9. ಅರ್ಕಾವೊತ್ತು, ಅರ್ಕಾರ ಮತ್ತು ಅನ್ಕಾರ

= ಅರ್ಕಾರದ ಸ್ಥಾನ ಗೊಂದಲ

ಗೊಂದಲ ಮಾನವ ಸಹಜ ಗುಣ. ಆದರೆ ಜವಾಬ್ದಾರಿ ನಿರ್ವಹಿಸುವ ಹಂತದಲ್ಲಿ ಗೊಂದಲಗೊಂಡರೆ ಏನಾಗ ಬಹುದು- ಎನ್ನುವುದಕ್ಕೆ ಕನ್ನಡದ ವರ್ಣಮಾಲೆಯಲ್ಲಿ ಅರ್ಕಾರದ ಸ್ಥಾನ ಗೊಂದಲವೇ ಸಾಕ್ಷಿ.



= ಚಿತ್ರ೧ : ಅರ್ಕಾರದ ಸ್ಥಾನ ಗೊಂದಲ. ನಿರ್-ದೇಶಕ >ನಿರ್ದೇಶಕ = ಆಶೀರ್-ವಾದ >ಆಶೀರ್ವಾದ = "ರ್" ಹಾಲಿ ಇರುವ ಮತ್ತು ಇರಬೇಕಾಗಿದ್ದ (ಬಾಣ) ಎಡೆಗಳು


= ಅರ್ಕಾರ (ಅರ್-ಕಾರ) ಅಥವಾ ಅರ್ಕಾವೊತ್ತು:

ಮೊದಲನೆ ಗೊಂದಲ ಆಗಿದ್ದು ಹೆಸರಿಡುವಾಗ. ಅರ್ಕಾವೊತ್ತು ಅಂದರೆ ಒತ್ತು ಅಕ್ಷರಗಳಲ್ಲಿ ಒಂದು ಎಂದು ನಾವು ತಿಳಿದುಕೊಳ್ಳಬೇಕಾಗಿದೆ. ಆದರೆ ಒತ್ತಕ್ಷರಗಳ ಪಟ್ಟಿಯಲ್ಲಿ ಅರ್ಕಾವೊತ್ತು ಕಾಣೆಯಾಗಿದೆ!



=ಚಿತ್ರ ೨ ಕನ್ನಡದ ಒತ್ತಕ್ಷರಗಳ ಚಿತ್ರ =


= ಅರ್ಕಾವೊತ್ತು: ಪದ ಹೇಗೆ ಹುಟ್ಟಿತು?

ಅರೆ+ರ್+ಕಾರ+ಒತ್ತು > ಅರ್ಕಾರವೊತ್ತು > ಅರ್ಕಾವೊತ್ತು.

ಒತ್ತಕ್ಷರಗಳ ಪಟ್ಟಿಯಲ್ಲಿ ಬಾರದ/ಕಾಣಿಸಿಕೊಳ್ಳದ ನಾಚಿಕೆ ಅರ್ಕಾವೊತ್ತಿಗೆ ಏಕೆ?

ಏಕೆಂದರೆ: ರಕಾರದ ಒತ್ತಕ್ಷರವಾದ - ರ್ರ- ಈ ಪಟ್ಟಿಯಲ್ಲಿ ಮೊದಲೇ ಬಂದು ಕೂತಿದೆ.

ಹಾಗಿದ್ದರೆ, ಈ ಅರ್ಕಾವೊತ್ತು ಎಲ್ಲಿ ಹೋಗಬೇಕು?

ಹೋಹೋ! ನೀನು ಅರ್ಕಾವೊತ್ತಲ್ಲ, ಅರ್ಕಾರ = ಅರೆ-ರ್/ರಕಾರ ! ನಿನ್ನ ಸರಿಯಾದ ಜಾಗ ಯೋಗವಾಹಕಗಳ ನಡುವೆ: ಅಂ- - ಅಃ ಅನ್ನುವ ಸ್ವರಗಳ ನಡುವೆ ಅರ್ಕಾರವಾಗಿ ಕೂತುಕೊ!

ಬೇಕಾದರೆ, ಆ ನಿನ್ನ ಆ ಅನ್ಕಾರ ವನ್ನು ಅಲ್ಲಿಗೆ ಕರೆದುಕೊಂಡು ಹೋಗು!

ಅದ್ಯಾರಪ್ಪ, ಅನ್ಕಾರ?

**

ಅರ್ಕಾವೊತ್ತನ್ನು ಕನ್ನಡ ಲಿಪಿಮಾಲೆಯಲ್ಲಿ ಮೊದಲು ಅಳವಡಿಸಿದ ಅನಾಮಧೇಯ ಪಂಡಿತನಿಗೆ/ರಿಗೆ ವಿನ್ಯಾಸದ ಹಂತದಲ್ಲಿ ಆಗಿರಬಹುದಾದ ಗೊಂದಲವನ್ನು ನಾವು ಈ ಮೇಲಿನ ವಿಡಂಬನೆಯಂತೆ ಊಹಿಸಿಕೊಳ್ಳಬಹುದು.

ಆದರೆ, ಅರ್ಕಾವೊತ್ತನ್ನು ಅರ್ಕಾರವೆಂದು ಪರಿಗಣಿಸಿ ಯೋಹವಾಹಕಗಳ ನಡುವೆ ಕೂರಿಸಲು ಅವನಿಂದ/ಅವರಿಂದ ಯಾಕೋ ಸಾಧ್ಯವಾಗಲಿಲ್ಲ!

ಬದಲಾಗಿ ಅರ್ಕಾವೊತ್ತು ಎಂದು ಕರೆದ ತಪ್ಪಿಗಾಗಿ ಇತರ ಒತ್ತಕ್ಷರಗಳಂತೆ ವ್ಯಂಜನದ ನಂತರ ಸಾಲಿನಲ್ಲಿ ಬರೆಯುವ ಪದ್ದತಿಗೆ ಶರಣಾದರು! ಇತರ ಒತ್ತಕ್ಷರಗಳಂತೆ ವ್ಯಂಜನದ ಅಡಿಯಲ್ಲಿ ಕೂರಿಸುವ ಪ್ರಯತ್ನ ಮಾಡಲಿಲ್ಲ.

**

=ಅನ್ಕಾರ

ಅರ್ಕಾವೊತ್ತಿನಲ್ಲಿ ಪದದ ನಡುವೆ ಬರುವ -ಕಾ- ಪರದೇಶಿಯಲ್ಲ. ಕಕಾರ,ಗಕಾರ,ಪಕಾರ, ಮಕಾರ,ಯಕಾರ..... ಇತ್ಯಾದಿಯಂತೆ ಅದು ರಕಾರದ ಪಳಿಯುಳಿಕೆ. ಅದು "ಅರ್ಕಾರವೊತ್ತು" ಆಗಬೇಕಿತ್ತು ಬದಲಿಗೆ ಸರಳವಾಗಿ "ಅರ್ಕಾವೊತ್ತು" ಆಗಿದೆ.

ಒಂದು ವೇಳೆ ಅರ್ಕಾವೊತ್ತನ್ನು ಅರ್ಕಾರವೆಂದು (ಅರೆ-ರ=ರ್/ರಕಾರ) ಯೋಗವಾಹಕಗಳ ನಡುವೆ ತಂದು ಕೂರಿಸಿದ್ದರೆ ಪಟ್ಟಿ ಅಂ-ಅರ್-ಅಃ ಆಗಿರುತಿತ್ತು.

ಅನ್ಕಾರವೂ (ಅರೆ-ನ=ನ್/ನಕಾರ) ಕನ್ನಡದಲ್ಲಿ ಉಳಿದುಕೊಂಡಿದ್ದರೆ ಯೋಗವಾಹಕಗಳ ಪಟ್ಟಿ : ಅನ್-ಅಂ-ಅರ್-ಅಃ ಆಗುತಿತ್ತು!



=ಚಿತ್ರ ೩; ಅನ್-ಅಂ-ಅರ್-ಅಃ =

**

ಅರ್ಕಾರದ ವಿನ್ಯಾಸ ಸರಳವಾಗಿದೆ. ರ್ ಅಕ್ಷರವನ್ನು ಸರಳ ಮಾಡಿ ರ್ ಮಾಡಲಾಗಿದೆ. ಅದೇ ರೀತಿ ನ್ ಅಕ್ಷರವನ್ನು ಸರಳಿಸಿ ನ್ ರಚಿಸಲಾಗಿದೆ.



=ಚಿತ್ರ ೪: ರ್ ಮತ್ತು ನ್ ವಿನ್ಯಾಸ=



=ಚಿತ್ರ ೫. ಅರ್ ಮತ್ತು ಅನ್ ಸಂಜ್ಞೆಗಳು. "ಅನ್" ಈಗ ನಶಿಸಿಹೋಗಿದೆ.


ಅರ್ಕಾರ ಮತ್ತು ಅನ್ಕಾರಗಳ ಸ್ಥಾನ ಗೊಂದಲದಿಂದ ಕನ್ನಡ ಬರೆಯಲು ಎಳವೆಯಿಂದ ಕಲಿತವರಿಗೆ ತೊಂದರೆ ಏನಿಲ್ಲ.ಗಡಿಬಿಡಿಯಾದಾಗ ಆಶೀರ್ವಾದ ಅಥವಾ ನಿರ್ದೇಶಕರು ಮುಂತಾದ ಪದಗಳನ್ನು ಬರೆವಾಗ ರ್ ಆಚೀಚೆ ಆಗಿದ್ದರೆ ಮತ್ತೊಮ್ಮೆ ಓದಿನೋಡಿ ಸರಿಪಡಿಸಿಕೊಳ್ಳುವುದು ಹೆಚ್ಚಿನವರಿಗೆ ರೂಡಿಯಾಗಿರುತ್ತದೆ. ಆದರೆ ಕನ್ನಡ ಬರೆಯಲು ಹೊಸದಾಗಿ ಕಲಿಯುವವರಿಗೆ ಅನೇಕ ದಿನಗಳ ವರೆಗೆ, ಬರವಣಿಗೆ ರೂಡಿಯಾಗುವ ವರೆಗೆ ಅರ್ಕಾವೊತ್ತು ಹೆಸರಿನ ಒತ್ತಿಲ್ಲದ ಅರ್ಕಾರ ನೀಡುವ ಗೊಂದಲ ತಪ್ಪಿದ್ದಲ್ಲ!.

:)

Comments

Popular posts from this blog

೩. ಜೋಗುಳ- ಒಂದು ಶಬ್ಧ ಮಿಮಾಂಸೆ

15. ದಕ್ಕಣ ಪೀಠಭೂಮಿ ಮತ್ತು ದಕ್ಕಣ ಟ್ರಾಪ್ಸ್( ಲಾವಾಭೂಮಿ)

13.ಮೂಲದ್ರಾವಿಡ ಭಾಷೆ -ಪ್ರೊಟೊ ದ್ರಾವಿಡಿಯನ್.