14. ಬಲಿ-ಸುತ್ತು ಪೂಜೆ: ಪರಿಕಲ್ಪನೆಯ ವಿಕಾಸ

 

ಕರಾವಳಿಯ ದೇವಸ್ಥಾನಗಳಲ್ಲಿ ಸಮುದಾಯದ ಕೂಡುವಿಕೆ-ನೆರವಿನಿಂದ ಆಚರಿಸುವ ಮನಮೋಹಕ ಸಮಾರಂಭಗಳಲ್ಲಿ ಬಲಿ ಉತ್ಸವದ ಪೂಜೆಗೆ ವಿಶೇಷ ಸ್ಥಾನವಿದೆ.

ಬಲಿ ಸುತ್ತು, ಸುತ್ತು ಬಲಿ ಅಥವಾ ಬಲಿ-ಉತ್ಸವ ಎಂದರೆ ಏನು?

**

= ಬಲಿ ಪದ- ಅರ್ಥ ವ್ಯಾಪ್ತಿ

ಬಲಿ - ಎನ್ನುವ ಪದಕ್ಕೆ ಭಾರತೀಯ ಸಂಸ್ಕೃತಿಯಲ್ಲಿ ಅನೇಕ ಅರ್ಥಗಳಿವೆ.

೧.ಸಾಮಾನ್ಯವಾಗಿ ಎಲ್ಲರೂ ಗ್ರಹಿಸುವ ಅರ್ಥ ನರಬಲಿ, ಪ್ರಾಣಿ ಬಲಿ ಇತ್ಯಾದಿ ಪದಪುಂಜಗಳಲ್ಲಿ ಬರುವ "ಬಲಿ" - ಸಮರ್ಪಿಸುವುದು (sacrifice) ಅಥವಾ ಕೊಡುವುದು (offerring ) ಎಂಬ ಅರ್ಥವನ್ನು ಸೂಚಿಸುತ್ತದೆ. ಇದೆ ಅರ್ಥವನ್ನು ಪ್ರತಿನಿಧಿಸುವ ಬಲಿ ಚಕ್ರವರ್ತಿಯ ಕತೆ ಎಲ್ಲರಿಗೂ ಚಿರಪರಿಚಿತ. ಅಸುರ ವಂಶದ ಬಲಿ ಚಕ್ರವರ್ತಿ ಕೊಡುಗೈವೀರ, ಮಹಾದಾನಿ, ಧರ್ಮಿಷ್ಟ, ಪ್ರಜೆಗಳ ಹಿತ ಬಯಸುವ ಉತ್ತಮ ಅರಸ : ಕೇಳಿದ್ದನ್ನು ಇಲ್ಲ ಅನ್ನುವ ಜಾಯಮಾನ ಇಲ್ಲದವನು. ಐತಿಹ್ಯಗಳ ಪ್ರಕಾರ ವಾಮನ ಎಂಬವನು ಬಲಿ ಚಕ್ರವರ್ತಿಯ ಆಸ್ಥಾನಕ್ಕೆ ಬಂದು ತನಗೆ ಮೂರು ಹೆಜ್ಜೆ ಇಡುವಷ್ಟು ಜಾಗ ಕೊಡು ಎಂದು ಕೇಳಿದಾಗ ಬಲಿ ಅಸ್ತು ಎಂದ. ಬಲಿ ನೋಡುತಿದ್ದಂತೆ ಕುಳ್ಳ ವಾಮನ ಬೆಳೆದು ತ್ರಿವಿಕ್ರಮನಾಗುತ್ತಾನೆ. ಅವನಿಟ್ಟ ಮೊದಲ ಹೆಜ್ಜೆ ಇಡೀ ಭೂಮಂಡಲವನ್ನು ವ್ಯಾಪಿಸುತ್ತದೆ. ಎರಡನೆಯ ಹೆಜ್ಜೆ ಉಳಿದ ಆಕಾಶವನ್ನು ಆವರಿಸುತ್ತದೆ. ತನ್ನ ಮೂರನೆಯ ಹೆಜ್ಜೆಯನ್ನು ಎಲ್ಲಿ ಇಡಲಿ ಎಂದು ಚಕ್ರವರ್ತಿಯನ್ನು ಕೇಳುತ್ತಾನೆ. ಬಲಿ ಚಕ್ರವರ್ತಿ ತಲೆಬಾಗಿಸಿ ಕುಳಿತು ತನ್ನ ತಲೆಯ ಮೇಲೆ ಪಾದ ಊರುವಂತೆ ಸೂಚಿಸುತ್ತಾನೆ. ತಿವಿಕ್ರಮನಾದ ವಾಮನ ಬಲಿ ಚಕ್ರವರ್ತಿಯನ್ನು ಕಾಲಿನಿಂದ ಮೆಟ್ಟಿ ಪಾತಾಳಕ್ಕೆ ಅಟ್ಟುತ್ತಾನೆ. (ಇದೊಂದು ಮೋಸದ ಕತೆ - ಬಹಳಷ್ಟು ಜನರಿಗೆ ಇಷ್ಟವಾಗುವುದಿಲ್ಲ).

೨. (ಅ). ಬಲಿ ಪದಕ್ಕೆ ಸುತ್ತು ಬರುವುದು ಎಂಬ ಅರ್ಥವೂ ಇದೆ. "ಬಲಿ ಬರ್ಪುನಿ" (=ಬಲಿ ಬರುವುದು) ಅಂತ ತುಳುವಿನಲ್ಲಿ ಒಂದು ನುಡಿಗಟ್ಟು ಇದೆ. ಗ್ರಾಮೀಣ ಭಾಗದ ಅಜ್ಜಿಯರು ತಮ್ಮ ಕೆಲಸಗಳಲ್ಲಿ ನಿರತರಾಗಿದ್ದಾಗ, ಅವರನ್ನು ಬಿಡದೆ, ಕಾಲಿಗೆ ತೊಡರುವಂತೆ ಅವರ ಸುತ್ತು ತಿರುಗುವ ಮುದ್ದಿನ ಮೊಮ್ಮಕ್ಕಳಿಗೆ ಗದರುವುದು ಹೀಗೆ:" ಈ ಎಂಚಿನ ಬಲಿ ಬರ್ಪಿನಿ?" (= "ನೀನೆಂತಾ ಬಲಿ ಬರುವುದು?"). ಇಲ್ಲಿ ಬಳಸಿದ 'ಬಲಿ. ಪದ ದೇವಸ್ಥಾನಗಳಲ್ಲಿ ನಡೆಯುವ ಸುತ್ತು ಬರುವ ಬಲಿ ಆಚರಣೆಯಿಂದ ಪ್ರೇರಿತವಾಗಿದೆ.

(ಆ) "ಬಲಿ"ಯನ್ನು ಕ್ರಿಯಾಪದವಾಗಿ ಬಳಸಿದಾಗ - ಬಲಿಯುವುದು (ಬೆಳೆದು ಗಟ್ಟಿಯಾಗುವುದು) ಎಂಬರ್ಥ ನೀಡುತ್ತದೆ. (ಇ) "ಬಲಿ" ಅಂದರೆ ಎಳೆ,ಸೆಳೆ ಎಂಬರ್ಥವೂ ಇದೆ.

೩. ಸಂಸ್ಕೃತ ಕೋಶದಲ್ಲಿ ಬಲಿ ಪದಕ್ಕೆ ಇನ್ನಷ್ಟು ವೈವಿಧ್ಯಮಯ ಅರ್ಥಗಳು ದೊರೆಯುತ್ತವೆ: (ಅ) ಪೂಜೆ, ಆರಾಧನೆ: (ಆ) ತೆರಿಗೆ, ಕಂದಾಯ (ಇ) ಭೂತ ಯಜ್ಞ (ಈ) ಚಾಮರದ ಹಿಡಿ (ಉ) ಸುಕ್ಕು ಹಿಡಿದ ಚರ್ಮ (ಊ) ಕಟ್ಟಡ ಕೆಲಸ ಯೋಗ್ಯ ಮರ (ಎ) ಹೊಟ್ಟೆ ಭಾಗದ ಚರ್ಮದ ಮಡಿಕೆ ಮತ್ತು (ಏ) ಗಂಧಕ.

**

ಚಿತ್ರ= ಬಲಿ ಉತ್ಸವ.(ಕೃಪೆ;ವಾಟ್ಸಪ್)

೪. ಕರಾವಳಿಯ ಸುತ್ತು ಬರುವ ಬಲಿ ಅಥವಾ ಬಲಿ ಉತ್ಸವದ ಪರಿಚಯವಿಲ್ಲದ ಓದುಗರ ನೆರವಿಗಾಗಿ ತುಳು ನಿಘಂಟು ತಿಳಿಸುವ ವಿವರಣೆಯನ್ನು ಸ್ವಲ್ಪ ಸೇರಿಸಿ ಇಲ್ಲಿ ಹೀಗೆ ಉದ್ದರಿಸಬಹುದು:

" ಬಲಿ = ದೈವಸ್ಥಾನ ದೇವಸ್ಥಾನಗಳಲ್ಲಿ ದೈವ ಅಥವಾ ದೇವರ ವಿಗ್ರಹ, ತಲೆಯ ಮೇಲೆ ಹೊತ್ತುಕೊಂಡು, ಭೂತ ಪಾತ್ರಧಾರಿ ಮುಖವಾಡ ಹಾಕಿಕೊಂಡು. ಸಂಗೀತ ವಾದ್ಯಗಳೊಂದಿಗೆ, ರಾತ್ರಿ ಹೊತ್ತಾದರೆ ನೈಸರ್ಗಿಕ ದೊಂದಿ-ದೀಪಗಳೊಂದಿಗೆ, ಅಷ್ಟ ದಿಕ್ಪಾಲಕರ ಸಂಕೇತದ ಬಲಿ ಕಲ್ಲುಗಳಿಗೆ ಅನ್ನ ಪತ್ರ ಪುಷ್ಪಾದಿಗಳನ್ನು ಹಾಕುತ್ತಾ ದೇಗುಲಕ್ಕೆ (ಗರ್ಭಗುಡಿಗೆ) ಪ್ರದಕ್ಷಿಣೆ ಬರುವ ಸಾಂಪ್ರದಾಯಿಕ ಆಲಂಕಾರಿಕ ಆಚರಣೆ."

ಮೇಲಿನ ವಿವರಣೆಯಲ್ಲಿ ಒಂದೆರಡು ಟಿಪ್ಪಣಿಗಳನ್ನು ಸೇರಿಸಿದರೆ ಇನ್ನಷ್ಟು ಮನದಟ್ಟಾಗಬಹುದು:

(ಅ)." ಪ್ರದಕ್ಷಿಣೆ" ಅಂದರೆ ಅಂಗಣದಲ್ಲಿ ಗಡಿಯಾರದ ಮುಳ್ಳಿನಂತೆ clockwise ಸುತ್ತು ಬರುವುದು.

(ಆ)." ಮುಖವಾಡ "ವನ್ನು ಭೂತದ ಪಾತ್ರಧಾರಿ ಹಾಕಿಕೊಳ್ಳುವುದುಂಟು. ಭೂತ ಪಾತ್ರಧಾರಿ ಕೈಯಲ್ಲಿ ಝಳಪಿಸುವ ಕಡ್ಸಲೆ (ಖಡ್ಗ) ಹಿಡಿದು ದೇವರ ವಿಗ್ರಹ ತಲೆಯ ಮೇಲೆ ಹೊತ್ತು ಪ್ರದಕ್ಷಿಣಾಕಾರದಲ್ಲಿ ಗುಡಿಗೆ ಸುತ್ತು ಬರುತ್ತಿರುವ ಅರ್ಚಕರ ಎದುರು ಅಭಿಮುಖವಾಗಿ ಆವೇಶಭರಿತನಾಗಿ ಕುಣಿಯುತ್ತಾ ಬಲಿ ಮೇಳದೊಂದಿಗೆ ಹಿಮ್ಮುಖವಾಗಿ ನಡೆಯುತ್ತಾ ಸುತ್ತು ಬರುತ್ತಾನೆ.

**

ಪ್ರಕೃತಿಯಲ್ಲಿ ತನಗಿಂತಲೂ ಮಿಗಿಲಾದ ಶಕ್ತಿಗಳಿವೆ, ಅವುಗಳಿಗೆ ಅನುಸರಿಸಿಕೊಂಡು ಹೋದರೆ ಬಾಳು ಹೆಚ್ಚು ಸಮಪರ್ಕ ಮತ್ತು ಶಿಸ್ತು ಬದ್ಧವಾಗುತ್ತದೆ ಎಂದು ಆದಿಮಾನವ ನಂಬಿದ ಕಾರಣ ಆರಾಧನಾ ಪದ್ದತಿಗಳು ಹುಟ್ಟಿಕೊಂಡವು.

ಕರಾವಳಿಯಲ್ಲಿ ಪೂರ್ವೇತಿಹಾಸದ ಕಾಲದಿಂದಲೂ ಇದ್ದದ್ದು ಭೂತಾರಾಧನೆ. ಭೂತಗಳೆಂದರೆ ಭೂತಕಾಲದಲ್ಲಿ (ಹಿಂದೆ) ಬದುಕಿದ್ದ ಹಾಗೂ ಸತ್ತ ಮೇಲೂ ನಮ್ಮ ನಡುವೆ ಇವೆಯೆಂದು ನಂಬಲಾದ ಶಕ್ತಿಗಳು. ಜಗತ್ತಿನ ಎಲ್ಲಾ ಆರಂಭದ ನಾಗರೀಕತೆಗಳು ಇಂತಹ ಪರಿಕಲ್ಪನೆ ಮತ್ತು ಆರಾಧನೆಗಳನ್ನು ನಡೆಸಿಕೊಂಡು ಬಂದಿವೆ. ನಿಗೂಢ ಶಕ್ತಿಯಂತೆ ಅಚಾನಕಾಗಿ ಕಚ್ಚಿ ಸಾಯಿಸುವ, ಹೆಡೆ ಅಗಲಿಸಿ ಹೆದರಿಕೆ ಹುಟ್ಟಿಸುವ ಸರ್ಪ/ನಾಗ ಕೂಡ ಆದಿವಾಸಿಗಳ ಆರಾಧನೆಯ ಶಕ್ತಿಯಾಯಿತು.

ದೈವಿಕ ಶಕ್ತಿಗಳ ದೈವಾರಾಧನೆ ಮುಂದುವರಿದು ದೇವತೆಗಳ ಪರಿಕಲ್ಪನೆ ಮತ್ತು ಆರಾಧನೆ ಆರಂಭವಾಯಿತು.

**

ಕಂದ-ಕುಕ್ಕೆ-ಕುಮಾರ-ಸುಬ್ರಮಣ್ಯ- ಸ್ಥಾನಿಕರು

ಸಾಮಾನ್ಯ ಶಕೆಯ ಆರಂಭದ ಶತಮಾನಗಳ ಕಾಲದಲ್ಲಿ ಕರಾವಳಿಯಲ್ಲಿ ಕಂದ (> ಸ್ಕಂದ) ನ ಅಥವಾ ಕುಮಾರನ ಆರಾಧನೆ ರೂಡಿಯಲ್ಲಿ ಇದ್ದಂತೆ ಕಂಡು ಬರುತ್ತದೆ. ಕಂದನ ಕುಮಾರನ ಹೆಸರಿನ ಊರುಗಳು ನದಿಗಳು (ಕಂದಾವರ, ಕುಮಾರ ಪರ್ವತ, ಕುಮಾರಧಾರ) ಈ ಕಾಲಕ್ಕೆ ಸೇರಿದವಾಗಿರಬಹುದು. ಆದಿವಾಸಿಗಳ ಪದ "ಕುಕ್ಕೆ"(=ಮಗು) ಕೂಡಾ ಕಂದ /ಕುಮಾರನ ಆರಾಧನೆಯನ್ನು ಸೂಚಿಸುತ್ತದೆ. ತಮಿಳು ಪ್ರದೇಶಗಳ ಮುರುಗ ಆರಾಧನೆ ಕೂಡಾ ಇದೆ ಕಾಲಘಟ್ಟಕ್ಕೆ ಸೇರಿರಬಹುದು. ಶಿವಳ್ಳಿ ಮುಂತಾದ ಶಿವನ ಆರಾಧನೆಯ ಊರುಗಳೂ ಅದೇ ಕಾಲದಲ್ಲಿ ಇದ್ದಂತಿವೆ.

ನಾಗಾರಾಧಕರನ್ನು ಕಂದನ ಆರಾಧನೆಗೆ ಒಲಿಸುವುದು ಆ ಕಾಲದ ಸವಾಲು ಆಗಿರಬಹುದು. ಆದುದರಿಂದ ನಾಗ ಮತ್ತು ಕಂದ ಇಬ್ಬರನ್ನೂ ಸೇರ್ಪಡೆ ಮಾಡಿ ಸಮೀಕರಿಸಿದ ಸುಬ್ರಮಣ್ಯನ ಆರಾಧನೆ ಆರಂಭವಾಯಿತು. ಆಗಿನ ಕಾಲದಲ್ಲಿ ದೇವಸ್ಥಾನಗಳಲ್ಲಿ ಪೂಜಾಕಾರ್ಯಗಳನ್ನು ನಡೆಸುತಿದ್ದವ ಬ್ರಾಹ್ಮಣರ ಸಂತತಿಗೆ ಕದಂಬ ಕಾಲಘಟ್ಟದ ನಂತರ "ಸ್ಥಾನಿಕರು" ಎಂಬ ಹೆಸರು ರೂಡಿಗೆ ಬಂದಿದೆ. ಸ್ಥಾನಿಕ ಕುಟುಂಬಗಳ ಹಿರಿಯರಲ್ಲಿ ಗತಕಾಲದ ಸಂಪ್ರದಾಯಗಳ ಕುರಿತಾದ ಐತಿಹ್ಯಗಳು ದೊರೆಯಬಹುದು.

ಅದೇ ಕಾಲದಲ್ಲಿ ಕರಾವಳಿಯಲ್ಲಿ ಬೌಧ ಮತ್ತು ಜೈನ ಧರ್ಮಗಳ ಪ್ರವೇಶವೂ ಆಗಿತ್ತು. ಧರ್ಮ ಶ್ರದ್ದೆಗಳ ನಡುವೆ ಭಕ್ತರನ್ನು ಸೆಳೆಯಲು ಪೈಪೋಟಿಯೂ ಆರಂಭವಾಗಿರಬೇಕು.

ಚಿತ್ರ: ದೇವರ ಪಲ್ಲಕಿ

**

ಕದಂಬ ಕಾಲ

ಸಾಮಾನ್ಯ ಶಕೆಯ ಮೂರನೆಯ ಶತಮಾನ. ಕರಾವಳಿಯಲ್ಲಿ ನಂದ ಅರಸರ ಕೈಕೆಳಗೆ ದುಡಿದು ಕಡಲ ವ್ಯಾಪಾರ ಮಾಡುತ್ತಾ ಬದುಕಿಗಾಗಿ ಹೋರಾಡುತ್ತಾ, ಕಡಲುಗಳ್ಳರೆಂದು ಅವಮಾನಿತರಾಗಿ ರೋಸಿಹೋಗಿದ್ದ ಕದಂಬರಿಗೆ ತಾವು ಒಂದೆಡೆ ನೆಲೆಯೂರಿ ರಾಜರಂತೆ ಸುಖಜೀವನ ನಡೆಸಬೇಕೆಂಬ ಆಸೆ ಹುಟ್ಟಿರಬೇಕು. ಸಹ್ಯಾದ್ರಿಯ ಮಡಿಲ ಮಲೆನಾಡಲ್ಲಿ ಅವರಿಗೆ ಕಡಲ ರಪ್ತು ವ್ಯಾಪಾರಗಳಿಗೆ ಸಾಮಾಗ್ರಿ ಒದಗಿಸುತಿದ್ದ ಬಂದುಮಿತ್ರರು, ಸ್ನೇಹಿತರು ಇದ್ದರು. ಮಲೆನಾಡಿನ ಬನವಾಸಿಯಲ್ಲಿ ಕದಂಬ ರಾಜ್ಯದ ಅಸ್ತಿಭಾರ ಹಾಕಿದರು. ಸಹಾಯಕ್ಕಾಗಿ ಆಳುಪ ಸ್ನೇಹಿತರನ್ನೂ ಕರೆದೊಯ್ದರು. ಕದಂಬರ ಮೈರ(>ಮಯೂರ)ನಿಗೆ ವಿದ್ಯೆ ಕಲಿಯ ಬೇಕೆಂಬಾಸೆ. (ಆದಿವಾಸಿಗಳಲ್ಲಿ ಈಗಲೂ ಮೈರ (ಗಂಡು)/ಮೈರೆ (ಹೆಣ್ಣು) ಎಂಬ ಹೆಸರುಗಳಿವೆ). ಮಯೂರ ವಿದ್ಯೆ ಕಲಿಯಲು ಕಂಚಿಗೆ ಹೋದ. ಅವರು ಸೇರಿಸಿಕೊಳ್ಳಲಿಲ್ಲ. ಮರಳಿ ಬಂದ ಛಲವಾದಿ ಮಯೂರ ಉತ್ತರದ ಅಹಿಛತ್ರದಿಂದ ವಿದ್ಯೆ ಕಲಿತ ಬ್ರಾಹ್ಣಣ ಯುವಕರ ತಂಡವನ್ನೆ ಕರೆದುಕೊಂಡು ಬಂದ. ಅಂದಿನ ಕಾಲದಲ್ಲಿ ವಿದ್ಯೆಯೆಂದರೆ ವೇದಾಗಮಗಳು ಮತ್ತು ಸಂಸ್ಕೃತ. ಕದಂಬ ಅರಸ ವಿದ್ಯೆ ಕಲಿಸುವ ಕೇಂದ್ರಗಳನ್ನು ಸ್ಥಾಪಿಸಿದ. ಮಲೆನಾಡು ಕರಾವಳಿಯ ದೇವಸ್ಥಾನಗಳಲ್ಲಿ ಪೂಜೆ ವಿಧಿಗಳು ಸಾಂಗವಾಗಿ ನಡೆಯುವ ಏರ್ಪಾಡು ಮಾಡಿದ.

ಹೀಗೆ ಕರಾವಳಿಯ ದೇವಸ್ಥಾನಗಳಲ್ಲಿ ಬದಲಾವಣೆಯ ಪರ್ವ ಆರಂಭವಾಯಿತು. ಹೊಸದಾಗಿ ಉತ್ತರದಿಂದ ಬಂದ ಬ್ರಾಹ್ಮಣರ ದೇವಸ್ಥಾನಗಳ ಆಡಳಿತೆಯಲ್ಲಿ,ಆ ಕಾಲದ ಹಿಂದೆ ಇದ್ದ ಸ್ಥಳಿಯ ಬ್ರಾಹ್ಮಣರು ಪೂಜೆ ಹೊರತಾಗಿ ದೇವಸ್ಥಾನದ ಇತರ ಕೆಲಸಗಳನ್ನು ನಿರ್ವಹಿಸಬೇಕಾಯಿತು.ಅವರಿಗೆ ಸ್ಥಾನಿಕ (locals) ರೆಂದು ಹೆಸರಾಯಿತು.

ಚಿತ್ರ= ರಥೋತ್ಸವ

**

ಆರಾಧನೆ ಶೈಲಿಗಳ ವಿಕಾಸ

ಕದಂಬರ ಕಾಲಘಟ್ಟದಲ್ಲಿ ಕರಾವಳಿಯಲ್ಲಿ ಒಂದು ಕಡೆ ಭೂತಾರಾಧನೆ,ನಾಗಾರಾಧನೆ, ಪಂಜುರ್ಲಿಯ ಆರಾಧನೆ ರೂಡವಾಗಿದ್ದರೆ, ಇನ್ನೊಂದೆಡೆ ಬೌಧ ಮತ್ತು ಜೈನ ಧರ್ಮಗಳ ಸೆಳೆತ. ಇವುಗಳ ನಡುವೆ ಜನ ಸಾಮಾನ್ಯರನ್ನು ಆಕರ್ಷಿಸಲು ದೇವಸ್ಥಾನಗಳು ತಮ್ಮ ಆರಾಧನಾ ಶೈಲಿಗಳನ್ನು ಹೆಚ್ಚು ವರ್ಣಮಯ ಮತ್ತು ಮನಮೋಹಕಗೊಳಿಸ ಬೇಕಾದ ಅಗತ್ಯ ಇತ್ತು. ಹಾಗೆ ದೇವಸ್ಥಾನಗಳಲ್ಲಿ ರೂಪುಗೊಂಡ ಮನಸ್ಸನ್ನು ಮೋಡಿಗೊಳಿಸುವ ಆರಾಧನಾ ಸಂಪ್ರದಾಯಗಳು - ನಿತ್ಯ ಪೂಜೆಗಳು, ಬಲಿ ಉತ್ಸವಗಳು, ದೀಪೋತ್ಸವ ಮತ್ತು ರಥೋತ್ಸವದ ಜಾತ್ರೆಗಳು.

ಇರುವ ಇತಿಹಾಸದ ಬೆಳಕಿನಲ್ಲಿ ನೋಡುವಾಗ ಸಾಮಾನ್ಯ ಶಕೆಯ ನಾಲ್ಕನೆಯ ಶತಮಾನದಿಂದ ಹದಿನೈದನನೆಯ ಶತಮಾನಗಳ ನಡುವೆ ಈ ಸಂಪ್ರದಾಯಗಳು ರೂಪುಗೊಂಡಿರಬಹುದು ಅನಿಸುತ್ತದೆ.

ವಿದ್ಯುದೀಪಗಳು ಬರುವ ಮೊದಲು ರಾತ್ರಿಕಾಲದ ಬಲಿ ಉತ್ಸವಗಳು ತೂಟೆ/ದೊಂದಿಗಳ ಬೆಳಕಿನಲ್ಲಿ ನಡೆಯುತಿದ್ದವು. ಈಟಿಯಂತಿರುವ ಉದ್ದನೆಯ ಕೋಲುಗಳ ತುದಿಯಲ್ಲಿ ಎಣ್ಣೆಯಲ್ಲಿ ಮುಳುಗಿಸಿದ ಹತ್ತಿ ಬಟ್ಟೆಯ ಸಿಂಬಿಗಳನ್ನು ("ಹಿಲಾಲು") ಹೊತ್ತಿಸಿ ಬಲಿ ಸುತ್ತಲು ಬೀಕಾದ ಬೆಳಕಿನ ವ್ಯವಸ್ಥೆ ಮಾಡುತಿದ್ದರು. ಇಂತಹ ಹತ್ತು-ಇಪ್ಪತ್ತು " ಹಿಲಾಲು " ಗಳನ್ನು ಹಿಡಿದ ಯುವಕರು ಬಲಿತಂಢದೊಂದಿಗೆ ಸುತ್ತು ಬರುತಿದ್ದರು. ಗಮನಿಸಿ: ಹಿಲಾಲು ಪದ ಅರಾಬಿಕ್ ಮೂಲದ್ದು.

ಕರಾವಳಿಯ ಬಲಿ ಉತ್ಸವ, ರಥೋತ್ಸವಗಳಲ್ಲಿ ಬಳಸುವ ದೇವರ ವಿಗ್ರಹ ಆಧರಿಸುವ ಅರ್ಧಚಂದ್ರಾಕಾರದ "ಪ್ರಭಾವಳಿ"ಯ ರಚನೆ ಕಲಾತ್ಮಕ ಹಾಗೂ ಸುಂದರವಾಗಿದೆ. ಇದರ ವಿಕಾಸದ ಹಿಂದಿನ ಹಂತವನ್ನು ಉತ್ತರ ಕನ್ನಡದ ಬಂಡಿ ಉತ್ಸವಗಳಲ್ಲಿ ಹೊರುವ "ಕಳಸ"ಗಳಲ್ಲಿ ನೋಡಬಹುದು.

ಕಳಸ, ಅಂಕೋಲ, ಉತ್ತರ ಕನ್ನಡ



: )

Comments

Popular posts from this blog

೩. ಜೋಗುಳ- ಒಂದು ಶಬ್ಧ ಮಿಮಾಂಸೆ

15. ದಕ್ಕಣ ಪೀಠಭೂಮಿ ಮತ್ತು ದಕ್ಕಣ ಟ್ರಾಪ್ಸ್( ಲಾವಾಭೂಮಿ)

13.ಮೂಲದ್ರಾವಿಡ ಭಾಷೆ -ಪ್ರೊಟೊ ದ್ರಾವಿಡಿಯನ್.