16.ರಾಮಸೇತು
ಸಮುದ್ರವನ್ನು ಸಾಮಾನ್ಯವಾಗಿ ಎಲ್ಲರೂ ನೋಡಿರುತ್ತಾರೆ.
ಸಮುದ್ರದ ಮೇಲೆ ಒಂದಷ್ಟು ಕಿಲೋಮೀಟರು ದೂರ ನಡೆದು ಹೋಗಿ ಆಚೆ ದಡ ಸೇರುವ ಕನಸು ಎಂದಾದರೂ ಕಂಡಿದ್ದೀರಾ?
ರಾಮ ಸೇತು ಅಂತಹದೊಂದು ಮಾನವ ನಿರ್ಮಿತ ಸಂಕದಂತೆ ಕಾಣುವ ಒಂದು ವಿಶೇಷವಾದ ಪ್ರಕೃತಿಯ ಸಹಜ ರಚನೆ.
ತಮಿಳುನಾಡಿನ ರಾಮೇಶ್ವರದ ಮೂಡಣ ಕಡಲ ತೀರದ ಪಂಬನ್ ದ್ವೀಪದಿಂದ ಶ್ರೀಲಂಕಾದ ವಾಯುವ್ಯ ಮೂಲೆಯ ಮನ್ನಾರಿಗೆ ಜೋಡಿಸುವ ಕಡಲ ಸೇತುವೇ ರಾಮಸೇತು. ರಾಮಸೇತುವಿನ ಇರುವಿಕೆ ಮೂರು- ನಾಲ್ಕು ಸಾವಿರ ವರ್ಷಗಳಿಂದಲೂ ಭಾರತೀಯರಿಗೆ ಪರಿಚಿತ.
ರಾಮಸೇತು
ರಾಮಾಯಣದಲ್ಲಿ ರಾಮ ಲಕ್ಷ್ಮಣ ಸೀತೆಯರು ವನವಾಸದಲ್ಲಿದ್ದಾಗ ನಡೆದ ಸೀತೆಯ ಅಪಹರಣದ ಪ್ರಸಂಗದ ಬಗ್ಗೆ ಕೇಳಿರುತ್ತೀರಿ. ಅಪಹರಣ ಮಾಡಿದ ಸೀತೆಯನ್ನು ರಾವಣ ತನ್ನ ಪುಷ್ಪಕ ವಿಮಾನದಲ್ಲಿ ಲಂಕೆಗೆ ಕರೆದೊಯ್ದನೆಂಬ ಮಾಹಿತಿ ಜಟಾಯು ಪಕ್ಷಿಯಿಂದ ರಾಮ ಲಕ್ಷ್ಮಣರಿಗೆ ದೊರೆಯುತ್ತದೆ. ಲಂಕೆಯಿಂದ ಸೀತೆಯನ್ನು ರಕ್ಷಿಸಿ ಕರೆತರಲು ರಾಮ ಲಕ್ಷ್ಮಣರು ವಾನರರ ಸಹಾಯ ಕೋರುತ್ತಾರೆ.
ವಾನರ ಸೇನೆ ಕಡಲಿಗೆ ಕಲ್ಲು ದಿಮ್ಮಿಗಳನ್ನು ಹಾಕಿ ಜೋಡಿಸಿ ರಾಮೇಶ್ವರದಿಂದ ಕಡಲ ಮಾರ್ಗದಲ್ಲಿ ಲಂಕಾದವರೆಗೆ ಒಂದು ಸೇತುವೆ ನಿರ್ಮಿಸಿದರೆಂದು ರಾಮಾಯಣ ಹೇಳುತ್ತದೆ. ಇದು "ರಾಮಸೇತು" ಎಂದು ಪ್ರಸಿದ್ದವಾಗಿದೆ. ರಾಮಾಯಣದ ಘಟನೆಗಳು ನಾಲ್ಕು-ಐದು ಸಹಸ್ರ ವರ್ಷಗಳ ಹಿಂದೆ ನಡೆದಿರಬಹುದೆಂದು ಬಹಳ ಮಂದಿ ನಂಬುತ್ತಾರೆ.
ಆದಂ ಸೇತುವೆ
ಇನ್ನು ಕೆಲವು ಧಾರ್ಮಿಕ ನಂಬಿಕೆಗಳ ಪ್ರಕಾರ ಮೊದಲ ಮಾನವ ಆದಂ ಶ್ರೀಲಂಕಾದಿಂದ ರಾಮೇಶ್ವರದ ಕಡೆಗೆ ಈ ಕಡಲ ಸೇತುವೆಯ ಮೇಲೆ ನಡೆದು ಹೋದನೆಂದು ಹೇಳಲಾಗಿದೆ. ಹಾಗಾಗಿ ಆದಂ ಸೇತುವೆ ಎನ್ನುವ ಹೆಸರೂ ಇದೆ. ಅಂದರೆ, ಮಧ್ಯ ಪ್ರಾಚ್ಯದಲ್ಲಿ ಆದಮನ ಪರಿಕಲ್ಪನೆ ಹರಡುತಿದ್ದ ಕಾಲದಲ್ಲಿ ಭಾರತದ ರಾಮಸೇತುವಿನ ಪ್ರಸಿದ್ದಿ ಅಲ್ಲೆಲ್ಲಾ ಹರಡಿರುವಂತಿದೆ.
ನಡೆದ ಸಂಶೋಧನೆಗಳು
ಇದುವರೆಗೆ ನಡೆದ ಹಾಗೂ ಉದ್ದೇಶಿತ ಸಂಶೋಧನೆಗಳ ಬಗ್ಗೆ ಪೂರ್ಣಿಮಾ ಮತ್ತು ವಿಭಾಕರ್ ವಿವರಿಸಿದ್ದಾರೆ. ಬಗೆಬಗೆಯ ಸಂಶೋಧನೆಗಳು ನಡೆದಿವೆ, ಇನ್ನೂ ನಡೆಯಲಿವೆ. ರಾಮಸೇತುವಿನ ದಾರಿಯಲ್ಲಿ ಹವಳದ ದಿಬ್ಬಗಳು ಕಂಡಿವೆ. ಹವಳ ಎಂದರೆ ರಾಸಾಯನಿಕವಾಗಿ ಕ್ಯಾಲ್ಶಿಯಂ ಕಾರ್ಬೊನೇಟ್. ಹವಳಗಳು ಹುಟ್ಟುವುದು ಕಡಲಿನ ನೀರಿನಲ್ಲಿಯೇ. (ಅಂದರೆ ಇದು ವಾನರರು ತಂದು ಹಾಕಿದ ಬಂಡೆಗಳಲ್ಲ!). ಇಸ್ರೋದವರು ೧೦೩ ಅಂತಹ ಹವಳ ದಿಬ್ಬಗಳನ್ನು ಗುರುತಿಸಿದ್ದಾರೆ.ಕೆಲವು ಮಾದರಿ ಹವಳ ಗಳ ರೇಡಿಯೋಕಾರ್ಬನ್ ಕಾಲನಿಗದಿ ಕೂಡಾ ಮಾಡಲಾಗಿದೆ. ಆ ಹವಳಗಳು ೪೦೨೦+/-೧೬೦ ವರ್ಷಗಳ ಹಿಂದೆ ಹುಟ್ಟಿವೆ ಎಂದು ತಿಳಿದುಕೊಳ್ಳಲಾಯಿತು.
ಅದೇ ರೀತಿ ರಾಮಸೇತುವಿನ ದಾರಿಯಲ್ಲಿ ಮರಳುಗಲ್ಲು ಮತ್ತು ಕಂಗ್ಲಾಮರೇಟ್ (conglomerate) - ಅಂತಹ ಜಲಜಶಿಲೆಗಳು ಕಂಡಿವೆ. ಜಲಜಶಿಲೆಗಳು ನೀರಿನಡಿಯಲ್ಲಿ ಉತ್ಪತ್ತಿಯಾಗುವ ಕಾರಣ ಅವುಗಳು ಕಡಲಿನಲ್ಲಿಯೇ ಸಹಜವಾಗಿ ಹುಟ್ಟಿಕೊಂಡವು : ವಾನರರು ಹೊತ್ತು ತಂದು ಹಾಕಿದ ಬಂಡೆಗಳಲ್ಲ ಎಂದು ತೀರ್ಮಾನಿಸಬಹುದು.
ಭೂವಿಜ್ಞಾನ ಹೇಳುವುದೇನು?
ಸುಮಾರು ೧೩೦ ಮಿಲಿಯ( ೧೩ ಕೋಟಿ) ವರ್ಷಗಳ ಹಿಂದೆ ಭೂಮಿಯ ಮೇಲೆ ಅಖಂಡವಾಗಿದ್ದ ಖಂಡಗಳು ಒಡೆದು ತುಂಡುಗಳು ವಿವಿಧ ನಿರ್ದಿಷ್ಟ ದಿಕ್ಕುಗಳಲ್ಲಿ ಚಲಿಸಲಾರಭಿಸಿದವು. ಭೂಭಾಗಗಳ ಈ ಅಗಲುವಿಕೆಯ ಪ್ರಕ್ರಿಯೆಯಲ್ಲಿ, ಭರತ ಖಂಡದಿಂದ ಶ್ರೀಲಂಕೆ ಬೇರ್ಪಡುವಾಗ ರಬ್ಬರಿನಂತೆ ಎಳೆದಾಡಿದ ಪರಿಣಾಮವಾಗಿ ಈ ರಾಮ ಸೇತುವಿನ ರಚನೆ ಹುಟ್ಟಿಕೊಂಡಿತು.
ರಾಮೇಶ್ವರದಿಂದ ಮನ್ನಾರಿನವರೆಗಿನ ಭೂರಚನೆ ಗಮನಿಸಿದರೆ ರಾಮೇಶ್ವರದ ಕಡಲ ಕರೆಯ ನೆಲಭಾಗ ಕೊಕ್ಕಿನ ಆಕಾರದಲ್ಲಿ ಚೂಪಾಗಿರುವುದು ಕಾಣುತ್ತದೆ. ಅದೇ ರೀತಿ ಮನ್ನಾರಿನ ಬಳಿ ಇನ್ನೊಂದು ಕೊಕ್ಕಿನಂತಹ ಭೂರಚನೆಯನ್ನು ಕಾಣಬಹುದು. ಭೂಪಟದಲ್ಲಿ ಇವೆರೆಡರ ನಡುವೆ ಸಾಲಾಗಿ ಜೋಡಿಸಿಟ್ಟ ಬಿಂದುಗಳಂತೆ ಕಾಣುವುದೇ ರಾಮ ಸೇತು. ಇದರ ಉದ್ದ ಸುಮಾರು ೩೦ ಕಿಲೋಮೀಟರುಗಳು. ಈ ಬಗೆಯ ಸಹಜ ಭೂರಚನೆಗಳನ್ನು ಟೊಂಬೋಲೊ tombolo ಅನ್ನುವುದು ಉಂಟು.
(ಉದಾಹರಣೆಗೆ ಮುರುಡೇಶ್ವರದಲ್ಲಿ ಕೂಡಾ ಮೊದಲು ಇಂತಹದೊಂದು ಸಣ್ಣ ರಚನೆ ಇತ್ತು. ಕೊಕ್ಕಿನಂತಹ ರೂಪದ ಕಡಲಕರೆಯ ತುದಿಯಲ್ಲೊಂದು ಚಿಕ್ಕ ದ್ವೀಪ. ದೇವಸ್ಥಾನ ಕಟ್ಟುವಾಗ ನಡುವಿನ ನೀರಿದ್ದ ಖಾಲಿ ಸ್ಥಳವನ್ನು ಕೃತಕವಾಗಿ ತುಂಬಿಸಿದ್ದಾರೆ.)
೧೪೮೦ ರವರೆಗೆ ಈ ರಾಮ ಸೇತು ನಡೆದುಕೊಂಡು ಹೋಗಬಹುದಾದಷ್ಟು ನೀರಿನ ಆಳದಲ್ಲಿ ಇತ್ತು, ಎನ್ನುತ್ತವೆ, ರಾಮೇಶ್ವರ ದೇವಸ್ಠಾನದ ದಾಖಲೆಗಳು. ಈಗ ರಾಮಸೇತುವಿನ ಮೇಲಿನ ಕಡಲಿನ ಆಳ ೧ ರಿಂದ ೧೦ ಮೀಟರುಗಳು. ಕೆಲವೆಡೆ ಕಡಲ ನೀರಿನ ಆಳ ೯೦ ಮೀಟರಿನಷ್ಟು ಇದೆ. ವಿವಿಧ ನೈಸರ್ಗಿಕ ಕಾರಣಗಳಿಂದ ಕಡಲಿನ ನೀರಿನ ಮಟ್ಟ ಬದಲಾಗುವುದು ಉಂಟು.
ಒಟ್ಟಿನಲ್ಲಿ ಹೇಳುವುದಾದರೆ, ರಾಮಸೇತುವಿನ ಭೂಭಾಗ ನಿಸರ್ಗದ ಒಂದು ಸಹಜವಾದ ಭೂರಚನೆ.
ಅದರ ಮೇಲೆ ಆಳ ಕಡಿಮೆ ಇರುವಲ್ಲಿ ಬಂಡೆ ಕಲ್ಲುಗಳನ್ನು ತುಂಬಿಸಿ ವಾಲ್ಮೀಕಿ ವರ್ಣಿಸಿದ "ರಾಮಸೇತು" ವನ್ನು ವಾನರರು ರೂಪಿಸಿದರೆ?
ಈ ವಿಚಾರವನ್ನು ಸಂಶೋಧಕರು ಪರಿಶೀಲಿಸಬೇಕಾಗಿದೆ.
ಹೇಗೆ?
೧. ರಾಮಸೇತುವಿನ ಮೇಲೆ ಮತ್ತು ಇಕ್ಕೆಲಗಳಲ್ಲಿ ಕಡಲಿನಲ್ಲಿ ಸಹಜವಾಗಿ ಉತ್ಪತ್ತಿಯಾಗಿರದ ಬಂಡೆಯ ದಿಮ್ಮಿ ಗಳಿವೆಯೇ ಎಂದು ಹುಡುಕುವುದು.
೨. ಇದೇ ಬಗೆಯ ಬಂಡೆಯ ತುಂಡು ದಿಮ್ಮಿಗಳು ದೊರೆಯುವ ಹಾಗೂ ಪ್ರಾಚೀನ ಕಾಲದಲ್ಲಿ ಬಂಡೆ ತುಂಡರಿಸಿ ತೆಗೆದಿರಬಹುದಾದ ಕಲ್ಗಣಿಗಳು ರಾಮೇಶ್ವರದ ಅಸುಪಾಸಿನಲ್ಲಿ ಇವೆಯೋ ಎಂದು ಪರಿಶೀಲಿಸುವುದು. ಮಾಹಿತಿಗಳನ್ನು ವೈಜ್ಞಾನಿಕವಾಗಿ ತುಲನೆ ಮಾಡಿ ನಿರ್ಧರಿಸುವುದು.ಹಾಕಿದ ಬಂಡೆಗಳು ಅವುಗಳ ಗುಣಧರ್ಮಕ್ಕೆ ಅನುಗುಣವಾಗಿ ಕರಗಿ ಹೋಗಿವೆಯೆ, ತೆರೆಗಳ ಹೊಡೆತಕ್ಕೆ ಚದುರಿ ಹೋಗಿವೆಯೇ -ಇಂತಹ ಅಂಶಗಳನ್ನೂ ಪರಿಶೀಲಿಸ ಬೇಕಾಗುತ್ತದೆ.
ವಾನರ ಸೇತು ಒಂದು ಕವಿಸಮಯವೇ?
ಕಡಲಿಗೆ ಬಂಡೆಗಳನ್ನು ಹಾಕಿರುವ ಯಾವುದೇ ಸಾಕ್ಷಾಧಾರ ದೊರೆಯದಿದ್ದರೆ ವಾನರ ಸೇತು ಕಾಮಗಾರಿ ಒಂದು ಕಾಲ್ಪನಿಕ ಕವಿಸಮಯವೆಂದು ತೀರ್ಮಾನಕ್ಕೆ ಬರಬೇಕಾಗುತ್ತದೆ. ಒಬ್ಬ ಲೇಖಕನಿಗೆ ತನ್ನ ಕಥಾನಕವನ್ನು ಇನ್ನಷ್ಟು ರೋಚಕಗೊಳಿಸುವ ಸಲುವಾಗಿ ಫಾಂಟಸಿ ರೂಪಕಗಳನ್ನು ಅಳವಡಿಸಿಕೊಳ್ಳುವ ಸ್ವಾತಂತ್ರ ಇರಬೇಕಲ್ಲವೇ? ಇದರಿಂದ ರಾಮಾಯಣದ ಕಥಾನಕದ ಸಹಜ ಸೊಬಗನ್ನು ಅಸ್ವಾದಿಸುವವರಿಗೆ ಯಾವುದೇ ಭಂಗ ಬರಲಾರದು.
: )
ಚಿತ್ರಗಳು: ಕೃಪೆ :ಗೂಗಲ್ ಅರ್ಥ್ ಮತ್ತು ವಿಕಿಯಿಂದ





Comments
Post a Comment