಪಾಂಡ್ಯರು ಎನ್ನುವ ಉಪನಾಮ ಬಂದಿದೆ ಎಂಬ ವಾದವೂ ಇದೆ.

ಮಂಗಳಾದೇವಿ ಪ್ರದೇಶದ ಮೂಲ ಹೆಸರು ಮಂಗಾರ. ದೇವಸ್ಥಾನ ಸ್ಥಾಪನೆಯಾಗುವ ಮೊದಲು "ಮಂಗಾರ" ಎಂಬ ಹೆಸರು ಇತ್ತು. ಆ ಒಂದು ಭಾಗಕ್ಕೆ ಬೋಳಾರ ಎಂಬ ಹೆಸರೂ ಈಗಲೂ ಇದೆ.

ಮಂಗಾರ= ಮಂಗ/ಮಾಂಗ+ ಆರ (ಆರ=ಬಯಲು). ಮಾಂಗರು ಹಿಂದೆ ಇಲ್ಲಿ ನೆಲೆಸಿದ್ದ ಆಸ್ಟ್ರೋ-ಆಸಿಯಾಟಿಕ್ ಮುಂಡಾ ಪ್ರಭೇದದ ಒಂದು ಆದಿವಾಸಿ ಜನಾಂಗ. ಬಲಾಂಡಿ ತುಳು ಪಾಡ್ದನದಲ್ಲಿ "ಮಂಗಾರಿನ" ಅರಸನ ಪ್ರಸ್ತಾಪ ಇದೆ. ಮಂಗಾರದ ಬಳಿ "ಮಂಕಿ" ಎಂಬ ಆದಿವಾಸಿಗಳ ಗ್ರಾಮಪುಂಜವೂ ಇತ್ತು. ಮಂಕಿ ಎಂದರೆ ಮುಂಡಾ ಆದಿನಿವಾಸಿಗಳ ಹನ್ನೆರಡು ಜನವಸತಿಗಳ ಪುಂಜ. ಆ ಪರಿಸರದಲ್ಲಿ ಭೂತಾರಾಧನೆಯ ಕಳಗಳು ಇದ್ದವು, ಮುಂಡಾ ಆದಿವಾಸಿಗಳ ಜನವಸತಿ ಗ್ರಾಮಗಳೂ ಇದ್ದವು. ಈ ಎರಡೂ ಹೆಸರುಗಳ (ಮಂಗಾರ ಮತ್ತು ಮಂಕಿ) ಪಳಿಯುಳಿಕೆಗಳು ಮಂಗಳಾದೇವಿಯ ಪರಿಸರದಲ್ಲಿ ಈಗಲೂ ಇದೆ. ಮಂಗಳಾದೇವಿ ಪ್ರದೇಶದ ಪಡುವಣದ ಎಮ್ಮೆಕೆರೆಯ ರಸ್ತೆ ಬದಿಯಲ್ಲಿ ಇರುವ ಒಂದು ಭೂತಸ್ಥಾನದ ಪ್ರವೇಶದ ಬಳಿ "ಮಂಗಾರ ಕ್ಷೇತ್ರ" ಎಂಬ ವಿಳಾಸ ಈಗಲೂ ನೋಡಬಹುದು. ಹಾಗೆಯೆ ಮಂಗಲಾದೇವಿ ದೇವಸ್ಥಾನದ ಬಡಗ ದಿಕ್ಕಿನ ನಿಲ್ದಾಣಕ್ಕೆ ಈಗಲೂ ಮಂಕಿ ಸ್ಟಾಂಡ್ (stand ) ಎಂಬ ಹೆಸರಿದೆ. ಈಗ ಅಲ್ಲಿರುವ ರಾಮಕೃಷ್ಣ ಆಶ್ರಮದ ಅಂಗಣದ ಒಳಗೆ ಸ್ವಾತಂತ್ರ ಪೂರ್ವದಲ್ಲಿ ಬ್ರಿಟಿಷ್ ಅಧಿಕಾರಿಗಳ ನಿವಾಸದ ಬಂಗಲೆ ಇತ್ತು. ಮಂಕಿ stand ಆಗ ಬ್ರಿಟಿಷರ ಕುದುರೆ ಕಟ್ಟುವ ಸ್ಥಳ ಮತ್ತು ಜಟಕಾಗಾಡಿ ನಿಲ್ದಾಣ ( stand ) ಆಗಿತ್ತು ಎನ್ನಲಾಗಿದೆ.

(ಈಗ ಮಂಕಿ stand ಹೆಸರನಲ್ಲಿ ಮಾತ್ರಾ ಉಳಿದಿವೆ. ಹೆಸರು ಕೇಳಿದ ಹೊಸ ಪೀಳಿಗೆಯವರು monkey stand ಆಗಿದ್ದಿರಬಹುದೇ ಎಂದು ಗೊಂದಲಪಡುವಂತಿದೆ :).



**

4.1 ಮಂಗಾರಿನಿಂದ ಮಂಗಳ

ಮಂಗಾರ > ಮಂಗಳ: ಈ ಹೆಸರು ಪರಿವರ್ತನೆಯ ನಿಖರವಾದ ಕಾಲಘಟ್ಟ ತಿಳಿಯಲಾಗದೆ ಮಾಹಿತಿ ಅಸ್ಪಷ್ಟ ಹಾಗೂ ಗೊಂದಲಮಯವಾಗಿದೆ.

ಭಗವತಿ ಆರಾಧನೆ ಬುದ್ಧ ಧರ್ಮದಿಂದ ಪ್ರೇರೇಪಿತವ ರೂಢಿ. ತುಳುನಾಡಿನಲ್ಲಿ ಬೌಧ ಧರ್ಮದ ಅಡಿಯಲ್ಲಿ ಭಗವತಿ ಆರಾಧನೆ ಬಲವಾಗಿದ್ದಾಗ ಹಿಂದೂ ಧರ್ಮದ ಪುನರುಜ್ಜೀವನದ ಅಂಗವಾಗಿ ಕೇರಳದಿಂದ ಹೊರಟು ಅಂದಿನ ಅರಸುಗಳನ್ನು ಒಪ್ಪಿಸಿ ಭಗವತಿ ಕ್ಷೇತ್ರಗಳನ್ನು ಶಾಕ್ತ ಪಂಥದ ದುರ್ಗಾದೇವಿ ಕ್ಷೇತ್ರಗಳಾಗಿ ಪರಿವರ್ತಿಸಿದವರು ಶಂಕಾರಾಚಾರ್ಯರು. ಮಂಗಳಾದೇವಿ, ಬಪ್ಪನಾಡು, ಪೊಳಲಿ, ಕೊಲ್ಲೂರು ಇತ್ಯಾದಿ ಸ್ಥಳಗಳು ದುರ್ಗಾದೇವಿಯ ನೆಲೆಗಳಾಗಿ ಸ್ಥಾಪನೆಯಾಗಲು ಅವರು ಕಾರಣಕರ್ತರು ಎನ್ನಲಾಗಿದೆ. ಬಹುಶಃ ಶಂಕಾರಾಚಾರ್ಯರು (ಅಂದಾಜು .ಸಾ.ಶಕ: ೭೫೦-೭೮೨) ಮಂಗಳಾದೇವಿಯ ಸ್ಥಾಪನೆಯ ಸಂದರ್ಭದಲ್ಲಿ ಹಳೆಯ "ಮಂಗಾರ" ಹೆಸರಿನ ಪದವನ್ನು ಮಂಗಳವನ್ನಾಗಿ ಪರಿವರ್ತಿಸಿದಂತೆ ತೋರುತ್ತದೆ. ಮಂಗಳಾದೇವಿ ದೇಗುಲವನ್ನು ಅಂದಾಜು ಕ್ರಿಶ 775 ರಲ್ಲಿ ಶಂಕರಾಚಾರ್ಯರು (ಜೀವನ ಸು. ಕ್ರಿಶ 750-782) ಸ್ಥಾಪಿಸಿರ ಬಹುದೇ? ಐತಿಹ್ಯಗಳ ಪ್ರಕಾರ ಮತ್ಸೇಂದ್ರನಾಥರ ಕಾಲಾವಧಿಯಲ್ಲಿ

ಹಾಗಾಗಿ ಮಂಗಾರದ ಬಯಲಿನ ಹೆಸರು ಕ್ರಮೇಣ "ಮಂಗಳ"ವಾಗಿ ನಂತರ "ಮಂಗಳಾಪುರ" ಎಂದಾಯಿತು. ಶಾಸನಗಳಲ್ಲಿ ಮಂಗಲಾಪುರ ರೂಪವೂ ಇದೆ. ಶಾಸನಗಳ ಕಾಲನಿರ್ಣಯದ ಸಂಭಾವ್ಯ ದೋಷಗಳ ಕಾರಣ ಇತಿಹಾಸದ ತಾರ್ಕಿಕ ಪುನರಚನೆ ಕೂಡಾ ಗೋಜಲಾಗಿದೆ.

ಮಂಗಲಾಪುರ ಶಾಸನಗಳಲ್ಲಿ :

ಸು. 680 - ಮಂಗಲಪುರ" - ಒಂದನೆ ಆಳುಪರಸನ ಶಾಸನ. ಗುಂಟೂರು,ಆಂಧ್ರ ಪ್ರದೇಶ .

ಸು. 686. - "ಮಂಗಲಪುರ " -ಚಾಲುಕ್ಯ ವಿನಯಾದಿತ್ಯ. ತಾಮ್ರಶಾಸನ. ಆಳುಪ 1 ಗುಣಸಾಗರನ ಮಗ ಚಿತ್ರವಾಹನನು "ಮಂಗಲಪುರ"ವನ್ನು ವಶಪಡಿಸಿಕೊಂಡನು.

ಸು. 725 - " ಮಂಗಲಪುರ" :ಪಾಂಡ್ಯ ದೊರೆ ನೆಡುಂಜಡೆಯನ್ (756-815) ಅವರ ವೇಳ್ವಿಕುಡಿ ಶಾಸನ. ಅವರಜ್ಜ ಕೋಚ್ಚಡೈಯನ್ (700-730) "ಮಂಗಲಪುರ"ದ ಮೇಲೆ ಧಾಳಿ ಮಾಡಿದನು.

ಸು.780 - " ಮಂಗಲಪುರ "- ಉದ್ಯಾವರ ಶಾಸನದಲ್ಲಿ. ಎರಡನೆಯ ಚಿತ್ರವಾಹನನು (765-800). ತಾನು ಕೊಡಾಲವನ್ನು ಆಳುತಿದ್ದಾಗ ಕಿರಿಯ ನಾಗದತ್ತ ಎಂಬವನಿಗೆ ಪಾಂಡ್ಯನಾಯಕನೆಂಬ ಬಿರುದು ನೀಡಿ ಮಂಗಲಪುರದಲ್ಲಿ ಪಟ್ಟ ಕಟ್ಟಿದನೆಂಬ ವಾರ್ತೆ ಇದೆ. ಆಗ ಮಂಗಲಾಪುರವು ಕೊಡಾಲದ ಆಡಳಿತಕ್ಕೆ ಒಳಪಟ್ಟ ಪ್ರದೇಶ ಆಗಿತ್ತು ಎಂಬ ಅರ್ಥ ಬರುತ್ತದೆ.



**

4.2. ಮಂಗಳಾಪುರ-ಮಂಗಳೂರು

ಮಂಗಲೂ(ಳೂ)ರು: ಶಾಸನ + ವರದಿಗಳಲ್ಲಿ

ಕ್ರಿಸ್ತ ಶಕ ಎಂಟನೆಯ ಶತಮಾನದಲ್ಲಿ "ಕೊಡಾಲ" ಮತ್ತು "ಮಂಗಲಾಪುರ" ಎರಡು ಹೆಸರುಗಳು ಕ್ರಮವಾಗಿ ಮಂಗಳೂರು ನಗರದ ನಡು ಮತ್ತು ತೆಂಕಣ ಬಾಗಗಳನ್ನು ನಿರ್ದೇಶಿಸುತಿದ್ದಂತಿದೆ. ಹನ್ನೆರಡನೆಯ ಶತಮಾನದ ಕೊನೆಯಲ್ಲಿ ಮಂಗಳೂರು ಹೆಸರು ಬಳಕೆಗೆ ಬಂದಂತಿದೆ.ಮಂಗಳೂರು

ವಿಜಯನಗರ ಅರಸರು (೧೩..) ಮಂಗಲಾಪುರ ಮತ್ತು ಕೊಡಿಯಾಲ (ಕೊಡಾಲ/ಕುಡ್ಲ) ಎರಡು ಪ್ರದೇಶಗಳನ್ನು ಸೇರಿಸಿ "ಮಂಗಳೂರು" ರಾಜ್ಯದ ಪರಿಕಲ್ಪನೆ ಜಾರಿಗೆ ತಂದಂತೆ ಕಂಡುಬರುತ್ತದೆ.

ಸು. 1200 "ಮಂಗಲೂರು" .ಒಂದನೆ ಕುಲಶೇಖರನ ಶಾಸನ (ಆಳುಪ). ಕುಲಶೇಖರದಲ್ಲಿ "ಮಂಗಲೂರ ಹಿರಿಯರ ಮನೆಯ ಭುವನಾಶ್ರಯದ ಮುಂದಣ ಮೊಕಸಾಲೆಯಲು.." ಹಾಗೂ "ಮಂಗಲೂರ ಗದ್ಯಾಣ". ಪ್ರಸ್ತಾಪಿಸಿದೆ.

ಸು.1442 "ಮಂಗಲೊರ್" Mangalor ಅಬ್ದುರ್ ರಜಾಕ್ .ಮಂಗಲೊರ್. ವಿಜಯನಗರದ ರಾಜ್ಯಪಾಲರ ಆಳ್ವಿಕೆಯ ಕಾಲ

ಸು.1514 "ಮಂಗಲೊರ್: Mangalor. ದುವಾರ್ಟೆ ಬಾರ್ಬೊಸಾ.

ಸು.1520 "ಮಂಗಲೊರ್" ಡೊಮಿಂಗೊ ಪಾಯೆಸ್ (Domingo Paes).

ಸು.1623 "ಮಂಗಲೊರ್" Mangalor ಪೋರ್ಚುಗೀಸ್ ಪ್ರವಾಸಿ. ಪೀಟ್ರೊ ದಲ್ಲಾ ವಲ್ಲೆ (Pietro Dalla Valle). ಬೋಳೂರು ಮತ್ತು ಬೋಳಾರ ಎಂಬ ಈ ಎರಡು ನದಿಗಳ ನಡುವೆ ಮಂಗಲೊರ್ ಇದೆ ಎಂದಿದ್ದಾನೆ.

ಸು.1637 ಮಂಗಲೊರ್. (ನ್ಯೂ ಈಸ್ಟ್ ಇಂಡಿಯಾ ಕಂಪೆನಿ. ಮಂಗಳೂರಿನಲ್ಲಿ ಆರಂಭ). ಟಿ.ಡಬ್ಲೂ ವೆನ್. ೧೯೪೫ ರಲ್ಲಿ ಬರೆದ ವರದಿ.

ಸು.1727. "ಮಂಗುಲೊರ್" Mangulore .ಹ್ಯಾಮಿಲ್ಟನ್ - ಪ್ರವಾಸಿಯ ಕಂಡಂತೆ ಗದ್ದೆಗಳಲ್ಲಿ ಎರಡು ಬೆಳೆ, ಮತ್ತು ಎತ್ತರ ಪ್ರದೇಶದಿಂದ ಬರುವ ಕಾಳುಮೆಣಸು, ಅಡಿಕೆ ,ಗಂಧ, ಕಬ್ಬಿಣ ಮತ್ತು ಮಿಲಾವು (steel) ಬಂದರದಲ್ಲಿ ಉತ್ತಮ ವ್ಯಾಪಾರ ನಡೆಯುತಿತ್ತು

ಮಂಗಳೂರು.

ವಿಜಯನಗರ ಅರಸರ ಕಾಲದಲ್ಲಿ ಕೊಡಿಯಾಲ ಬಂದರ ಮಂಗಳೂರು ಬಂದರವೆಂದು ಪ್ರಖ್ಯಾತಿಯಾಗಿತ್ತು. ಮಂಗಳಾದೇವಿ ದೇವಸ್ಥಾನದ ಸನಿಹ (ಬೋಳಾರ) ಹಿಂದೆ ವಿಜಯನಗರದ ಕೋಟೆ ಇತ್ತು, ಕೋಟೆ ಒಳಗೆ ವಿಜಯನಗರದ ದಂಡು ಬೋಳಾರದಲ್ಲಿ ನೆಲೆಸಿತ್ತು. ವಿಜಯದಶಮಿಯ ದಿನ ದಂಡಿನ ಕವಾಯತು ನಡೆಯುತಿದ್ದು ಮಂಗಳಾದೇವಿ ದೇವಸ್ಥಾನದ ರಥೋತ್ಸವವನ್ನು "ಬೋಳಾರ ಫೌಜು" ಎಂದು ಕರೆಯುವ ರೂಡಿ ಇತ್ತು.


**------------**

ಅಡಿಟಿಪ್ಪಣಿಗಳು

೧.ಈಗಿರುವ ಕೆಲವು ಮುಂಡಾ ಭಾಷೆಗಳಲ್ಲಿ "ಕುಡು" ಪದಕ್ಕೆ ಸಂವಾದಿ ಪದಗಳು ಉಳಿದಿವೆ. ಇನ್ನು ಹಲವು ಬಾಷೆಗಳಲ್ಲಿ ಕುಲತ, ಕುಲ್ತಿ,ಕೊರೆ ಇತ್ಯಾದಿ ರೂಪವಿದೆ. ಕನ್ನಡದ "ಹುರುಳಿ" ಪದದ ಮೂಲಾರ್ಥವೂ ಅದೇ ಆಗಿದೆ. ಉರುಳಿ > ಹುರುಳಿ= ಉರು+ಳಿ. ಉರು/ಊರು=ನಾಡು; 'ಳಿ=ಬೆಳೆ. ಪ್ರಾಕೃತ ಭಾಷೆಗಳಲ್ಲಿ ಕುಲಿತ್ ರೂಪ ಇದೆ

ಉದ್ದು ( < ಉರ್ದು). (ತುಳು/ಹಳೆಗನ್ನಡದಲ್ಲಿ: ಉರ್ದು). ಉದ್ದು ಕೂಡಾ ದಕ್ಷಿಣ ಭಾರತದ ಆರಂಭದ ಬೆಳೆಗಳಲ್ಲಿ ಒಂದು.ಉರ್+ದು= ನೆಲದ ಬೆಳೆ. ಉದ್ದಿನ ತಿನಸುಗಳು ಬಹಳ ಪ್ರಾಚೀನ ಕಾಲದಲ್ಲಿಯೇ ನಮ್ಮಲ್ಲಿ ಆರಂಭವಾಗಿರಬೇಕು.

೨.ಅಕ್ಕಿ ಗಂಗಾಬಯಲಿನಿಂದ ದಕ್ಷಿಣ ಭಾರತಕ್ಕೆ ಬೆಳೆಯಾಗಿ ಬಂದದ್ದು ಸಾಕಷ್ಟು ತಡವಾಗಿ ಎಂಬ ವಾದವಿದೆ, ಅಂದರೆ ಸುಮಾರು ಕ್ರಿಸ್ತಪೂರ್ವ 1800 ರ ನಂತರ ಎನ್ನಲಾಗಿದೆ!. ಅಕ್ಕಿ ಬರುವ ಮುನ್ನ ನಮ್ಮ ಪೂರ್ವಜರು ಇತರ ಕಾಳುಕಡ್ಡಿಗಳನ್ನು ತಿಂದು ಬದುಕುತಿದ್ದರು. ಕಾಡಿನ ಹಣ್ಣುಗಳು, ಗೆಡ್ಡೆ ಗೆಣಸು ತಿಂದು ಬದುಕುತಿದ್ದರು,

೩.ಮಂಗಳೂರಿಗೆ ಅಂದು ಬರುತಿದ್ದ ವಿದೇಶೀ ವ್ಯಾಪಾರಿ- ಪ್ರವಾಸಿಗಳಿಗೆ ಬಂದರದ ಬಳಿ ಅಂದು ಕಾಣಿಸುತಿದ್ದ ಎರಡು ನದಿಗಳು- ಬೋಳಾರ ಮತ್ತು ಬೋಳೂರು. ಈ ನದಿಗಳ ಹೆಸರು (ಹಿಂದಿನ ಕಾಲದ ಗುರುಪುರ ಮತ್ತು ನೇತ್ರಾವತಿ)- ಈ ನದಿಗಳು ಆಗ ಕೊಡಿಯಾಲ ಬಂದರದ ಬಳಿ- ಕುದ್ರೋಳಿ ಮತ್ತು ಬೊಕ್ಕಪಟ್ಟಣಗಳ ನಡುವೆ- ಕಡಲು ಸೇರುತಿದ್ದವು..ಬೋಳಾರ ನದಿ: (ಅಂದಿನ ನೇತ್ರಾವತಿ ನದಿ): ಅಳುಪೆ-ಕಂಕನಾಡಿ-ಬೆಂದೂರು-ಫಳ್ನೀರು-ಅತ್ತಾವರ-ಪಾಂಡೇಶ್ವರ ಮಾರ್ಗದಲ್ಲಿ ಹರಿದು ಬೋಳಾರ ಪಾಂಡೇಶ್ವರದ ಪಡುವಣದಲ್ಲಿ ಕಡಲ ಕೂಡುತಿತ್ತು. ಕಡಲ ಕೂಡುವಲ್ಲಿ ಅಂದಾಜು ಕ್ರಿಸ್ತ ಶಕ ಒಂದನೆಯ ಶತಮಾನದಿಂದ ಏಳು-ಎಂಟನೆಯ ಶತಮಾನದ ವರೆಗೂ ಮಂಗಾರಿನ ( ಮಂಗಳೂರು ನಗರದ ದಕ್ಷಿಣ ಭಾಗ) ಅಳಿವೆ ಬಾಗಿಲಲ್ಲಿ ಪಾಂಡೆಲ(ಬಂದರ) ಅಸ್ತಿತ್ವದಲ್ಲಿ ಇತ್ತು. ಬೋಳೂರು ನದಿ: (ಅಂದಿನ ಗುರುಪುರ ನದಿ): ತಿರುವೈಲು-ಕುಡುಪು-ಪಚನಾಡಿ-ಬಿಜೈ-ಕೊಡಿಯಾಲಬೈಲು ಮಾರ್ಗವಾಗಿ ಬೋಳೂರು ಕುದ್ರೋಳಿ ಬೊಕ್ಕ ಪಟ್ಟಣ ನಡುವೆ ಕಡಲ ಕೂಡುತಿತ್ತು. ನದಿ ಕಡಲ ಕೂಡುವಲ್ಲಿ ಇದ್ದ ಕೊಡಿಯಾಲ ಬಂದರು ಸುಮಾರು ಕ್ರಿಸ್ತ ಶಕ ಎಂಟನೆಯ ಶತಮಾನದಿಂದ ಹತ್ತೊಂಬತ್ತನೆಯ ಶತಮಾನದ ಕೊನೆಯವರೆಗೂ ಅಸ್ತಿತ್ವದಲ್ಲಿತ್ತು.

೪. ಮಾಯಕಳ: ಬ್ಯಾರಿ ಅಂದರೆ ಬ್ಯಾರ ಮಾಡುವವರು. ಬ್ಯಾರ (ತುಳು) =< ವ್ಯಾಪಾರ< ವ್ಯವಹಾರ. ಬ್ಯಾರಿ ಭಾಷೆ ತುಳು ಮತ್ತು ಮಲಯಾಳಂ ಆಡುಭಾಷೆಗಳ ಸಮ್ಮಿಲನದಿಂದ ವಿಕಾಸಹೊಂದಿದೆ

೫.ಮಂಗಲಾಪುರ: ಪಾಂಡ್ಯರು ಮಂಗಳಾಪುರದ ಯುದ್ದದಲ್ಲಿ ಚಾಲುಕ್ಯರನ್ನು ಸೋಲಿಸಿದರೆಂದು ಜಾತಿಲ ಪರಾಂತಕನ (ಕ್ರಿಶ 765-815) ವೆಳ್ವಿಕುಡಿ ತಾಮ್ರಪಟದಲ್ಲಿ ಹೇಳಿದೆ. ಇದರಲ್ಲಿ ಹೇಳಿದ ಮಂಗಳಾಪುರ ಆಳುಪರದೇ ಅಥವಾ ತಮಿಳುನಾಡಿನ ರಾಮನಾಥಪುರ ಜಿಲ್ಲೆಯ "ಮಂಗಳಂ" ಊರು ಇರಬಹುದೇ ಎಂಬ ಜಿಜ್ಞಾಸೆಯೂ ಇದೆ.

೬. ವಾಸ್ಕೊಡಗಾಮ ಪೋರ್ಚುಗೀಸರ ವರ್ತಕ.೧೪೯೮ ರಲ್ಲಿ ಕೇರಳ ಮಂಗಳೂರು ಸೈಂಟ್ ಮೆರಿ ದ್ವೀಪಗಳ ಮೊದಲ ಬೇಟಿ.

೭.ಕುದ್ರೋಳಿಯಲ್ಲಿ ಗೋಕರ್ಣನಾಥ ದೇವಸ್ಥಾನ ಸ್ಥಾಪನೆಯಾಗಿದ್ದು 1912ರಲ್ಲಿ.

೮. ಪಣಂಬೂರಿನಲ್ಲಿ ಭೂಮಿ ಕೊರೆದು ಕೃತಕವಾಗಿ ನಿರ್ಮಿಸಿದ ನವ ಮಂಗಳೂರು ಬಂದರದ ರಚನೆ ಅಗಿದ್ದು ೧೯೭೦ರ ನಂತರ.

**

೯ ಮಂಗಳೂರಿನ ಇತಿಹಾಸದ ಇತರ ಮೈಲಿಗಲ್ಲುಗಳು:

ಬೋಳಾರದ ಹಳೆಕೋಟೆಯಲ್ಲಿ ಪೋರ್ಚುಗೀಸರ ಕೋಟೆ ಇತ್ತೆಂದು ಹೇಳಲಾಗಿದೆ. (ಅದು ಟಿಪ್ಪುವಿನ ಕಾಲದಲ್ಲಿ ನಾಶವಾಗಿದೆ)

1565 ವಿಜಯನಗರ ಸಾಮ್ರಾಜ್ಯದ ಪತನ ನಂತರ, ಮಂಗಳೂರಲ್ಲಿ ವಿಜಯನಗರದ ಆಳ್ವಿಕೆ ಕೊನೆಗೊಂಡಿತು.

1568 ಮಂಗಳೂರು ಪೊಯ್ಯೆ (ಪಾಂಡೇಶ್ವರ ಪಶ್ಚಿಮ ಭಾಗ) ಎಂಬಲ್ಲಿ ಪೋರ್ಚುಗೀಸರಿಂದ ರೊಸಾರಿಯೊ ಇಗರ್ಜಿಯ (ಪೋರ್ಚುಗೀಸ್ ಫ್ಯಾಕ್ಟರಿ ಚರ್ಚ್) ಸ್ಥಾಪನೆ

1680 ಮಂಗಳೂರಿನ ಮೊದಲ ಚರ್ಚು - ಕೆಳದಿ ರಾಣಿ ಚೆನ್ನಮ್ಮ ಉಂಬಳಿ ನೀಡಿದ ಭೂಮಿಯಲ್ಲಿ - ಮಿಲಾಗ್ರೀಸ್ ನಿರ್ಮಾಣ

1763 ಹೈದರ್ ಆಲಿ ಮಂಗಳೂರನ್ನು ವಶಪಡಿಸಿಕೊಂಡನು. ಕೊಡಿಯಾಲ ಬಂದರು ಅವರ ಬಾಯಿಯಲ್ಲಿ "ಗೊರಿಯಾಲ ಬಂದರು" ಎಂದು ಅನಿಸಿಕೊಂಡಿತು. ಬಾವುಟಗುಡ್ಡದ ಮೇಲಿರುವ ಹಳೆಯ ದೀಪ ಸ್ತಂಭವನ್ನು ಹೈದರಾಲಿ ಕಟ್ಟಿಸಿದನೆಂದು ತಿಳಿಯಲಾಗಿದೆ.

1768 ಬ್ರಿಟಿಷರು ಹೈದರಾಲಿಯನ್ನು ಸೋಲಿಸಿ ಮಂಗಳೂರನ್ನು ವಶಪಡಿಸಿಕೊಂಡರು

1784 ಮಂಗಳೂರನ್ನು ವಶಪಡಿಸಿಕೊಂಡ ಟಿಪ್ಪು ಸುಲ್ತಾನ ಕೊಡಿಯಾಲ ಬಂದರಿನ ಮೂಲಕ ಪ್ರವೇಶಿಸುವ ಶತ್ರುಗಳ ನಿರ್ನಾಮ ಮಾಡಲು ಬೋಳೂರು ಗ್ರಾಮದ ಗುರುಪುರ ನದಿಯ ಅಳಿವೆ ದಂಡೆಯಲ್ಲಿ ಒಂದು ಬತ್ತೇರಿ (ಮದ್ದುಗುಂಡುಗಳ ಸಂಗ್ರಹಾಲಯ-"ಸುಲ್ತಾನ ಬತ್ತೇರಿ") ನಿರ್ಮಾಣ ಮಾಡಿದನು.

1799 (ಶ್ರೀರಂಗಪಟ್ಟಣದಲ್ಲಿ ಟಿಪ್ಪುಸುಲ್ತಾನನ ಮರಣ)

1800 ಫ್ರಾನ್ಸಿಸ್ ಬುಕಾನೆನ್.(1762-1829) (ಲಂಡನ್, ಇಂಗ್ಲೇಂಡ್ ಮೂಲದ ಪ್ರವಾಸಿ). "ಕೊಡಿಯಾಲ್ ಬಂದರಿ"ನ ವರ್ಣನೆ ಇದೆ. ಇಕ್ಕೇರಿ ನಾಯಕರ ಅರಸರ ಆಳ್ವಿಕೆಯಲ್ಲಿ ಎತ್ತರವಾದ ಸ್ಥಳದಲ್ಲಿ ಕೋಟೆ ಇತ್ತು.

1834 ಮಂಗಳೂರಿಗೆ (ಕೇರಳದಿಂದ) ಬಾಸೆಲ್ ಮಿಶನರಿಗಳ ಆಗಮನ

1843 ಕನ್ನಡದ ಮೊದಲ ಪತ್ರಿಕೆ "ಮಂಗಳೂರು ಸಮಾಚಾರ " - ಬಾಸೆಲ್ ಮಿಶನರಿ ಸಂಸ್ಥೆಯಿಂದ ಬಿಡುಗಡೆ.

1862 ಶಾಂತಿ ಕೆತೆಡ್ರಲ್ ಬಲ್ಮಠ ನಿರ್ಮಾಣ

1864 ಬಾಸೆಲ್ ಮಿಶನ್ ಸಂಸ್ಥೆಯಿಂದ ಮೊದಲ ಮಂಗಳೂರು ಹಂಚಿನ ಕಾರ್ಖಾನೆ. ಸ್ಥಾಪನೆ.

1894 ಬಾಸೆಲ್ ಮಿಶನ್ ಸಂಸ್ಥೆಯ ವತಿಯಿಂದ ಎಫ್ ಕಿಟ್ಟೆಲರ ಕನ್ನಡ-ಇಂಗ್ಲಿ‍ಷ್ ಡಿಕ್ಷನರಿ ಪ್ರಕಟನೆ.

1912 ಗುರು ನಾರಾಯಣರ ಆಧಿಪತ್ಯದಲ್ಲಿ ಮಂಗಳೂರು ಕುದ್ರೋಳಿಯಲ್ಲಿ ಗೋಕರ್ಣನಾಥ ದೇವಸ್ಥಾನದ ಸ್ಥಾಪನೆ.

*

**--------------**

ಆಕರಗಳು:

ಮಂಜೇಶ್ವರ ಗಣಪತಿರಾವ್ ಐಗಳ್ (೧೯೨೩ ) ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಚೀನ ಇತಿಹಾಸ. (೨೦೦೪ ರ ಉಡುಪಿ ಆವೃತ್ತಿ)

ಗೋವಿಂದರಾಯ ಪ್ರಭು + ನಿತ್ಯಾನಂದ ಪೈ (2006): The Alupas: COinage and History.(ದ ಅಲೂಪಾಸ್: ಕೋಯಿನೇಜ್ ಅಂಡ್ ಹಿಸ್ಟರಿ)

ರಮಾನಾಥ ಕೋಟೆಕಾರ್. (೨೦೧೨).ತುಳುನಾಡಿನ ಬಿಲ್ಲವರು, - ಒಂದು ಅಧ್ಯಯನ. 2012. . ತುಳುನಾಡಿನ ಬಿಲ್ಲವರು. ("ಬಲಾಂಡಿ ಪಾಡ್ದನ"ದ ಉಲ್ಲೇಖವಿದೆ.)

ವಿವೇಕ ರೈ, ಬಿ. ಮತ್ತಿತರರು (ಸಂ).(೨೦೧೬). ಮಂಗಳೂರು ದರ್ಶನ. ಸಂಪುಟ ೧. .(ಮಂಗಳೂರು ನಗಾರಭಿವೃದ್ದಿ ಪ್ರಾಧಿಕಾರದ ಪ್ರಕಟನೆ).

Bipin Shah (August 2016) Barbosa Duarte Journey to Malabar Coast Part-2.covering Maharashtra, Karnataka, Kerala

Henry Yule + AC Burnell (1903 ) Hobson Jobson (Glossary of Colloquial Anglo-Indian words..). New Edition edited by: William Crooke,2012,

**---------------**

Comments

Popular posts from this blog

೩. ಜೋಗುಳ- ಒಂದು ಶಬ್ಧ ಮಿಮಾಂಸೆ

15. ದಕ್ಕಣ ಪೀಠಭೂಮಿ ಮತ್ತು ದಕ್ಕಣ ಟ್ರಾಪ್ಸ್( ಲಾವಾಭೂಮಿ)

13.ಮೂಲದ್ರಾವಿಡ ಭಾಷೆ -ಪ್ರೊಟೊ ದ್ರಾವಿಡಿಯನ್.