8. ಆಳುಪರ ಇತಿಹಾಸ

 ಕನ್ನಡದಲ್ಲಿ ಮೊದಲನೆಯದು ಎನ್ನಲಾದ ಕದಂಬರ ಕಾಲದ ಹಲ್ಮಿಡಿಯ ಶಾಸನದಲ್ಲಿ ಅಳುಪ ಗಣದ ಹೆಸರಿದೆ. ಕದಂಬರೊಂದಿಗೆ ಸೇರಿಕೊಂಡ ಮೇಲೆ ಆಳುಪರು ಪ್ರಸಿದ್ದಿಗೆ ಬಂದಂತೆ ಕಂಡು ಬರುತ್ತದೆ.

ಆಳುಪ ವಂಶದವರು ಒಂದೂವರೆ ಸಾವಿರ ವರ್ಷಗಳ ಹಿಂದೆ ತುಳುನಾಡು ಮತ್ತು ಮಲೆನಾಡಿನ ಭಾಗಗಳನ್ನು ಆಳಿದ ಅರಸರು. ಸಾಮಾನ್ಯಶಕೆಯ ನಾಲ್ಕನೆ ಶತಮಾನದಿಂದ (ಸಾ.ಶ:೪೨೫) ಹದಿನೈದನೆ ಶತಮಾನದ ಆರಂಭದವರೆಗೆ (ಸಾ.ಶ:೧೪೧೦) ಕೊಡಲ (< ಕುಡಲ)/ಪ್ರಾಚೀನ ಮಂಗಳೂರು) ಅಲ್ಲದೆ, ಬನವಾಸಿ,ಉದ್ಯಾವರ, ಬಾರಕೂರು, ಪಟ್ಟಿಪೊಂಬಚ್ಚಪುರ (ಈಗಿನ ಊರಹೆಸರು: ಹುಂಬುಜ/ಹುಂಚ), ಮೂಡಬಿದ್ರೆ ಮತ್ತು ಮಂಜೇಶ್ವರ ಕೇಂದ್ರಗಳಿಂದ ಆಳಿದರು. ಅಂದರೆ ಇಂದಿನ ದಕ್ಷಿಣ ಕನ್ನಡ, ಉಡುಪಿ, ಉತ್ತರಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳ ಅಂದಿನ ಊರುಗಳಲ್ಲಿ ಓಡಾಡಿ ಹೋರಾಡಿ ಬಾಳಿ ಆಳಿ ಅಳಿದುಹೋದವರು.

ಇತಿಹಾಸಕಾರರು ಆಳುಪರು ಸುದೀರ್ಘಕಾಲ - ಸಾಮಾನ್ಯ ಶಕ ೪೦೦ ರಿಂದ ೧೩೦೦- ತುಳುನಾಡನ್ನು ಆಳಿದರೆಂದರೆಂದು ಪ್ರತಿಪಾದಿಸಿದರೂ, ಸಾ.ಶ. ೪೦೦ ಪೂರ್ವಕಾಲದ ಆಳುಪರ ವಿವರಗಳು ಸಾಕಷ್ಟು ಅಸ್ಪಷ್ಟವಾಗಿದೆ.




ಅಳುಪರ ಪೂರ್ವ ಚರಿತ್ರೆ

ಸಂಗಂ ಕಾವ್ಯಗಳಲ್ಲಿ ಆಳುಪರ ಉಲ್ಲೇಖವಿಲ್ಲದೆ ಬಿಟ್ಟು ಹೋಗಿದೆ!

ಬಹುಶ: ಸಂಗಂ ಅಗನಾನೂರು ರಚನೆಯಾದಾಗ (ಅಂದಾಜು ಸಾಶ ೧೦೦-೨೦೦) ಅಳುಪರು ಇನ್ನೂ ಅರಸರಾಗಿರಲಿಲ್ಲ. ಗ್ರೀಕರ ಆ ಕಾಲದ ವರದಿಗಳು ಸೂಚಿಸುವಂತೆ ಜೀವನಕ್ಕಾಗಿ ಕಡಲಲ್ಲಿ ಪಾಂಡಿಗಳನ್ನು ಚಲಾಯಿಸಿ ವ್ಯಾಪಾರ ವಹಿವಾಟು ಮಾಡುತ್ತಾ ಕೆಲವೊಮ್ಮೆ ಸಂದರ್ಭಾನುಸಾರ ಕಡಲುಗಳ್ಳರಾಗಿದ್ದಂತೆ ಕಂಡು ಬರುತ್ತಾರೆ. ಕಡಲುಗಳ್ಳರು ಅಂದಾಗ ಸಂಗಂ ಕಾವ್ಯಗಳಲ್ಲಿ ಬರುವ "ಕರುಂಬ" ಕಡಲುಗಳ್ಳರ ಒಂದು ವೃತ್ತಾಂತ ನೆನಪಾಗುತ್ತದೆ. ಅಗನಾನೂರು ಸಂಗಂ ಕಾವ್ಯದ ವರಣನೆಗಳ ಪ್ರಕಾರ ಕರುಂಬ ನಾವಿಕರ ಒಂದು ತಂಡ ಕರಾವಳಿಯ ಕಡಲ ಒಂದು ದ್ವೀಪದಲ್ಲಿ ನೆಲೆಸಿದ್ದರು. (ಇಂದಿನ ಸೈಂಟ್ ಮೇರಿ ದ್ವೀಪಗಳೇ?.. ತಿಳಿಯದು). ಅಂದಿನ ಕಾಲದಲ್ಲಿ ವೀರರು ತಮ್ಮ ರಕ್ಷಣೆಗಾಗಿ ಒಂದು ನಿರ್ದಿಷ್ಟ ಮರವನ್ನು "ಕಾವಲು" (ರಕ್ಷಕ) ಮರವಾಗಿ ಇಟ್ಟುಕೊಂಡು ಪೂಜಿಸುವುದು ಆ ಕಾಲದ ರೂಡಿ ಆ ದ್ವೀಪದಲ್ಲಿ ಈ ಕರುಂಬರು ಕದಂಬ ಮರವನ್ನು ಅವರ ಕಾವಲು ಮರವಾಗಿ ಬೆಳೆಸಿದ್ದರು. . ಆಗ ತುಳುನಾಡಿನಲ್ಲಿ ಆಳುತಿದ್ದವರು ನಂದ ಅರಸರು. ತಮಿಳು ಸಂಗಂನಲ್ಲಿ ನಂದರನ್ನು "ನನ್ನರು" ಎಂದಿದ್ದಾರೆ. ನಂದ ಅರಸರು ಬಾಗೆ ಮರವನ್ನು ತಮ್ಮ ಕಾವಲು ಮರವಾಗಿ ಇಟ್ಟುಕೊಂಡಿದ್ದರು. ನಂದ ಅರಸರ ಆಣತಿಯ ಮೇರೆಗೆ ಕರುಂಬ ವೀರರು ಕಡಲ ನಡುವಿನ ದ್ವೀಪದಲ್ಲಿ ಅಡಗಿ ಕುಳಿತು ಚೇರನಾಡಿಗೆ (ಕೇರಳಕ್ಕೆ) ಹೋಗುವ ಯವನರ (ಗ್ರೀಕರು) ಹಡಗುಗಳನ್ನು ತಡೆದು ಸೂರೆಗೈದು ಬಂದ ಸಂಪತ್ತನ್ನು ನಂದ ಅರಸರೊಂದಿಗೆ ಹಂಚಿಕೊಳ್ಳುತ್ತಿದ್ದಂತೆ ಕಾಣುತ್ತದೆ. ಈ ಕಾರಣವಾಗಿ ಕುಪಿತನಾದ ಒಬ್ಬ ಚೇರ ಅರಸ ತನ್ನ ಸೇನೆಯನ್ನು ಕಳುಹಿಸಿ ಈ ಕರುಂಬ ನಾವಿಕರ ತಂಡವನ್ನು ಸದೆಬಡೆದು ಬುದ್ದಿ ಕಲಿಸಿದನಂತೆ!

ಈ ಕತೆಯ ಬಗ್ಗೆ ಸಂಗಂ ಕಾವ್ಯಗಳ ವಿಮರ್ಶಕರಲ್ಲಿ ಎರಡು ವಿಭಿನ್ನ ಅಭಿಪ್ರಾಯಗಳಿವೆ. (೧) ಕದಂಬ ಮರ ಪೂಜಿಸುತಿದ್ದ ಕಡಲವೀರ ಕರುಂಬರು ನಂತರ ಬನವಾಸಿಗೆ ವಲಸೆ ಹೋಗಿ ನೆಲೆಸಿ ಆಳಿದ ಕದಂಬವಂಶದವರ ಮೂಲಪುರುಷರು. (೨) ಅವರಿಗೂ ಇವರಿಗೂ ಸಂಬಂಧವಿರಲಿಕ್ಕಿಲ್ಲ.

ನನಗೆ ಒಂದನೆ ಅಭಿಪ್ರಾಯ ಸರಿಯೆಂದು ಕಾಣುತ್ತದೆ. ಏಕೆಂದರೆ, ಕರುಂಬರು ಮುಂಡಾ ಜನಾಂಗಕ್ಕೆ ಸೇರಿದವರು. ಮುಂಡಾ ಆದಿವಾಸಿಗಳಿಗೆ ಕದಂಬ ಮರ ಪೂಜನೀಯ. ಕದಂಬ ಮರಕ್ಕೆ ಮುಂಡಾ ಭಾಷೆಯಲ್ಲಿ ಕಯಿಂ, ಕರಂ ಇತ್ಯಾದಿ ಹೆಸರುಗಳಿವೆ. ಸನಾತನ ಹಿಂದುಗಳು ಅಶ್ವಥ ಮರಕ್ಕೆ ನೀಡುವ ಗೌರವವನ್ನು ಮುಂಡಾ ಆದಿವಾಸಿಗಳು ಕದಂಬ ವೃಕ್ಷಕ್ಕೆ ನೀಡುತ್ತಾರೆ. ಕದಂಬ ಮರ ಇತಿಹಾಸದಲ್ಲಿ ಬನವಾಸಿ ಕದಂಬರ ವಂಶದ ಗುರುತಾಗಿ ಉಳಿದಿದೆ. ಕದಂಬರಂತೆ ಆಳುಪರೂ ಮುಂಡಾ ಜನಾಂಗಕ್ಕೆ ಸೇರಿದವರು. ಮುಂಡಾ ಜನರಿಗೆ ಸಿಂಗಬೊಂಗ (ಸೂರ್ಯ) ಅತೀ ಪೂಜನೀಯ ದೇವರು. ಆಳುಪೆಯ ಒಳಭಾಗದಲ್ಲಿ ಒಂದು ಸೂರ್ಯನಾರಾಯಣ ದೇವಸ್ಥಾನ ಇದೆ. ಅಪರೂಪವಾಗಿರುವ ಸೂರ್ಯನಾರಾಯಣ ದೇವಾರಾಧನೆಯ ಮೂಲ ಮುಂಡ ಜನಾಂಗ ಮೂಲದ "ಸಿಂಗಬೊಂಗ" ಪರಿಕಲ್ಪನೆ ಎಂದು ನನ್ನ ಅಭಿಪ್ರಾಯ.

ಕರುಂಬರ ನೆಲೆಗಳಾಗಿದ್ದ ಕರಂಬಾರು ಎಂಬ ಹೆಸರಿನ ಊರುಗಳು ಮಂಗಳೂರು ವಿಮಾನ ನಿಲ್ದಾಣದ ಹತ್ತಿರ, ಬೆಳ್ತಂಗಡಿಯ ಗ್ರಾಮಾಂತರದಲ್ಲಿ ಹಾಗೂ ಇನ್ನೂ ಹಲವೆಡೆ ಇವೆ. ೧೪ನೆ ಶತಮಾನದ ತಿರುವೈಲ್ ಶಾಸನ (೧೩೮೯) ದ ಅನುಸಾರ ವಾಮಂಜೂರು ಅಮೃತೇಶ್ವರ ದೇವಸ್ಥಾನದ ಪರಿಸರದಲ್ಲಿ ಕದಂಬರ ಕುಲದ ಸದಸ್ಯರು ನೆಲಸಿದ್ದರೆಂದು ತಿಳಿದು ಬರುತ್ತದೆ. (ಡಾ| ಪಿ.ಗುರುರಾಜ ಭಟ್, ಪು ೧೦೫)

ಈ ಮೇಲಿನ ಕತೆಯಿಂದ ತಿಳಿದು ಬರುವುದೇನಂದರೆ-ಕಡಲ ವ್ಯಾಪಾರಿಗಳಾಗಿದ್ದ ಕರುಂಬ/ಕದಂಬರಿಗೂ ಆಳುಪರಿಗೂ ಮೊದಲಿನಂದಲೂ ಸ್ನೇಹ ಬಾಂಧವ್ಯವಿತ್ತು ಎಂಬ ತೀರ್ಮಾನಕ್ಕೆ ಬರಬಹುದು. ಆದುದರಿಂದ ಕದಂಬರು ಬನವಾಸಿಗೆ ವಲಸೆ ಹೋಗಿ ನೆಲಸಿ ಅಲ್ಲಿ ಹೊಸ ರಾಜ್ಯ ಸ್ಥಾಪಿಸಿದಾಗ ಅವರಿಗೆ ಸಹಾಯಕ್ಕೆ ಹೋದವರು ಕುಡಲದ ಆಳುಪ ಕುಟುಂಬದ ಯುವಕರು! ಕದಂಬ ಅರಸರೊಂದಿಗೆ ಸ್ನೇಹ ನಂತರ ವೈವಾಹಿಕ ಸಂಬಂಧ ಆಗಿ ಮುಂದೆ ಕದಂಬ ಮಂಡಲದ ಆಡಳಿತ ಚುಕ್ಕಾಣಿಯನ್ನು ತೆಗೆದುಕೊಂಡರು.



ಏಳನೆಯ ಶತಮಾನದಲ್ಲಿ ಬನವಾಸಿಯ ಕದಂಬರ ಅವನತಿಯ ನಂತರ ಬಾದಾಮಿ ಚಾಲುಕ್ಯ ಸಾಮ್ರಾಟ ಪುಲಿಕೇಶಿ(೨)ಯ ಸಾಮಂತನಾಗಿ, ಆಳುವರಸ ೧ ಗುಣಸಾಗರ (೬೫೦-೬೮೦) ಕದಂಬ ಮಂಡಲವನ್ನು ಬನವಾಸಿ ಕೇಂದ್ರದಿಂದ ಕೆಲಕಾಲ ಆಳಿದನು. ಅಳುವರಸ (೧) ಗುಣಸಾಗರನ ಮಗ ಚಿತ್ರವಾಹನ ಚಾಲುಕ್ಯರ ವಂಶದ ರಾಜಕುಮಾರಿ ಕುಂಕುಮ ಮಹಾದೇವಿಯನ್ನು ವಿವಾಹವಾದನು.




ಆಳುಪರು ಮತ್ತು ಅಳುಪೆ

ಅಳುಪರ ಆರಂಭದ ಕೇಂದ್ರ ಆಡಳಿತ ಸ್ಥಾನ: ಆಳುಪೆ, ಕುಡ್ಲ (ಪ್ರಾಚೀನ ಮಂಗಳೂರು). ಮಂಗಳೂರು ನಗರದ ಪೂರ್ವ ಭಾಗದಲ್ಲಿರುವ ಒಂದು ಪ್ರದೇಶ -ಅಳುಪೆ. ಅಳುಪೆ ಅವರ ಮೂಲಸ್ಥಾನವಾಗಿದ್ದ ಕಾರಣ ಅವರು ಅಳುಪರು/ಅಳುಪರಸರು/ಅಳುಪೇಂದ್ರರು ಇತ್ಯಾದಿ ಹೆಸರುಗಳಿಗೆ ಭಾಜನರಾದರು. ಅಳುಪರ ಆಡಳಿತ ಯಾವ ಕಾಲದಲ್ಲಿ ಆರಂಭ ವಾಯಿತು ಎಂಬ ಮಾಹಿತಿ ಸ್ಪಷ್ಟವಾಗಿಲ್ಲ. ಅಳುಪೆಯಲ್ಲಿ ಇದುವರೆಗೂ ಪ್ರಾಚ್ಯ ಸಂಶೋಧನಾ ಉತ್ಖನನ ನಡೆದಿಲ್ಲ. ವೈಜ್ಞಾನಿಕ ರೀತಿಯ ಉತ್ಖನನ ನಡೆಸಿ ಮಾಹಿತಿ ಸಂಗ್ರಹಿಸಿದರೆ ಅವರ ಕಾಲದ ಜನಜೀವನಕ್ಕೆ ಸಂಬಂಧಿಸಿದ ಇನ್ನಷ್ಟು ಮಾಹಿತಿಗಳು ದೊರೆಯಬಹುದು.

ಆಳುಪರ ಮೂಲಸ್ಥಾನ ಅಳುಪೆ ಎಂದು ಸಾಧಿಸಲು ನಮಗೆ ಲಭಿಸುವ ಸಾಕ್ಷಾಧಾರಗಳು:

೧."ಆಳಪೆ"/ಅಳುಪೆ ಎಂಬ ಊರ ಹೆಸರು-ಹಾಗೂ ಈ ಅರಸರ "ಆಳಪೇಂದ್ರ"/ಅಳುಪೇಂದ್ರ ಎಂಬ ಬಿರುದುಗಳೂ ಪರಸ್ಪರ ತಾಳೆಯಾಗುತ್ತವೆ.

೨. ಶಾಸನಗಳಲ್ಲಿ ಉಲ್ಲೇಖಿಸಿದ ಹೆಸರು: "ಆಳುವಖೇಡ". (> ಗ್ರೀಕರ ಸಾಹಿತ್ಯದಲ್ಲಿ " ಒಲೋಕೊಯಿರ"). ಇದರ ಭೌಗೋಳಿಕ ಲಕ್ಷಣವಾದ- "ಖೇಡ (ಖೆಡ್ಡ)" ಅಂದರೆ ದೊಡ್ಡ ಗುಂಡಿ - ಆಳವಾದ ಹಾಗೂ ವಿಶಿಷ್ಟವಾದ ನದಿಕಣಿವೆಯ ಭೂ ಸ್ವರೂಪ - ಈಗಲೂ ಮರೋಳಿ-ಅಳುಪೆ ಪ್ರದೇಶದಲ್ಲಿದೆ. (ಆಳುವಖೇಡದಲ್ಲಿ ಬರುವ "ಖೇಡ"- ಪದವನ್ನು ಕೆಲವು ಇತಿಹಾಸಕಾರರು ಅಪಾರ್ಥಮಾಡಿಕೊಂಡಿರುವಂತಿದೆ).

೩. ಆಳುಪೆ-ಮರೋಳಿ-ಪದವು ಗ್ರಾಮ ಸಮುಚ್ಚಯದ ಒಳಗೊಂದು ( ಈಗಿನ ಬಿಕರ್ನಕಟ್ಟೆಯ ಹತ್ತಿರ) ಪ್ರದೇಶದ ಹೆಸರು ""ಅಳಿಕೆ". ಅಳಿಕೆ - ಅಳುಪರ ಚಾರಿತ್ರಿಕ ಅರಮನೆ ಇದ್ದ ಸ್ಥಳದ ಹೆಸರು ಆಗಿರಬೇಕು. ಆಳಿಕೆ/ಅಲಕಾ ಎಂದರೆ ಪುರಾಣ ಪ್ರಸಿದ್ದಿಯ ಶ್ರೀಮಂತ ಪುರುಷ ಕುಬೇರನ ಅರಮನೆ/ರಾಜಧಾನಿಯ ಹೆಸರು. ಅಂದರೆ ಆಳುಪರಿಗೆ ಪುರಾಣಗಳ ಪರಿಚಯವಿತ್ತು! ಗುಣಸಾಗರ ಆಳುವರಸ (೬೫೦-೬೮೦) ತನ್ನನ್ನು "ಅಳುಕ" ಮಹಾರಾಜನೆಂದು ಕರೆಯಿಸಿಕೊಂಡಿದ್ದಾರೆ.

೩. ಒಂದು ಅಪರೂಪದ ಸೂರ್ಯನಾರಾಯಣ ದೇವರ ಗುಡಿ ಈಗಲೂ ಅಳುಪೆ ಸನಿಹದ ಮರೋಳಿಯಲ್ಲಿದೆ. ಅಳುಪ ಅರಸರು ಮುಂಡಾ ಜನಾಂಗಕ್ಕೆ ಸೇರಿದವರು ಆಗಿದ್ದಿರಬಹುದು. ಮುಂಡಾ ಜನರ ಮೂಲ ಆರಾಧ್ಯ ದೈವದ ಹೆಸರು - ಸಿಂಗಬೊಂಗ - ಅಂದರೆ ಸೂರ್ಯ. ಸಿಂಗಬೊಂಗನ ಗುಡಿ ಕಾಲಕ್ರಮೇಣ ವಿಕಾಸ ಪಥದಲ್ಲಿ ಸೂರ್ಯನಾರಾಯಣನ ಸನ್ನಿಧಿ ಆಗಿರಬಹುದು.

೪. ಆಳುಪೆಯ ಹತ್ತಿರ ಪೂರ್ವಕ್ಕೆ ಇರುವ "ಕುಲಶೇಖರ" ಎಂಬ ಸ್ಥಳ ಕೂಡಾ ಆಳುಪ ವಂಶದ ಮೂರು ಅರಸರ ಹೆಸರು ಆಗಿದೆ.


- ಅಳುಪೆಯ ಸುತ್ತಮುತ್ತಲ ಪ್ರದೇಶದಲ್ಲಿ ಪ್ರಾಚ್ಯ ಸಂಶೋಧನೆ ಹಾಗೂ ವೈಜ್ಞಾನಿಕ ಉತ್ಖನನಗಳನ್ನು ನಡೆಸಿದರೆ ಹೆಚ್ಚಿನ ಐತಿಹಾಸಿಕ ಕುರುಹುಗಳು ದೊರೆಯುವ ಸಾಧ್ಯತೆ ಇದೆ.



** **

ಅಲುಪರ ಕಾಲಕ್ರಮಣಿಕೆ ಪಟ್ಟಿ

ಅರಸನ/ ಅರಸಿಯ ಹೆಸರು = [ಸಾಮಾನ್ಯಶಕೆಯ ಆಡಳಿತ ಕಾಲಾವಧಿ] = ರಾಜಧಾನಿ

== ==

ಪಶುಪತಿ (ರಾಣಿ ಲಕ್ಷ್ಮಿದೇವಿ) [ಸಾ.ಶ: ೪೨೫-೪೬೦] ಅಳುಪೆ/ಕುಡಲ

(< ಮಾಹಿತಿ ಹೆಸರು ಸಿಕ್ಕಿಲ್ಲ > ) [ಸಾ.ಶ: ೪೬೦-೬೫೦] ಕುಡಲ

= =

ಆಳುವರಸ ೧-(ಗುಣಸಾಗರ ಅಳುಕ ಮಹಾರಾಜ) [ಸಾ.ಶ: ೬೫೦-೬೮೦] ಅಳುಕ*೧ -ಅಳುಪೆ/ಕುಡಲ, ಬನವಾಸಿ.

ಚಿತ್ರವಾಹನ ೧+ ರಾಣಿ ಕುಂಕುಮ ಮಹಾದೇವಿ [ಸಾ.ಶ: ೬೮೦-೭೩೦] ಅಳುಪೆ/ಕುಡಲ, ಬನವಾಸಿ*೨ *

ಆಳುವರಸ ೨ [ಸಾ.ಶ: ೬೮೦-೭೩೦] ಅಳುಪೆ/ಕುಡಲ-ಬನವಾಸಿ-ಉದ್ಯಾವರ.

ಚಿತ್ರವಾಹನ ೨-[ಸಾ.ಶ:೭೩೦-೭೬೦] ಪಟ್ಟಿಪೊಂಬಚ್ಚಪುರ, ಉದ್ಯಾವರ

ರಣಸಾಗರ [ಸಾ.ಶ: ೭೬೦-೮೦೫] ಉದ್ಯಾವರ

ಶ್ವೇತವಾಹನ [ಸಾ.ಶ: ೮೦೫-೮೧೦] ಉದ್ಯಾವರ

ಪ್ರಥ್ವಿಸಾಗರ (ಆಳುವರಸ ೩ ) [ಸಾ.ಶ: ೮೧೦-೮೪೦] ಉದ್ಯಾವರ, ಪಟ್ಟಿಪೊಂಬಚ್ಚಪುರ

ವಿಜಯಾದಿತ್ಯ ಮಾರಮ್ಮ (ಆಳುವರಸ ೪ ) [ಸಾ.ಶ: ೮೪೦-೮೭೦] ಉದ್ಯಾವರ

ವಿಮಲಾದಿತ್ಯ (ಆಳುವರಸ ೩ ) [ಸಾ.ಶ: ೮೭೦-೮೮೦] ಉದ್ಯಾವರ

ಆಳುವ ರಣಂಜಯ [ಸಾ.ಶ: ೮೮೦-೯೧೦] ಉದ್ಯಾವರ

ದತ್ತಮ್ಮ ( ದತ್ತಾಳುಪ ) [ಸಾ.ಶ: ೯೧೦-೯೩೦] ಉದ್ಯಾವರ

ಕುಂದವರ್ಮ [ಸಾ.ಶ: ೯೩೦-೯೭೦] ಮಂಗಲಾಪುರ + ಮಂಜರೂರು

ಪಾಂಡ್ಯ ಧನಂಜಯ [ಸಾ.ಶ: ೯೭೦-೧೦೦೦] ಮಂಗಲಾಪುರ + ಮಂಜರೂರು *೩

(< ಚೋಳರ ಆಡಳಿತ ? >) [ಸಾ.ಶ: ೧೦೦೦-೧೦೩೦] ಮಂಗಲಾಪುರ + ಮಂಜರೂರು *೪

ಬಂಕಿದೇವ ೧ (ಸಾಂತಾರ ವಂಶ) [ಸಾ.ಶ: ೧೦೩೦-೧೦೫೦] ಮಂಗಲಾಪುರ + ಮಂಜರೂರು

ದತ್ತಾಳುಪೇಂದ್ರ ಶ್ರೀಮಾರ ಒಡ್ಡಮದೇವ [ಸಾ.ಶ: ೧೦೫೦-೧೦೭೦] ಮಂಗಲಾಪುರ + ಮಂಜರೂರು *೫

ಪಟ್ಟಿಯೊಡೆಯ [ಸಾ.ಶ: ೧೦೭೦-೧೦೯೦] ಬಾರಕೂರು

ಪಾಂಡ್ಯ ಪಟ್ಟಿಯೊಡೆಯ- ಕುಮಾರ ಜಯಸಿಂಗರಸ (ಆಳುವರಸ ೫) [ಸಾ.ಶ: ೧೦೯೦-೧೧೧೫] ಬಾರಕೂರು

ಭುಜಬಲ ಕವಿ ಆಳುಪೇಂದ್ರ [ಸಾ.ಶ: ೧೧೧೫-೧೧೫೫] ಬಾರಕೂರು

ಬೊಮ್ಮದೇವ ಆಳುಪೇಂದ್ರ [ಸಾ.ಶ: ೧೧೫೬-೧೧೭೦] ಬಾರಕೂರು

ವೀರ ಕುಲಶೇಖರ [ಸಾ.ಶ: ೧೧೭೦-೧೨೨೦] ಮಂಗಳೂರು

ಕುಂಡಣ ಪಂಡಿತ ಪಾಂಡ್ಯ (ಸಾಂತಾರ ವಂಶ) [ಸಾ.ಶ: ೧೨೨೦-೧೨೩೦] ಉದ್ಯಾವರ *೬

ವಲ್ಲಭದೇವ ದತ್ತಾಳುಪ ೨ [ಸಾ.ಶ: ೧೨೩೦-೧೨೫೦] ಬಾರಕೂರು

ವೀರ ಪಾಂಡ್ಯದೇವ ೧ [ಸಾ.ಶ: ೧೨೫೦-೧೨೭೫] ಬಾರಕೂರು

ಬಲ್ಲಮಹಾದೇವಿ (ವೀರ ಪಾಂಡ್ಯದೇವ ೧ನ ಪತ್ನಿ) [ಸಾ.ಶ: ೧೨೭೫-೧೨೯೨] ಬಾರಕೂರು

ನಾಗದೇವರಸ [ಸಾ.ಶ: ೧೨೯೦-೧೩೦೦] ಬಾರಕೂರು

ಬಂಕಿದೇವ ೨- (ಪಾಂಡ್ಯದೇವ ೧ ನ ಅಳಿಯ) [ಸಾಮಾನ್ಯ ಶಕ ೧೨೮೫-೧೩೧೫] ಮಂಗಳೂರು

ವೀರ ಸೋಯಿದೇವ ಆಳುಪೇಂದ್ರ [ಸಾ.ಶ: ೧೩೧೫-೧೩೩೫] ಬಾರಕೂರು

ಕುಲಶೇಖರ ೨ [ಸಾ.ಶ: ೧೩೨೧-೧೩೪೬] ಮಂಜೇಶ್ವರ, ಮಂಗಳೂರು, ಬಾರಕೂರು

ಚಿಕ್ಕಾಯಿ ತಾಯಿ (< ಹೊಯ್ಸಳ ವೀರ ಬಲ್ಲಾಳ ೩ > - ಅವನ ಪತ್ನಿ) [ಸಾ.ಶ: ೧೩೩೩-೧೩೪೮] ಬಾರಕೂರು *೭

ಬಂಕಿದೇವ ೩ [ಸಾ.ಶ: ೧೩೪೬-೧೩೫೫] ಮಂಗಳೂರು, ಬಾರಕೂರು

ಕುಲಶೇಖರ ೩ [ಸಾ.ಶ:೧೩೫೫-೧೩೯೦] ಮೂಡಬಿದ್ರೆ

ವೀರಪಾಂಡ್ಯದೇವ ೨ [ಸಾ.ಶ: ೧೩೯೦-೧೪೧೦] ಮೂಡಬಿದ್ರೆ.



-------

** ಟಿಪ್ಪಣಿಗಳು:**

*೧."ಅಳುಕ": ಇದು ಅರಮನೆ ಇದ್ದ ಸ್ಥಳದ ಹೆಸರು ಆಗಿರಬೇಕು. ಅಳುಕೆ/ಅಳಕೆ ಸ್ಥಳ-ಹೆಸರು ಈಗಲೂ ಮಂಗಳೂರಿನಲ್ಲಿ ಎರಡು ಕಡೆ ಇದೆ. ಕುಬೇರನ ಅರಮನೆ/ರಾಜಧಾನಿಯ ಹೆಸರು ಅಳಕೆ/ಅಲಕಾಪುರಿ - ಅಳುಪರು ತಮ್ಮ ಅರಮನೆ/ರಾಜಧಾನಿಗೆ ಪುರಾಣದ ಕುಬೇರನ ಅರಮನೆಯ ಇಟ್ಟುಕೊಂಡಿದ್ದರು! ಕುಡಲ ಮತ್ತು ಕದಂಬ ಮಂಡಲದ ಜಂಟಿ ಆಡಳಿತ ಅವರಿಗೆ ಸಹಜವಾಗಿ ಸಿರಿತನ-ಸಂಪತ್ತು ಒದಗಿಸಿರಬಹುದು.

*೨.ರಾಣಿ ಕುಂಕುಮ ಮಹಾದೇವಿ ಚಾಲುಕ್ಯರ ರಾಜ ಮನೆತನದಿಂದ ಆಳುಪರನ್ನು ಮದುವೆಯಾಗಿ ಬಂದ ಹೆಣ್ಣು.

*೩."ಪಾಂಡ್ಯ" (ಧನಂಜಯ: ೯೭೦-೧೦೦೦). ಅಳುಪ ಅರಸರು ಹತ್ತನೆಯ ಶತಮಾನದಲ್ಲಿ "ಪಾಂಡ್ಯ" ಎಂಬ ಉಪನಾಮವನ್ನು ಅಂಗೀಕರಿಸಿದರು!

*೪. ೧೦೦೦-೧೦೩೦ ರ ನಡುವೆ ಮಂಗಲಾಪುರ ಚೋಳರ ಆಡಳಿತದಲ್ಲಿ ಇದ್ದಂತೆ ಕಂಡು ಬರುತ್ತದೆ.

*೫. "ದತ್ತಾಳುಪೇಂದ್ರ" (ಶ್ರೀಮಾರ ಒಡ್ಡಮದೇವ:೧೦೫೦-೧೦೭೦). ಅರಸು ಪಟ್ಟಕ್ಕೆ ವಾರಸುದಾರರಲ್ಲದಾಗ ದತ್ತು ತೆಗೆದುಕೊಳ್ಳುವ ಪದ್ದತಿ ಇದ್ದಂತಿದೆ.

*೬. ೧೨೨೦ ರಲ್ಲಿ ಸಾಂತಾರ ವಂಶದ ಅರಸರ ಪ್ರವೇಶ ಆಗಿದೆ.

*೭. ಬಾರಕೂರನ್ನು ೧೫ ವರ್ಷ(೧೩೩೩-೧೩೪೮) ಆಳಿದ ರಾಣಿ ಚಿಕ್ಕಾಯಿ ತಾಯಿ ಎಂಬವಳು ಹೊಯ್ಸಳರ ವೀರ ಬಲ್ಲಾಳ (೩) - ಅವನ ಪತ್ನಿ)

**

೮.ರಾಜ್ಯದ ಆಡಳಿತ: ಅಂದಿನ ರಾಜ್ಯ ಹಲವು ನಾಟ್ಟು /> ನಾಡುಗಳನ್ನು ಒಳಗೊಂಡಿತ್ತು. ಪ್ರತಿ ನಾಡಿನಲ್ಲಿ ಹಲವಾರು ಗ್ರಾಮಗಳು ಸೇರಿಕೊಂಡಿದ್ದವು. ವಿಷಯ ಎನ್ನುವ ಪ್ರದೇಶ ವಿಂಗಡಣೆ ಶಾಸನಗಳಲ್ಲಿ ಅಲ್ಲಲ್ಲಿ ಬರುವುದುಂಟು. ಉದಾಹರಣೆಗೆ: ತುಳು ವಿಷಯ. ಆ "ವಿಷಯ" (ಪ್ರದೇಶದ) ವ್ಯಾಪ್ತಿ ಅಸ್ಪಷ್ಟವಾಗಿದೆ.

.**

೯.ಶಾಸನಗಳಲ್ಲಿ ಬರುವಂತೆ ಅರಸ ಮತ್ತು ಅವನ ಕೆಳಗಿನ ಅಧಿಕಾರಿಗಳು:

ಅರಸ

ಮಂತ್ರಿ - "ಪ್ರಧಾನರು"/"ಮಹಾಪ್ರಧಾನರು" /ಪಂಚಪ್ರಧಾನರು

ದಂಡನಾಯಕ - "ದಣ್ಣಾಯಕ"

ಲೆಕ್ಕಿಗರು - "ಸೇನಬೋವ"ಮತ್ತು "ಕರಣೀಕ"

ಖಜಾಂಚಿ -"ಭಂಡಾರಿ"

ರಕ್ಷಣೆ -" ತೋಳಾರ"

ಸಹಾಯಕರು - "ಬಾಹತ್ತರ ನಿಯೋಗಿಗಳು" (೭೨ )

**

೧೦.ಅರಸನ ವಾಸದ -ಅರಮನೆಯ ಹೆಸರು- "ಪಿರಿಯರಮನೆ" (=೧.ದೊಡ್ಡ ಅರಮನೆ,೨.ಹಿರಿಯರ ಮನೆ)

ರಾಜನ ಸಭೆಗೆ ಹೆಸರು -"ಒಡ್ಡೋಲಗ" court

ರಾಜ ಸಭಾಗೃಹದ ಹೆಸರು -"ಮೊಗಸಾಲೆ" auditorium, court hall

** **

ಇತಿಹಾಸದ ಅಂದಿನ ಜನಜೀವನದ ನಿಖರ ವಿವರಗಳ ಸಂಗ್ರಹಣೆಗಾಗಿ ನಂದ, ಅಳುಪ, ಕದಂಬ, ಗಂಗ ಮತ್ತಿತರ ಅರಸರು ಬಾಳಿದ ಚಾರಿತ್ರಿಕ ನೆಲೆಗಳಲ್ಲಿ ಆಧುನಿಕ ಪ್ರಾಚ್ಯ ಉತ್ಖನನ ಸಂಶೋಧನೆಗಳು ಆಗಬೇಕಾಗಿದೆ. ಕನ್ನಡ ನಾಡಿನ ವಿಶ್ವವಿದ್ಯಾಲಯಗಳು ಇತಿಹಾಸ ಸಂಶೋಧಕರು ಈ ನಿಟ್ಟಿನಲ್ಲಿ ಗಮನ ಹರಿಸಬೇಕಾಗಿದೆ.


** **

ಇನ್ನಷ್ಟು ಓದುವವರಿಗಾಗಿ:

೧.ಮಂಜೇಶ್ವರ ಗಣಪತಿರಾವ್ ಐಗಳ್ (೧೯೨೩ ) ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಚೀನ ಇತಿಹಾಸ. (೨೦೦೪ ರ ಉಡುಪಿ ಆವೃತ್ತಿ)

೨.Dr K.V. Ramesh. (1970). A history of South Kanara.

೩.Dr P. Gururaja Bhat, (1975). Studies in Tuluva history and culture.

೪.Govindaraya Prabhu,S & Nithyananda Pai,N ( 2006) The Alupas: COinage and History. Sanoor, Karkala.200 p.

೫.ಮಯಿಲ್ಯೆ ಶಿನಿ ವೆಂಕಟಸಾಮಿ,(೧೯೬೬) ತುಳುನಾಡ ಇತಿಹಾಸ: ಕ್ರಿಶ.೨ನೆ ಶತಮಾನ (ತಮಿಳು ಮೂಲ:ತುಳುನಾಟ್ಟು ವರಲಾರು:೧೯೬೬); ಕನ್ನಡಕ್ಕೆ ಡಾ| ಶ್ರೀ ಕೃಷ್ಣ ಭಟ್ ಅರ್ತಿಕಜೆ, ಕರ್ನಾಟಕ ತುಳುಸಾಹಿತ್ಯ ಅಕಾಡೆಮಿ, ೨೦೧೫


Comments

Popular posts from this blog

೩. ಜೋಗುಳ- ಒಂದು ಶಬ್ಧ ಮಿಮಾಂಸೆ

15. ದಕ್ಕಣ ಪೀಠಭೂಮಿ ಮತ್ತು ದಕ್ಕಣ ಟ್ರಾಪ್ಸ್( ಲಾವಾಭೂಮಿ)

13.ಮೂಲದ್ರಾವಿಡ ಭಾಷೆ -ಪ್ರೊಟೊ ದ್ರಾವಿಡಿಯನ್.